ರಾಷ್ಟ್ರ ವಿರೋಧಿ ಬರಹ ಹಾಗೂ ರಾಷ್ಟ್ರ ವಿರೋಧಿ ಘೋಷಣೆ ಯಾರೇ ಹಾಕಿದರೂ ಅಂತವರ ವಿರುದ್ಧ ಕಠಿಣ ಕ್ರಮ~ಸಂಸದ ನಳಿನ್

ಉಡುಪಿ: ರಾಷ್ಟ್ರ ವಿರೋಧಿ ಬರಹ ಹಾಗೂ ರಾಷ್ಟ್ರ ವಿರೋಧಿ ಘೋಷಣೆ ಯಾರೇ ಹಾಕಿದರೂ ಅಂತವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳ ಬೇಕಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು. ಮಂಗಳೂರಿನಲ್ಲಿ ಉಗ್ರ ಸಂಘಟನೆಯನ್ನು ಬೆಂಬಲಿಸುವ ಗೋಡೆ ಬರಹ ಬರೆದಿರುವ ವಿಚಾರವಾಗಿ ಉಡುಪಿಯಲ್ಲಿ ಪ್ರತಿಕ್ರಿಯೆ ನೀಡಿದ ನಳಿನ್ ಕುಮಾರ್ ಕಟೀಲ್, ರಾಷ್ಟ್ರ ವಿರೋಧಿ ಘೋಷಣೆ ಹಾಕಿದವರ ವಿರುದ್ಧ ನಮ್ಮ ಸರಕಾರ ತೆಗೆದುಕೊಳ್ಳುತ್ತದೆ ಎಂದು ತಿಳಿಸಿದರು.

ಬೇರೆ ಕಡೆಗಳಲ್ಲಿ ಲವ್ ಜಿಹಾದ್ ಸುದ್ದಿಯಾಗುತ್ತಿದೆ. ಈಗಾಗಲೇ ಪಕ್ಷ ಮತ್ತು ಪಕ್ಷದ ಕೋರ್ ಕಮಿಟಿಯಲ್ಲಿ ತೀರ್ಮಾನ ತೆಗೆದುಕೊಂಡಿದ್ದೇವೆ, ಸಿಎಂ ಒಪ್ಪಿಗೆ ನೀಡಿದ್ದಾರೆ. ಕರ್ನಾಟಕದಲ್ಲೂ ಲವ್ ಜಿಹಾದ್ ಮಾಡಿದವರ ಬಗ್ಗೆ ಕಠಿಣ ಕ್ರಮವನ್ನು ಸರಕಾರ ತೆಗೆದುಕೊಳ್ಳಲಿದೆ ಎಂದರು. ಸಂಪುಟ ವಿಸ್ತರಣೆ ವಿಚಾರವಾಗಿ ಮಾತನಾಡಿದ ನಳಿನ್ ಕುಮಾರ್ ಕಟಿಲ್, ಇದು ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟ ವಿಚಾರ. ಅವರು ಕೇಂದ್ರ ನಾಯಕರ ಜೊತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದರು.

ಮಂತ್ರಿಗಳು ಸಚಿವ ಸ್ಥಾನಕ್ಕೆ ಲಾಬಿ ಮಾಡಲು ದೆಹಲಿಗೆ ಹೋಗಿದ್ದಾರಾ ಎಂಬ ಪತ್ರಕರ್ತರ ಪ್ರಶ್ನೆಗೆ, ಕೇಂದ್ರದ ಅನುದಾನ ತರುವುದಕ್ಕೆ ಮಂತ್ರಿಗಳು ದೆಹಲಿಗೆ ಹೋಗುತ್ತಾರೆ. ಹೋದಾಗ ಕೇಂದ್ರ ನಾಯಕರ ಭೇಟಿ ಆಗುವುದು ಸಹಜ ಎಂದು ಉತ್ತರಿಸಿದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರನ್ನು ಸಿಬಿಐ ತನಿಖೆ ವಿಚಾರವಾಗಿ ಉಡುಪಿಯಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಡಿಕೆಶಿಯವರನ್ನು ಬಿಜೆಪಿ ಟಾರ್ಗೆಟ್ ಮಾಡುತ್ತಿಲ್ಲ, ಇದು ತಪ್ಪು. ಸಿಬಿಐ ಎಲ್ಲರ ಜೊತೆಗೂ ಸಮಾನವಾಗಿ ಕೆಲಸ ಮಾಡುತ್ತದೆ. ಕಾಂಗ್ರೆಸ್ ಸರಕಾರ ಕೂಡಾ ಹಲವಾರು ಜನರ ತನಿಖೆ ಮಾಡಿದೆ. ಹಾಗಾದರೆ, ಕಾಂಗ್ರೆಸ್ ಪಕ್ಷ ಸಿಬಿಐಯನ್ನು ದುರುಪಯೋಗಪಡಿಸಿಕೊಂಡಿತ್ತು ಎಂದು ಕೇಳಬೇಕಾಗುತ್ತದೆ ಎಂದಿದ್ದಾರೆ.

ಮಂಗಳೂರು ವಿಮಾನ ನಿಲ್ದಾಣಕ್ಕೆ ಸ್ಥಳೀಯ ಮೇರು ವ್ಯಕ್ತಿಗಳ ನಾಮಕರಣ ಮಾಡುವ ಕುರಿತು ಮಾತನಾಡಿದ ಅವರು, ಹೆಸರಿಡಲು ಹಲವು ನಿಯಮಗಳು ಇವೆ. ಎಲ್ಲರ ಅಭಿಪ್ರಾಯ ತೆಗೆದುಕೊಂಡು ಸರಕಾರ ತೀರ್ಮಾನ ಮಾಡುತ್ತದೆ ಎಂದು ಹೇಳಿದರು.

 
 
 
 
 
 
 
 
 
 
 

Leave a Reply