ಸೈಂಟ್ ಮೇರಿಸ್ ದ್ವೀಪದಲ್ಲಿ ಕ್ಲಿಫ್‌ ಡೈವಿಂಗ್!

ಜಿಲ್ಲೆಯಲ್ಲಿ ಪ್ರತಿಬಾವಂತ ಈಜು ಪಟುಗಳಿದ್ದು, ರಾಷ್ಟ ಮಟ್ಟ ಈಜು ಸ್ಪರ್ಧೆ ಯನ್ನು ಮಲ್ಪೆಯಲ್ಲಿ ಆಯೋಜಿಸುವ ಮೂಲಕ ಸ್ಥಳಿಯ ಪ್ರತಿಭೆ ಗೆ ಪ್ರೋತ್ಸಾಹ ದೊರೆಯಲಿದೆ ಎಂದು ಶಾಸಕ ರಘುಪತಿ ಭಟ್ ಹೇಳಿದರು.

ಅವರು ಶನಿವಾರ , ಮಲ್ಪೆ ಬೀಚ್ ನಲ್ಲಿ , ಜಿಲ್ಲಾಡಳಿತ, ಸ್ವಿಮ್ಮಿಂಗ್ ಫೆಡರೇಷನ್ ಆಫ್ ಇಂಡಿಯಾ, ಕರ್ನಾಟಕ ಸ್ವಿಮ್ಮಿಂಗ್ ಅಸ್ಸೋಸಿಯೇಶನ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ರಜತ ಉಡುಪಿ- ಬೀಚ್ ಉತ್ಸವ ಪ್ರಯುಕ್ತ ನಡೆದ ರಾಷ್ಟ್ರ ಮಟ್ಟದ ಒಪನ್ ವಾಟರ್ ಈಜು ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕರಾವಳಿಯ ಮೀನುಗಾರರೆಲ್ಲರೂ ಈಜುಪಟುಗಳೇ ಆದರೂ ಈಜು ಕ್ರೀಡೆಗಳಲ್ಲಿ ಭಾಗವಹಿಸುವುದಿಲ್ಲ. ಮುಂದೆ ಮೀನುಗಾರರ ಮಕ್ಕಳಿಗೆ ನುರಿತ ಈಜು ತಜ್ಞರಿಂದ ತರಬೇತಿ ಕೊಡಿಸಿ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಗೆಲ್ಲುವಂತೆ ಕಾರ್ಯಕ್ರಮ ರೂಪಿಸಲಾಗುವುದು ಎಂದರು.

ಉಡುಪಿಯಲ್ಲಿ ವಾಟರ್ ಸ್ಪೋರ್ಟ್ಸ್‌ ಕ್ರೀಡೆಗಳ ಆಯೋಜನೆಗೆ ಜಾಗದ ಕೊರತೆ ಇಲ್ಲ. ಕಣ್ಣು ಹಾಯಿಸಿದಷ್ಟು ದೂರವೂ ಸಮುದ್ರ ಹಾಗೂ ನದಿಯ ತೀರ ಕಾಣಬಹುದು. ನಿಸರ್ಗದತ್ತ ಕೊಡುಗೆಗಳನ್ನು ಬಳಸಿಕೊಂಡು ಫೆಬ್ರುವರಿ ಅಂತ್ಯದಲ್ಲಿ ಕಯಾಕಿಂಗ್ ಹಾಗೂ ಡ್ರಾಗನ್ ಬೋಟ್ ಸ್ಪರ್ಧೆ, ಮಾರ್ಚ್‌ನಲ್ಲಿ ಸ್ಟಾಂಡ್ ಅಪ್ ಪೆಡ್ಲಿಂಗ್ ಆಯೋಜಿಸಲಾಗಿದೆ ಎಂದರು.

ಜಿಲ್ಲಾಧಿಕಾರಿ ಕೂರ್ಮರಾವ್ ಎಂ ಮಾತನಾಡಿ ಸುಂದರ ಬೀಚ್‌ಗಳು, ವಿಸ್ತಾರವಾದ ಕಡಲ ತೀರಗಳು, ಪಶ್ಚಿಮಘಟ್ಟದ ಸೌಂದರ್ಯವನ್ನು ಹೊಂದಿರುವ ಉಡುಪಿ ಪ್ರಾಕೃತಿಕವಾಗಿ ಶ್ರೀಮಂತವಾಗಿದ್ದು ಪ್ರವಾಸೋದ್ಯಮ ಕ್ಷೇತ್ರದಲ್ಲಿ ವಿಶ್ವದ ಗಮನ ಸೆಳೆಯಲು ಬೇಕಾದ ಎಲ್ಲ ಸೌಲಭ್ಯಗಳನ್ನು ಪ್ರಕೃತಿದತ್ತವಾಗಿಯೇ ಪಡೆದುಕೊಂಡಿದೆ.

ಧಾರ್ಮಿಕ ಹಾಗೂ ನೈಸರ್ಗಿಕ ತಾಣಗಳನ್ನು ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾಗಿ ಬಳಸಿಕೊಳ್ಳಲು ಜಿಲ್ಲಾಡಳಿತ ಬದ್ಧವಾಗಿದ್ದು, ಅದರ ಭಾಗವಾಗಿ ಉಡುಪಿ ರಜತ ಉತ್ಸವ ಹಾಗೂ ಮಲ್ಪೆ ಬೀಚ್ ಉತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ನಿರೀಕ್ಷೆಯಂತೆ ಪ್ರವಾಸಿಗರಿಂದ ಉತ್ತಮ ಸ್ಪಂದನ ವ್ಯಕ್ತವಾಗುತ್ತಿದೆ ಎಂದರು.

ನುರಿತ ಈಜುಪಟುಗಳನ್ನು ಹೊಂದಿರುವ ಕರ್ನಾಟಕ ಈಜು ಕ್ರೀಡೆಯಲ್ಲಿ ದೇಶಕ್ಕೆ ಮಾದರಿಯಾಗಿದೆ. ಅದೇರೀತಿ ಉಡುಪಿ ಕೂಡ ರಾಜ್ಯಕ್ಕೆ ಮಾದರಿಯಾಗಿ ಬೆಳೆಯಬೇಕು. ಈ ನಿಟ್ಟಿನಲ್ಲಿ ರಾಷ್ಟ್ರೀಯ, ಅಂತರ ರಾಷ್ಟ್ರೀಯ ಈಜು ಸ್ಪರ್ಧೆಗಳು ನಡೆಯಬೇಕು. ಉಡುಪಿಯಲ್ಲಿ ಏಷ್ಯನ್ ಸ್ವಿಮ್ಮಿಂಗ್ ಚಾಂಪಿಯನ್ ಷಿಪ್ ಆಯೋಜನೆ ಮಾಡಿದರೆ ಜಿಲ್ಲಾಡಳಿತ ಅಗತ್ಯ ಸಹಕಾರ ನೀಡಲಿದೆ ಎಂದು ಘೋಷಿಸಿದರು.

ಉಡುಪಿ ರಜತ ಉತ್ಸವದ ಭಾಗವಾಗಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಹಿನ್ನೀರು ಪ್ರವಾಸೋದ್ಯಮಕ್ಕೆ ಒತ್ತು ನೀಡಲು ಹಿನ್ನೀರಿನ ಪ್ರದೇಶಗಳಲ್ಲಿ ವಾಟರ್ ಸ್ಪೋರ್ಟ್ಸ್‌ ಆಯೋಜಿಸಲಾಗುತ್ತಿದೆ ಎಂದರು.

ದೇಶದಲ್ಲಿ ಋಷಿಕೇಷ ಹೊರತುಪಡಿಸಿದರೆ ಕ್ಲಿಫ್‌ ಡೈವಿಂಗ್ಗೆ ಸೂಕ್ತವಾಗಿರುವ ಸ್ಥಳ ಮಲ್ಪೆಯ ಸೇಂಟ್‌ ಮೇರಿಸ್ ಐಲ್ಯಾಂಡ್‌ ಎನ್ನುವುದು ತಜ್ಞರ ಅಭಿಪ್ರಾಯ. ವಿದೇಶಿ ಕ್ಲಿಫ್ ಡೈವರ್‌ಗಳನ್ನು ಸೆಳೆಯಲು ಹಾಗೂ ದೇಶದ ಮೂಲೆ ಮೂಲೆಗಳಿಂದ ಸಾಹಸಿ ಯುವ ಪಡೆಯನ್ನು ಆಕರ್ಷಿಸಲು ಸೇಂಟ್ ಮೇರಿಸ್ ದ್ವೀಪದಲ್ಲಿ ಕ್ಲಿಫ್ ಡೈವಿಂಗ್ ಆಯೋಜಿಸಲಾಗಿದೆ. ದ್ವೀಪದ ಕಲ್ಲಿನ ಬೆಟ್ಟದ ತುದಿಯಿಂದ 20 ಅಡಿ ಕೆಳಗೆ ಧುಮುಕುವ ಸನ್ನಿವೇಶ ರೋಚಕ. ನುರಿತ ತಜ್ಞರು, ಜೀವ ರಕ್ಷಕರ ಸಮ್ಮುಖದಲ್ಲಿ ಕ್ಲಿಫ್ ಡೈವಿಂಗ್‌ಗೆ ಅವಕಾಶ ನೀಡಲಾಗಿದೆ.

ಯುರೋಪ್ ಸೇರಿದಂತೆ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಹೆಚ್ಚು ಪ್ರಸಿದ್ಧಿ ಪಡೆದಿರುವ ಸ್ಲಾಗ್ ಲೈನ್‌ ಅನ್ನು ದ್ವೀಪದಲ್ಲಿ ಪರಿಚಯಿಸಲಾಗಿದೆ. ಒಂದು ಬಂಡೆಯಿಂದ ಮತ್ತೊಂದು ಬಂಡೆಗೆ ಬೆಲ್ಟ್‌ ಮಾದರಿಯ ಹಗ್ಗ ಕಟ್ಟಿ ಅದರ ಮೇಲೆ ದೇಹದ ಸಮತೋಲನ ಕಾಯ್ದುಕೊಂಡು ನಡೆಯುವುದನ್ನು ನೋಡುವಾಗ ಉಸಿರು ಬಿಗಿಹಿಡಿದಂತಾಗುತ್ತದೆ. 10 ನಿಮಿಷದ ಸ್ಲಾಗ್ ಲೈನ್ ನಡಿಗೆ 1 ಗಂಟೆಯ ನಡಿಗೆಗೆ ಸಮ ಎನ್ನುತ್ತಾರೆ ತಜ್ಞರು.

ಸ್ಕೂಬಾ ಡೈವಿಂಗ್ ಮಾಡಲು ಪ್ರವಾಸಿಗರು ಲಕ್ಷದ್ವೀಪ, ಅಂಡಮಾನ್‌, ಗೋವಾ, ಮುಂಬೈಗೆ ಹೋಗಬೇಕಾದ ಅವಶ್ಯಕತೆ ಇಲ್ಲ. ಮಲ್ಪೆಯ ಸೇಂಟ್ ಮೇರಿಸ್ ದ್ವೀಪದಲ್ಲೂ ಸಾಗರದಾಳದ ಜೀವವೈವಿಧ್ಯವನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರಿಗೆ ಅವಕಾಶ ಮಾಡಿಕೊಡಲಾಗಿದೆ. ಈಜು ಬಾರದವರೂ ಕೂಡ ನುರಿತ ತಜ್ಞರ ಹಾಗೂ ಸುರಕ್ಷತಾ ಉಪಕರಣಗಳ ಬಳಕೆಯೊಂದಿಗೆ ಸಾಗರದಡಿಯ ಸುಂದರ ದೃಶ್ಯಗಳನ್ನು ಕಣ್ತುಂಬಿಕೊಳ್ಳಬಹುದು.

ಬೀಚ್‌ ಉತ್ಸವದ ಎರಡನೇ ದಿನವಾದ ಶನಿವಾರ ವಾರಾಂತ್ಯದ ದಿನವಾದ ಕಾರಣ ಪ್ರವಾಸಿಗರು ಕಿಕ್ಕಿರಿದು ತುಂಬಿದ್ದರು. ಬನಾನಾ ರೈಡ್‌, ಜೆಟ್ ಸ್ಕೀ, ಕಯಾಕಿಂಗ್, ಸೈಕ್ಲಿಂಗ್, ಕ್ಲಿಫ್‌ಡೈವ್, ಸ್ಟಾಂಡ್ ಅಪ್‌ ಪೆಡಲ್‌, ಸ್ಕೂಬಾ ಡೈವ್, ಪ್ಯಾರಾಸೇಲಿಂಗ್ ಸೇರಿದಂತೆ ಹಲವು ವಾಟರ್ ಸ್ಫೋರ್ಟ್ಸ್‌ಗಳಲ್ಲಿ ಭಾಗವಹಿಸಿ ಸಂಭ್ರಮಿಸಿದರು. ಸಂಜೆ ಕುನಾಲ್ ಗಾಂಜಾವಾಲ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಿತು. ಕುನಾಲ್ ಮಾದಕ ಕಂಠಕ್ಕೆ ನೆರೆದಿದ್ದವರು ಮನಸೋತರು.

ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ, ಎಸ್ಪಿ ಹಾಕೆ ಅಕ್ಷಯ್ ಮಚಿಂದ್ರ, ಕರ್ನಾಟಕ ಸ್ವಿಮ್ಮಿಂಗ್ ಅಸ್ಸೋಸಿಯೇಷನ್ ಅಧ್ಯಕ್ಷ ಗೋಪಾಲ್ ಹೊಸೂರು, ಕೆನರಾ ಬ್ಯಾಂಕ್ ಪ್ರಬಂಧಕ ರಾಮಾ ನಾಯಕ್, ಪೌರಾಯುಕ್ತ ಉದಯ್ ಕುಮಾರ್ ಶೆಟ್ಟಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಡಾ.ರೋಷನ್ ಕುಮಾರ್ ಶೆಟ್ಟಿ ಇದ್ದರು.

 
 
 
 
 
 
 
 
 

Leave a Reply