“ಕೈ” ಹಿಡಿದ ಗಂಗೊಳ್ಳಿಯ “ಕಮಲ”ಪಡೆ

ಕುಂದಾಪುರ: ಬಿಜೆಪಿ ಮುಖಂಡರ ಏಕಪಕ್ಷೀಯ ನಿಲುವುಗಳಿಂದ ಬೇಸತ್ತು ಗಂಗೊಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸುಮಾರು ಎಪ್ಪತ್ತಕ್ಕೂ ಅಧಿಕ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.

ಶುಕ್ರವಾರ ಮಧ್ಯಾಹ್ನ ಮಾಜಿ ಶಾಸಕ ಗೋಪಾಲ ಪೂಜಾರಿಯವರ ಕಟ್‍ಬೇಲ್ತೂರಿನ ನಿವಾಸದಲ್ಲಿ ಮಾಜಿ ಶಾಸಕ ಅವರ ಅನುಪಸ್ಥಿತಿಯಲ್ಲಿ ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ ಗುಡಿಬೆಟ್ಟು ಹಾಗೂ ತ್ರಾಸಿ ಜಿಲ್ಲಾ ಪಂಚಾಯತ್ ಉಸ್ತುವಾರಿ ಶರತ್ ಕುಮಾರ್ ಶೆಟ್ಟಿ ಪಕ್ಷದ ಬಾವುಟ ಹಾಗೂ ಧ್ವಜ ನೀಡುವುದರ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಂಡರು.

ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ ಗುಡಿಬೆಟ್ಟು ಮಾತನಾಡಿ, ಕಳೆದ ಚುನಾವಣೆಯಲ್ಲಿ ಹಿಂದೂತ್ವ ಹಾಗೂ ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟುಕೊಂಡು ಯುವಕರನ್ನು ಸೆಳೆದು ಅವರಿಂದ ಗೆಲುವು ಸಾಧಿಸಿದ ಶಾಸಕರು ಇದೀಗ ಯುವಕರನ್ನು ಸಂಪೂರ್ಣವಾಗಿ ಮರೆತಿದ್ದಾರೆ.ಇಂದು ಬಿಜೆಪಿ ಆಡಳಿತದಿಂದ ಜನ ರೋಸಿ ಹೋಗಿದ್ದಾರೆ. ಹಿಂದೆ ಶಾಸಕರಾಗಿದ್ದ ಕಾಲದಲ್ಲಿ ಗೋಪಾಲ ಪೂಜಾರಿಯವರು ಮಾಡಿರುವ ಜನಪರ ಕೆಲಸಗಳನ್ನು ಮತ್ತು ನಾಯಕತ್ವವನ್ನು ಒಪ್ಪಿಕೊಂಡು ಇಂದು ಗಂಗೊಳ್ಳಿಯ ಯುವಕರು ಕಾಂಗ್ರೆಸ್ ಬಾವುಟ ಹಿಡಿದಿದ್ದಾರೆ. ಮುಂದಿನ ತಾ.ಪಂ, ಜಿ.ಪಂ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಕೆಲಸ ಮಾಡಿ ಅವರನ್ನು ಗೆಲ್ಲಿಸುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದರು.

ತ್ರಾಸಿ ಜಿಲ್ಲಾ ಪಂಚಾಯತ್ ಉಸ್ತುವಾರಿ ಶರತ್ ಕುಮಾರ್ ಶೆಟ್ಟಿ ಮಾತನಾಡಿ, ಪಕ್ಷಕ್ಕೆ ಸೇರ್ಪಡೆಗೊಂಡಿರುವ ಯುವಕರು ನಮ್ಮ ಮುಂದೆ ಯಾವುದೇ ಬೇಡಿಕೆಗಳನ್ನು ಇಟ್ಟಿಲ್ಲ. ಚುನಾವಣಾ ಸಮಯದಲ್ಲಿ ಪಕ್ಷಕ್ಕೆ ಸೇರ್ಪಡೆಗೊಳ್ಳುವುದು ಸರ್ವೇಸಾಮಾನ್ಯ. ಆದರೆ ಏನೂ ಚುನಾವಣೆ ಇಲ್ಲದ ಈ ವೇಳೆಯಲ್ಲಿ ಅದೂ ಅಲ್ಲದೇ ನಮ್ಮ ಪಕ್ಷ ಅಧಿಕಾರ ಕಳೆದುಕೊಂಡ ಇಂತಹ ಕಠಿಣ ಸಮಯದಲ್ಲಿ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಗೋಪಾಲ ಪೂಜಾರಿಯವರ ಬೆನ್ನೆಲುಬಾಗಿ ನಿಲ್ಲುತ್ತೇವೆಂದು ಕಾಂಗ್ರೆಸ್ ಮನೆಗೆ ಬಂದಿರುವುದು ಖುಷಿಯ ವಿಚಾರ ಎಂದರು.

ಮಹಿಳಾ ಕಾಂಗ್ರೆಸ್‍ನ ಅಧ್ಯಕ್ಷೆ ಮಂಜುಳಾ ದೇವಾಡಿಗ, ಗಂಗೊಳ್ಳಿ ಯೂತ್ ಕಾಂಗ್ರೆಸ್‍ನ ಪ್ರದೀಪ್ ಗಂಗೊಳ್ಳಿ, ಪಂಚಾಯತ್ ಸದಸ್ಯರಾದ ದೇವೇಂದ್ರ ಖಾರ್ವಿ, ಗಂಗೊಳ್ಳಿ ಗ್ರಾಮೀಣ ಕಾಂಗ್ರೆಸ್ ಉಪಾಧ್ಯಕ್ಷ ಝಾಹೀರ್ ಇನ್ನಿತರರು ಇದ್ದರು.

 
 
 
 
 
 
 
 
 
 
 

Leave a Reply