ಸೇವೆಯೇ ಸಂಘಟನೆ ತತ್ವದಡಿ ಜಿಲ್ಲಾ ಆರೋಗ್ಯ ಸ್ವಯಂ ಸೇವಕರ ಪಾತ್ರ ಮಹತ್ವಪೂರ್ಣ: ಸಚಿವ ಕೋಟ

ಉಡುಪಿ : ಅತ್ಯಂತ ಸಂಕಷ್ಟದ ಪರಿಸ್ಥಿತಿಯ ನಡುವೆ ಇಂದು ದೇಶ ಕೊರೋನಾವನ್ನು ಎದುರಿಸುತ್ತಿದೆ. ಈ ನಿಟ್ಟಿನಲ್ಲಿ ಬಿಜೆಪಿಯ ‘ಸೇವೆಯೇ ಸಂಘಟನೆ’ ತತ್ವದಡಿ ಜಿಲ್ಲಾ ಆರೋಗ್ಯ ಸ್ವಯಂ ಸೇವಕರ ಪಾತ್ರ ಮಹತ್ವಪೂರ್ಣವಾಗಿದೆ ಎಂದು ಕರ್ನಾಟಕ ಸರಕಾರದ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ನಡೆದ ಜಿಲ್ಲಾ ಆರೋಗ್ಯ ಸ್ವಯಂ ಸೇವಕರ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರಾಗಿ ಏನೇನು ಸೇವಾ ಕಾರ್ಯಗಳನ್ನು ಮಾಡಬಹುದು ಎಂಬುದನ್ನು ಆಲೋಚಿಸಿ ರಾಷ್ಟ್ರೀಯ ಮತ್ತು ರಾಜ್ಯ ಬಿಜೆಪಿ ‘ಸೇವೆಯೇ ಸಂಘಟನೆ’ ತತ್ವದಡಿ ಜಿಲ್ಲಾ ಆರೋಗ್ಯ ಸ್ವಯಂಸೇವಕರ ಅಭಿಯಾನವನ್ನು ನೀಡಿದೆ. ಆಶಾ ಕಾರ್ಯಕರ್ತೆಯರು ತೊಡಗಿಸಿಕೊಂಡಿರುವ ರೀತಿಯ ಕೆಲವೊಂದು ಸೇವಾ ಚಟುವಟಿಕೆಗಳನ್ನು ಪಕ್ಷದ ಕಾರ್ಯಕರ್ತರು ಮಂಡಲ, ಮಹಾಶಕ್ತಿ ಕೇಂದ್ರ, ಶಕ್ತಿಕೇಂದ್ರ ಮತ್ತು ಬೂತ್ ಮಟ್ಟದಲ್ಲಿ ಯಾವ ಯಾವ ರೀತಿಯಲ್ಲಿ ನಿರ್ವಹಿಸಬಹುದು ಎಂಬ ಬಗ್ಗೆ ಯೋಚನೆ ಮಾಡಬೇಕಿದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ನಿರಂತರ ಅಪಪ್ರಚಾರ, ಟೀಕೆಗಳನ್ನು ಎದುರಿಸಿ ಕೊರೋನಾ ಮೊದಲನೇ ಮತ್ತು ಎರಡನೇ ಅಲೆಯನ್ನು ಯಶಸ್ವಿಯಾಗಿ ನಿಭಾಯಿಸಿದೆ. ಇಂದು ದೇಶದಾದ್ಯಂತ ಯಶಸ್ವಿ ಲಸಿಕಾ ಅಭಿಯಾನಗಳು ದಾಖಲೆ ಮಟ್ಟದಲ್ಲಿ ನಡೆಯುತ್ತಿವೆ. ಈ ಕಾಲಘಟ್ಟದಲ್ಲಿ ಆರೋಗ್ಯದ ಅನಿವಾರ್ಯತೆ, ಅವಶ್ಯಕತೆಗಳ ಬಗ್ಗೆ ಚಿಂತನೆ ನಡೆಸಬೇಕಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಆರೋಗ್ಯ ಸಂಬಂಧಿತ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಜೊತೆಗೆ ಆಯುಷ್ಮಾನ್ ಭಾರತ್ ಯೋಜನೆಯ ಮೂಲಕ ಪರಿಣಾಮಕಾರಿಯಾಗಿ ಚಿಕಿತ್ಸೆಗೆ ನೆರವು ನೀಡಿರುವುದನ್ನು ಮರೆಯಲು ಅಸಾಧ್ಯ. ಕೊರೋನಾ ನಿಯಂತ್ರಣದಲ್ಲಿ ಗ್ರಾಮ ಪಂಚಾಯತ್ ಮತ್ತು ನಗರಾಡಳಿತ ಕಾರ್ಯಪಡೆ, ವಿವಿಧ ಸ್ತರದ ಸಿಬ್ಬಂದಿ ವರ್ಗ ಹಾಗೂ ಸ್ವಯಂ ಸೇವಕರ ಪಾತ್ರ ಮಹತ್ವಪೂರ್ಣ. ವೈದ್ಯರು, ಆರೋಗ್ಯ ಸಹಾಯಕರು ಮತ್ತು ಜನಪ್ರತಿನಿಧಿಗಳ ಅವಿರತ ಸೇವೆ ಶ್ಲಾಘನೀಯ ಎಂದರು.

ಇಂದು ಬಿಜೆಪಿ ಎಲ್ಲಾ ಸ್ತರಗಳಲ್ಲಿ ಆಡಳಿತ ನಡೆಸುತ್ತಿರುವ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರು ಕೊರೋನಾ ಪೀಡಿತರ ಮನೆಗೆ ಭೇಟಿ ನೀಡಿ ತುರ್ತುಸೇವೆ ನೀಡಿರುವ ಬಗ್ಗೆ ಜನತೆಗೆ ವಿಶ್ವಾಸವಿದೆ. ಈ ನಿಟ್ಟಿನಲ್ಲಿ ತುರ್ತು ಸಹಾಯದ ಬಗ್ಗೆ ಸಹಾಯ ಹಸ್ತ ಚಾಚುವ ಪ್ರಧಾನಿ ಮೋದಿ ಕಲ್ಪನೆಯ ಆರೋಗ್ಯ ಸ್ವಯಂ ಸೇವಕರ ತಂಡದ ಜವಾಬ್ದಾರಿ ಮಹತ್ವಪೂರ್ಣ. ಅತ್ಯಂತ ಆತ್ಮವಿಶ್ವಾಸದಿಂದ ಪರಿಣಾಮಕಾರಿಯಾಗಿ ಆರೋಗ್ಯ ಸೇವಾ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಮೂಲಕ ಜಿಲ್ಲಾ ಆರೋಗ್ಯ ಸ್ವಯಂ ಸೇವಕರ ತಂಡ ಕೊರೋನಾ ಮುಕ್ತ ಸಮಾಜ ನಿರ್ಮಾಣದತ್ತ ಅಮೂಲ್ಯ ಕೊಡುಗೆ ನೀಡುವಂತಾಗಲಿ ಎಂದು ಕೋಟ ಹಾರೈಸಿದರು.

ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ‘ಸೇವೆಯೇ ಸಂಘಟನೆ’ ತತ್ವದಡಿ ಸಾಮಾಜಿಕ ಕಳಕಳಿಯಿಂದ ಸೇವೆಗೈಯುವ ಮಹಾಶಕ್ತಿ ಕೇಂದ್ರ ಶಹ ಮೂರು ಮಂದಿ ಕಾರ್ಯಕರ್ತರನ್ನು ಗುರುತಿಸಿ ಜಿಲ್ಲಾ ಆರೋಗ್ಯ ಸ್ವಯಂ ಸೇವಕರ ಅಭಿಯಾನದಲ್ಲಿ ಅವಕಾಶ ನೀಡಲಾಗಿದೆ. ಈ ಬಗ್ಗೆ ಪಕ್ಷದಿಂದ ಮುಂದಿನ ದಿನಗಳಲ್ಲಿ ಸೂಕ್ತ ತರಬೇತಿ ನೀಡುವ ವ್ಯವಸ್ಥೆ ಆಗಲಿದೆ. ಬಿಜೆಪಿ ಕಾರ್ಯಕರ್ತರು ಮೂಲತಃ ಪಕ್ಷ ಸಂಘಟನೆಯ ಜೊತೆಗೆ ಸೇವಾ ಮನೋಭಾವ ಹೊಂದಿರುವವರು. ಮುಂದಿನ ಕಾರ್ಯ ಯೋಜನೆಯ ಮೂಲಕ ಉಡುಪಿ ಜಿಲ್ಲೆಯಲ್ಲಿ ಆರೋಗ್ಯ ಸ್ವಯಂ ಸೇವಕರು ಸಾರ್ಥಕ ಸೇವೆ ಸಲ್ಲಿಸುತ್ತಾರೆ ಎಂಬ ಆತ್ಮವಿಶ್ವಾಸವಿದೆ. ಈ ನೆಲೆಯಲ್ಲಿ ಜಿಲ್ಲಾ ಆರೋಗ್ಯ ಸ್ವಯಂ ಸೇವಕರು ತಮಗೆ ದೊರೆತಿರುವ ಅವಕಾಶವನ್ನು ಸದುಪಯೋಗಗೊಳಿಸಿ, ಸಮರ್ಪಣಾಭಾವದ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕಿದೆ ಎಂದರು.

ಬಿಜೆಪಿ ರಾಜ್ಯ ವೈದ್ಯಕೀಯ ಪ್ರಕೋಷ್ಠದ ಸಮಿತಿ ಸದಸ್ಯ ಡಾ. ವಿಜಯೇಂದ್ರ, ಜಿಲ್ಲಾ ವೈದ್ಯಕೀಯ ಪ್ರಕೋಷ್ಠದ ಸಂಚಾಲಕ ಡಾ. ರಾಮಚಂದ್ರ ಕಾಮತ್ ಹಾಗೂ ಬಿಜೆಪಿ ಜಿಲ್ಲಾ ಆರೋಗ್ಯ ಸ್ವಯಂ ಸೇವಕರು ಉಪಸ್ಥಿತರಿದ್ದರು. ಜಿಲ್ಲಾ ಆರೋಗ್ಯ ಸ್ವಯಂ ಸೇವಕರ ಅಭಿಯಾನದ ಜಿಲ್ಲಾ ಸಂಚಾಲಕ ಶರತ್ ಶೆಟ್ಟಿ ಉಪ್ಪುಂದ ಸ್ವಾಗತಿಸಿದರು. ಜಿಲ್ಲಾ ಸಂಚಾಲಕಿ ಪ್ರಮೀಳಾ ಹರೀಶ್ ಕಾರ್ಯಕ್ರಮ ನಿರೂಪಿಸಿ, ಬೈಂದೂರು ಮಂಡಲ ಸಂಚಾಲಕ ಹರ್ಷ ಸಿದ್ಧಾಪುರ ವಂದಿಸಿದರು.

 
 
 
 
 
 
 

Leave a Reply