Janardhan Kodavoor/ Team KaravaliXpress
25.6 C
Udupi
Saturday, December 3, 2022
Sathyanatha Stores Brahmavara

ಆದರ್ಶ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭ

ಉಡುಪಿಯ ಆದರ್ಶ ಆಸ್ಪತ್ರೆಯು ಕಳೆದ ಕೆಲವು ವರ್ಷಗಳಿಂದ ಸರ್ವಪಳ್ಳಿ ರಾಧಾಕೃಷ್ಣನ್ ಅವರ ನೆನಪಿನಲ್ಲಿ ಶಿಕ್ಷಕ ದಿನಾಚರಣೆಯನ್ನು ವಿಶಿಷ್ಟ ರೀತಿಯಿಂದ ಆಚರಿಸುತ್ತಾ ಬಂದಿದೆ. ಸಾಧಕ ಶಿಕ್ಷಕರನ್ನು ಗುರುತಿಸಿ ಗೌರವಿಸುವುದು ಈ ದಿನದ ಕಾರ್ಯಕ್ರಮದ ಒಂದು ಮುಖ್ಯ ಅಂಗ. ಸಾಧಕ ಶಿಕ್ಷಕರಿಗೆ ಆದರ್ಶ ಶಿಕ್ಷಕ ಪ್ರಶಸ್ತಿಯನ್ನೂ ಈ ದಿನ ಪ್ರದಾನ ಮಾಡಲಾಗುತ್ತದೆ. ಇದರ ಮುಖ್ಯ ಉದ್ದೇಶ ಸಾಧಕ ಶಿಕ್ಷಕರ ಸಾಧನೆಯನ್ನು ಗೌರವಿಸುವುದು. ಈ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಇನ್ನಷ್ಟು ಉತ್ಸಾಹದಿಂದ ಸೇವೆ ಸಲ್ಲಿಸುವಂತೆ ಅವರನ್ನು ಹುರಿದುಂಬಿಸುವುದು. ಬೇರೆ ಶಿಕ್ಷಕರೂ ಈ ಕಾರ್ಯಕ್ರಮದಿಂದ ಪ್ರೇರಿತರಾಗಿ ಅವರೂ ಇದೇ ಮಾದರಿಯ ಸಾಧನೆಯ ಹಾದಿಯಲ್ಲಿ ಮುನ್ನಡೆಯುವಂತೆ ಉತ್ಸಾಹದ ವಾತಾವರಣವನ್ನು ಶಿಕ್ಷಣ ಕ್ಷೇತ್ರದಲ್ಲಿ ನಿರ್ಮಿಸುವುದು.
ಶಿಕ್ಷಕ ದಿನಾಚರಣೆಯ ಆಚರಣೆಯ ಹಿಂದಿನ ಇನ್ನೊಂದು ಮುಖ್ಯ ಉದ್ದೇಶ ಆರೋಗ್ಯಪೂರ್ಣ ಸಮಾಜ ನಿರ್ಮಾಣ. ಸುಸಂಸ್ಕೃತ ಸಮಾಜದ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಮಹತ್ವವಾದುದು. ಅವರು ಆರೋಗ್ಯವಾಗಿದ್ದರೆ ಅದರ ಪ್ರಭಾವ ವಿದ್ಯಾರ್ಥಿಗಳ ಹಾಗೂ ಸಮಾಜದ ಮೇಲಾಗುತ್ತದೆ. ಆರೋಗ್ಯವಂತ ಶಿಕ್ಷಕನಿಂದ ಶೈಕ್ಷಣಿಕ ಕ್ಷೇತ್ರಕ್ಕೆ ಉತ್ತಮ ಸೇವೆ ಲಭಿಸುತ್ತದೆ. ಈ ಹಿನ್ನೆಲೆಯಲ್ಲಿ ಶಿಕ್ಷಕರಿಗೆ ಉಚಿತವಾದ ಆರೋಗ್ಯ ತಪಾಸಣಾ ಕಾರ್ಯಕ್ರಮವನ್ನೂ ಆದರ್ಶ ಆಸ್ಪತ್ರೆಯು ಈ ದಿನ ಹಮ್ಮಿಕೊಂಡಿದೆ. ಈ ದಿನ ಆರೋಗ್ಯ ಕ್ಷೇತ್ರದಲ್ಲಿ ಸಾಕಷ್ಟು ಸೇವೆ ಸಲ್ಲಿಸಿದ ತಜ್ಞ ವೈದ್ಯರು ತಪಾಸಣೆ ನಡೆಸಿ ಶಿಕ್ಷಕರಿಗೆ ಆರೋಗ್ಯದ ಕುರಿತು ವಿಶೇಷ ಸಲಹೆ, ಸೂಚನೆ ಹಾಗೂ ಮಾರ್ಗದರ್ಶನ ನೀಡಲಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಆರೋಗ್ಯಪೂರ್ಣ ಪರಿಸರವನ್ನು ನಿರ್ಮಿಸಲು ಮತ್ತು ಅದನ್ನು ಕಾಯ್ದುಕೊಳ್ಳಲು ಈ ವಿಧದ ತಪಾಸಣೆ ಹಾಗೂ ಮಾರ್ಗದರ್ಶನ ಉತ್ತಮ ಪರಿಣಾಮ ಬೀರಲಿದೆ.

04-09-2022 ಭಾನುವಾರ ಬೆಳಗ್ಗೆ 9:30 ಕ್ಕೆ ಆದರ್ಶ ಆಸ್ಪತ್ರೆಯ ಆವರಣದಲ್ಲಿ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಹಭಾಗಿತ್ವದಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಕರ್ನಾಟಕ ಸರಕಾರದ ಹಿಂದುಳಿದ ವರ್ಗ ಮತ್ತು ಸಮಾಜ ಕಲ್ಯಾಣ ಇಲಾಖೆಯ ಸಚಿವರೂ, ಉ.ಕ. ಜಿಲ್ಲೆಯ ಉಸ್ತುವಾರಿ ಸಚಿವರೂ ಆಗಿರುವ ಶ್ರೀ ಕೋಟ ಶ್ರೀನಿವಾಸ ಪೂಜಾರಿಯವರು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಉಡುಪಿ ಕ್ಷೇತ್ರ ಶಾಸಕರಾಗಿರುವ ಶ್ರೀ ಕೆ. ರಘುಪತಿ ಭಟ್, ಉಡುಪಿ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಶ್ರೀ ಎಚ್.ಪ್ರಸನ್ನ, ಅಂತಾರಾಷ್ಟ್ರೀಯ ಸಹಯೋಗ ಮಾಹೆ ಮಣಿಪಾಲ ಇದರ ನಿರ್ದೇಶಕರಾದ ಡಾ. ಕರುಣಾಕರ್ ಕೋಟೆಕಾರ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕರಾದ ಶ್ರೀ ಶಿವರಾಜ್ ಎನ್.ಕೆ., ಆದರ್ಶ ಆಸ್ಪತ್ರೆಯ ಹಿರಿಯ ನರರೋಗ ಶಸ್ತ್ರಚಿಕಿತ್ಸಾ ತಜ್ಞರಾದ ಪ್ರೊ. ರಾಜಾ, ಭಾಗವಹಿಸಲಿರುವರು.

ಉಡುಪಿ ಜಿಲ್ಲೆಯ ಐದು ವಲಯಗಳ ಸಾಧಕ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದ್ದು, ಪ್ರಾಥಮಿಕ ಹಾಗೂ ಪ್ರೌಢ ವಿಭಾಗದ ಸರಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳ ಸಾಧಕ ಶಿಕ್ಷಕರನ್ನು ಆಯ್ಕೆ ಮಾಡಲಾಗುತ್ತದೆ.
ಶಿಕ್ಷಕರು ಆದರ್ಶ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಉಚಿತ ಆರೋಗ್ಯ ತಪಾಸಣಾ ಕಾರ್ಯಕ್ರಮದಲ್ಲಿ ಶಿಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವೀಗೊಳಿಸುವಂತೆ ಆದರ್ಶ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಜಿ.ಎಸ್. ಚಂದ್ರಶೇಖರ್ ಹಾಗೂ ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ವಿಮಲಾ ಚಂದ್ರಶೇಖರ್ ಶಿಕ್ಷಕರನ್ನು ವಿನಂತಿಸಿದ್ದಾರೆ.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!