ಬಿಜೆಪಿ ನೇತೃತ್ವದ ರಾಜ್ಯ ಸರಕಾರದಿಂದ ಮತಾಂತರ ನಿಷೇಧ ಕಾಯ್ದೆ ಮಂಡನೆ : ಜಿಲ್ಲಾ ಬಿಜೆಪಿ ಸ್ವಾಗತ

ಉಡುಪಿ : ಬಿಜೆಪಿ ನೇತೃತ್ವದ ಕರ್ನಾಟಕ ರಾಜ್ಯ ಸರಕಾರ ಮತಾಂತರ ನಿಷೇಧ ಕಾಯ್ದೆಗೆ ಸಂಬಂಧಿಸಿದಂತೆ ‘ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ, 2021’ನ್ನು ರಾಜ್ಯ ವಿಧಾನ ಸಭೆಯಲ್ಲಿ ಮಂಡಿಸಿರುವ ನಡೆ ಐತಿಹಾಸಿಕ ಎಂದು ಉಡುಪಿ ಜಿಲ್ಲಾ ಬಿಜೆಪಿ ತಿಳಿಸಿದೆ.

ಧಾರ್ಮಿಕ ಸ್ವಾತಂತ್ರ್ಯ ಹಕ್ಕಿನ ಸಂರಕ್ಷಣೆಗಾಗಿ ಮತ್ತು ತಪ್ಪು ನಿರೂಪಣೆ, ಬಲವಂತ, ಅನುಚಿತ ಪ್ರಭಾವ, ಒತ್ತಾಯ, ಆಮಿಷದ ಮೂಲಕ ಅಥವಾ ಯಾವುದೇ ವಂಚನೆಯ ವಿಧಾನದ ಮೂಲಕ ಒಂದು ಧರ್ಮದಿಂದ ಇನ್ನೊಂದು ಧರ್ಮಕ್ಕೆ ಕಾನೂನು ಬಾಹಿರ ಮತಾಂತರ ಮಾಡುವುದನ್ನು ನಿಷೇಧಿಸುವುದಕ್ಕಾಗಿ ಉಪಬಂಧ ಕಲ್ಪಿಸಲು ಮಂಡಿಸಿರುವ ಈ ‘ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ, 2021’ನ್ನು ರಾಜ್ಯ ವಿಧಾನ ಸಭೆಯಲ್ಲಿ ಮಂಡಿಸಿರುವುದು ಸ್ವಾಗತಾರ್ಹ. ಈ ಮೂಲಕ ಬಿಜೆಪಿ ನುಡಿದಂತೆ ನಡೆದಿದೆ ಎಂದು ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದ್ದಾರೆ.

ಮತಾಂತರ ನಿಷೇಧ, ಗೋಹತ್ಯೆ ನಿಷೇಧ, ಶ್ರೀ ರಾಮ ಮಂದಿರ ನಿರ್ಮಾಣ, 370ನೇ ವಿಧಿ ರದ್ದತಿ ಈ ಎಲ್ಲಾ ಅಂಶಗಳನ್ನು ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ್ದು, ಇದೀಗ ಹೇಳಿದ್ದನ್ನೇ ಮಾಡಿದೆ. ಇತ್ತೀಚೆಗೆ ಸಮಾಜದ ಮಧ್ಯೆ ಅಪರಿಮಿತ ಬಲವಂತದ ಮತಾಂತರವಾಗುತ್ತಿದ್ದರೂ ಕಾಂಗ್ರೆಸ್ ಮಾತ್ರ ಏನೇನೂ ನಡೆದಿಲ್ಲ ಎಂಬಂತೆ ಆಷಾಡಬೂತಿತನ ಪ್ರದರ್ಶಿಸುತ್ತಿರುವುದು ವಿಪರ್ಯಾಸ.

ಮತಾಂತರವನ್ನು ವಿರೋಧಿಸಿದ್ಧ ಗಾಂಧೀಜಿ ಮತಾಂತರ ಎಂದರೆ ದೇಶಾಂತರ ಎಂದು ಪ್ರತಿಪಾದಿಸಿರುವುದನ್ನು ಕಾಂಗ್ರೆಸ್ ಮರೆತಂತಿದೆ. ಮಹಾತ್ಮ ಗಾಂಧೀಜಿಯ ಎಲ್ಲಾ ಮೌಲ್ಯಗಳಿಗೆ ತಿಲಾಂಜಲಿ ನೀಡಿರುವ ಕಾಂಗ್ರೆಸ್ ಇದೀಗ ವಿಧಾನ ಸಭೆಯಲ್ಲಿ ಮತಾಂತರ ನಿಷೇಧ ಕಾಯ್ದೆಯನ್ನು ವಿರೋಧಿಸುತ್ತಿರುವುದರಲ್ಲಿ ಯಾವುದೇ ವಿಶೇಷತೆ ಇಲ್ಲ. ಕಾಂಗ್ರೆಸ್ ನೆಹರೂ ಕಾಲದಿಂದ ರಾಹುಲ್ ಗಾಂಧಿಯ ತನಕ ಹಿಂದು ಮತ್ತು ಹಿಂದುತ್ವದ ಬಗ್ಗೆ ಯಾವುದೇ ಕಾಳಜಿ ವಹಿಸದೇ ನಿರ್ಲಕ್ಷ ಧೋರಣೆ ಅನುಸರಿಸಿರುವುದರಿಂದ ಕಾಂಗ್ರೆಸ್ಸಿಗೆ ಅಧಃಪತನದ ದುರ್ಗತಿ ಬಂದೊದಗಿದೆ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 
 
 
 
 
 
 
 
 

Leave a Reply