ಛಾಯಾಗ್ರಾಹಕರ ಪಾಲಿನ ನಾಯಕ ಮಾನಸ ಅಶೋಕ್ ಕುಮಾರ್ ಶೆಟ್ಟಿ : ಕೋಟ ಶ್ರೀನಿವಾಸ ಪೂಜಾರಿ

ಕುಂದಾಪುರ: ವೃತ್ತಿಪರ ಛಾಯಾಗ್ರಾಹಕರಾಗಿದ್ದ ಮಾನಸ ಅಶೋಕ್ ಕುಮಾರ್ ಶೆಟ್ಟಿ ಪಕ್ಷ ಸಂಘಟನೆ ಹಾಗೂ ಗ್ರಾಮ ಅಭಿವೃದ್ಧಿ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿದ್ದರು. ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವ್ಯವಸ್ಥೆ ಬಗ್ಗೆ ಭರವಸೆ ಹೊಂದಿದ್ದರು. ಗ್ರಾಹಕರ ಸ್ನೇಹಿಯಾಗಿ, ಛಾಯಾಗ್ರಾಹಕರ ಪಾಲಿನ ನಾಯಕರಾಗಿ, ಅವರ ಕಷ್ಟ ಸುಖಗಳಿಗೆ ಭಾಗಿಯಾಗಿದ್ದರು ಎಂದು ಧಾರ್ಮಿಕ ದತ್ತಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ನಾವುಂದ ಮಾಲಸಾ ಮಾಂಗಲ್ಯ ಆರ್ಕೇಡ್‍ನಲ್ಲಿ ಭಾನುವಾರ ಭಾರತೀಯ ಜನತಾ ಪಾರ್ಟಿ ಬೈಂದೂರು ಮಂಡಲದ ವತಿಯಿಂದ ಜರಗಿದ ಅಶೋಕ ಕುಮಾರ್ ಶೆಟ್ಟಿ ಮತ್ತು ರಾಜೇಶ ಉಪ್ಪಿನಕುದ್ರು ಶ್ರದ್ಧಾಂಜಲಿ ಸಭೆಯಲ್ಲಿ ಪುಷ್ಟನಮನ ಸಲ್ಲಿಸಿ ಅವರು ಮಾತನಾಡಿದರು.

ನಮ್ಮನ್ನಗಲಿದ ಇನ್ನೋರ್ವ ಕಾರ್ಯಕರ್ತ ರಾಜೇಶ ಉಪ್ಪಿನಕುದ್ರು ಅವರು ಸಂಘ ಮತ್ತು ಪಕ್ಷ ಸಂಘಟನೆಯಲ್ಲಿ ಮಹತ್ತರ ಪಾತ್ರ ವಹಿಸಿದ್ದರು. ಕೋವಿಡ್ ಸಂದರ್ಭ ಸಾಕಷ್ಟು ಜನರಿಗೆ ಸಹಾಯ ಮಾಡಿದ್ದಲ್ಲದೆ ಬಿಜೆಪಿ ಲಸಿಕೆ ಅಭಿಯಾನ, ರಾಮಜನ್ಮ ಭೂಮಿ ಅಭಿಯಾನ ಮುಂಚೂಣಿಯಲ್ಲಿ ತೊಡಗಿಸಿಕೊಂಡಿದ್ದರು. ಮರೆಯಾದ ಈ ಎರಡು ಮಾಣಿಕ್ಯಗಳಿಗೆ ದೇವರು ಸದ್ಗತಿ ನೀಡಲಿ. ಕುಟುಂಬಗಳಿಗೆ ನೋವನ್ನು ಸಹಿಸಿಕೊಳ್ಳುವ, ನಷ್ಟವನ್ನು ಭರಿಸುವ ಶಕ್ತಿ ನೀಡಲಿ ಎಂದರು.

ಶಾಸಕ ಬಿಎಮ್ ಸುಕುಮಾರ್ ಶೆಟ್ಟಿ ಮಾತನಾಡಿ, ಬಿಜೆಪಿಯ ಸಕ್ರಿಯ ಕಾರ್ಯಕರ್ತ, ಹಲವು ಕುಟುಂಬಗಳ ಆಶಾಕಿರಣ ಅಶೋಕ ಕುಮಾರ್ ಶೆಟ್ಟಿ ಅವರು ಅಧಿಕಾರದ ಸ್ಥಾನದ ಆಸೆಗಾಗಿ ಪಕ್ಷವನ್ನು ಆಶ್ರಯಿಸಿದವರಲ್ಲ. ಸೇವೆಗಾಗಿ ಪಕ್ಷದಲ್ಲಿ ತೊಡಗಿಸಿಕೊಂಡಿದ್ದರು. ಆರೆಸ್ಸೆಸ್ ಹಿನ್ನಲೆಯಿಂದ ಬಂದಿದ್ದ ಇವರು ಪಕ್ಷ ಸಂಘಟನೆಯಲ್ಲಿ ಮಹತ್ತರ ಪಾತ್ರ ವಹಿಸಿದ್ದರು. ಅಶೋಕ ಕುಮಾರ್ ಶೆಟ್ಟಿ ಮತ್ತು ರಾಜೇಶ ಉಪ್ಪಿನಕುದ್ರು ಅವರ ಅಕಾಲಿಕವಾಗಿ ನಿಧನ ಪಕ್ಷಕ್ಕೆ ತುಂಬಲಾರದ ನಷ್ಟ ಎಂದರು.

ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಆರೆಸ್ಸೆಸ್‍ನ ಮಂಗಳೂರು ವಿಭಾಗದ ಸಹ ಕಾರ್ಯವಾಹ ಸುಧೀರ ಸಿದ್ಧಾಪುರ, ನುಡಿ ನಮನ ಸಲ್ಲಿಸಿದರು.

ಬಿಜೆಪಿ ಬೈಂದೂರು ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಿಯದರ್ಶಿನಿ ದೇವಾಡಿಗ ಸ್ವಾಗತಿಸಿದರು. ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅಧ್ಯಾಪಕ ವಿಶ್ವನಾಥ ಕಾರ್ಯಕ್ರಮ ನಿರ್ವಹಿಸಿ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು ವಂದಿಸಿದರು.

 
 
 
 
 
 
 
 
 

Leave a Reply