ತೌಕ್ತೆ ಚಂಡಮಾರುತವನ್ನು ಸಮರ್ಥವಾಗಿ ಎದುರಿಸಿ – ಸಚಿವ ಬೊಮ್ಮಾಯಿ ಜಿಲ್ಲಾಡಳಿತಕ್ಕೆ ಸೂಚನೆ

ಉಡುಪಿ: ಜಿಲ್ಲೆಯ ಕರಾವಳಿ ಭಾಗಕ್ಕೆ ಅಪ್ಪಳಿಸಿರುವ ತೌಕ್ತೆ ಚಂಡಮಾರುತವನ್ನು ಸಮರ್ಥವಾಗಿ ಎದುರಿಸಿ. ಚಂಡಮಾರುತದಿಂದ ಯಾವುದೇ ಅಪಾಯ ಆಗದಂತೆ ಮುನ್ನೆಚ್ಚರಿಕೆ ವಹಿಸಲು ಎಸ್.ಟಿ. ಎಸ್.ಡಿ.ಆರ್.ಎಫ್. ನಿಧಿಯಿಂದ ನೀಡಲಾಗಿರುವ 60 ಕೋ. ರೂ. ಹಣವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವಂತೆ ಉಡುಪಿ ಜಿಲ್ಲಾ ಉಸ್ತುವಾರಿ ಹಾಗೂ ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಬಸವರಾಜ್ ಬೊಮ್ಮಾಯಿ ಜಿಲ್ಲಾಡಳಿತಕ್ಕೆ ಕಟ್ಟುನಿಟ್ಟಾಗಿ ಸೂಚಿಸಿದರು.

ಬೆಂಗಳೂರಿನಿಂದ ಶನಿವಾರ ವೀಡಿಯೊ ಕಾನ್ಫರೆನ್ಸ್ ಮೂಲಕ ಉಡುಪಿ ಜಿಲ್ಲಾಡಳಿತ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳೊಂದಿಗೆ ಸಭೆ ನಡೆಸಿದರು. ಚಂಡಮಾರುತ ನಾಲ್ಕು ದಿನಗಳ ಕಾಲ ತನ್ನ ಪ್ರಭಾವ ಬೀರುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹೀಗಾಗಿ ಕರಾವಳಿ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಿ ತಗ್ಗು ಪ್ರದೇಶದಿಂದ ಸಾರ್ವಜನಿಕರನ್ನು ಸ್ಥಳಾಂತರಗೊಳಿಸಿ. ಅವರಿಗೆ ಆಹಾರ ಮತ್ತು ಇತರ ವಸ್ತುಗಳನ್ನು ಪೂರೈಕೆ ಮಾಡಿ ಎಂದು ಅಧಿಕಾರಿಗಳಿಗೆ ಆದೇಶಿಸಿದರು.

ಅಪಾಯದಲ್ಲಿ ಸಿಲುಕಿದಜನರ ರಕ್ಷಣೆ ಮಾಡಲು ಮತ್ತು ಚಂಡಮಾರುತ ಅನಾಹುತ ತಪ್ಪಿಸಲು ಬೆಂಗಳೂರಿನಿಂದ ತಂಡ ಕಳುಹಿಸಲಾಗುವುದು. ಪೊಲೀಸ್ ಇಲಾಖೆ, ಕರಾವಳಿ ರಕ್ಷಣಾ ಪಡೆ, ಅಗ್ನಿಶಾಮಕ ಸಿಬ್ಬಂದಿ ಪರಸ್ಪರ ಸಮನ್ವಯದಿಂದ ಕೆಲಸ ನಿರ್ವಹಿಸಿ ಅನಾಹುತ ಸಂಭವಿಸಿದಂತೆ ಕಾರ್ಯ ಮಾಡುವಂತೆ ಬೊಮ್ಮಾಯಿ ಸೂಚಿಸಿದರು.

ಕರಾವಳಿಯ ನೆರೆ ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನ ಜಿಲ್ಲೆಯಲ್ಲಿ ಚಂಡಮಾರುತ ಪ್ರಭಾವ ಉಂಟಾಗುವ ಸಾಧ್ಯತೆಯೂ ಇದೆ. ಯಾವುದೇ ರೀತಿಯ ಅನಾಹುತ, ಆಪತ್ತು ಎದುರಾದರೂ ಅದನ್ನು ನಿವಾರಿಸಲು ಸಿದ್ಧತೆ ಮಾಡಿಕೊಳ್ಳಿ. ತೌಕ್ತೆ ಚಂಡಮಾರುತ ಬಗ್ಗೆ ಎಚ್ಚರ ವಹಿಸಿ ಎಂದರು.

ಸಭೆಯಲ್ಲಿ ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಸುನಿಲ್ ಕುಮರ್ ಮತ್ತು ಲಾಲಾಜಿ ಆರ್. ಮೆಂಡನ್, ಜಿಲ್ಲಾಧಿಕಾರಿ ಜಿ. ಜಗದೀಶ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು,ಡಿ.ಎಚ್.ಓ ಡಾ. ಸುಧೀರಚಂದ್ರ ಸೂಡ, ಜಿ.ಪಂ. ಸಿಇಓ ಡಾ. ನವೀನ್ ಭಟ್, ಎಸ್.ಪಿ. ವಿಷ್ಣುವರ್ಧನ್, ಮೊದಲಾದವರಿದ್ದರು.

 
 
 
 
 
 
 
 
 
 
 

Leave a Reply