ಸುಳ್ಳು ಅಂದ್ರೆ ಕಾಂಗ್ರೆಸ್-ಕಾಂಗ್ರೆಸ್ ಅಂದ್ರೆ ಸುಳ್ಳು~ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ!

ಕಾಂಗ್ರೆಸ್ ಗೆಲ್ಲುತ್ತದೆ ಎಂದು ಸಿದ್ದರಾಮಯ್ಯ ಭ್ರಮೆಯಲ್ಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವ್ಯಂಗ್ಯವಾಡಿದ್ದಾರೆ.
ಉಡುಪಿಗೆ ಇಂದು ಭೇಟಿ ನೀಡಿದ ಅವರು, ಆದಿವುಡುಪಿ ಹೆಲಿಪ್ಯಾಡ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಈ ಹಿಂದೆ ಅಧಿಕಾರದಲ್ಲಿದ್ದಾಗಲೂ ನಾವೇ ಬರುತ್ತೇವೆ ಎಂದು ಹೇಳುತ್ತಿದ್ದ ಸಿದ್ದರಾಮಯ್ಯ, ಯಡಿಯೂರಪ್ಪ, ಕುಮಾರಸ್ವಾಮಿ ಮತ್ತೆ ಮುಖ್ಯಮಂತ್ರಿ ಆಗಲಾರರು ಎಂದು ಹೇಳುತ್ತಿದ್ದರು. ಅವರ ಆಡಳಿತ ಶೈಲಿ ನೋಡಿ ಜನ ಕಾಂಗ್ರೆಸ್ ಅನ್ನು ತಿರಸ್ಕರಿಸಿದ್ದಾರೆ ಎಂದ ಬೊಮ್ಮಾಯಿ, ಸಮಾಜವನ್ನು ಒಡೆದು ಆಳುವ ನೀತಿಯಿಂದ ಕರ್ನಾಟಕವನ್ನು ಅಧೋಗತಿಗೆ ತೆಗೆದುಕೊಂಡು ಹೋಗಿದ್ದಾರೆ. ಬರೆದಿಟ್ಟುಕೊಳ್ಳಿ ಸಿದ್ದರಾಮಯ್ಯನವರು ಹೇಳಿದ ಮಾತುಗಳು ಯಾವತ್ತಿಗೂ ಸತ್ಯವಾಗಿಲ್ಲ ಎಂದರು.

ಜೀವನದಲ್ಲಿ ಇಂತಹ ಭ್ರಷ್ಟ ಸರ್ಕಾರ ನೋಡಿಲ್ಲ ಎಂದಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಹೇಳಿಕೆ ಹಾಸ್ಯಸ್ಪದವಾಗಿದ್ದು, ಐವತ್ತು ವರ್ಷ ಪೂರ್ಣ ಭ್ರಷ್ಟ ಸರ್ಕಾರವೇ ಅಧಿಕಾರದಲ್ಲಿತ್ತು. ಕಾಂಗ್ರೆಸ್ ಭ್ರಷ್ಟಾಚಾರದ ಗಂಗೋತ್ರಿ, ಭ್ರಷ್ಟಾಚಾರ ಆರಂಭವಾಗಿರುವುದೇ ಕಾಂಗ್ರೆಸ್ ನಿಂದ, ಕಾಂಗ್ರೆಸ್ ಕಾಲದಲ್ಲಿ ದಾಖಲೆ ಪ್ರಮಾಣದಲ್ಲಿ ಭ್ರಷ್ಟಾಚಾರ ಆಗಿದೆ. ತಮ್ಮ ಆರೋಪ ಮುಚ್ಚಿ ಹಾಕಿಕೊಳ್ಳಲು ಖರ್ಗೆ ಆರೋಪ ಮಾಡುತ್ತಿದ್ದಾರೆ. ಸುಳ್ಳು ಅಂದ್ರೆ ಕಾಂಗ್ರೆಸ್-ಕಾಂಗ್ರೆಸ್ ಅಂದ್ರೆ ಸುಳ್ಳು ಎಂದು ತಿರುಗೇಟು ನೀಡಿದರು.

Leave a Reply