Janardhan Kodavoor/ Team KaravaliXpress
29.6 C
Udupi
Sunday, February 5, 2023
Sathyanatha Stores Brahmavara

ನಮ್ಮೂರ ಇಂದ್ರಾಣಿ ಇಂದು ಉಕ್ಕಿ ಹರಿದಾಗ..

ಕಳೆದ ಮೂರು ದಿನಗಳಿಂದ ಎಡೆಬಿಡದೆ ಬರುತ್ತಿದ್ದ ಮಳೆಗೆ ಮೊದಲ ಬಾರಿ ಎಂಬಂತೆ ನಮ್ಮ ಮನೆ ಅಂಗಳದಲ್ಲಿ ನೀರು ನಿಂತಿದ್ದನ್ನು ಕಂಡಾಗ ನೆರೆಯ ತೀವ್ರತೆಯ ಅರಿವಾಯಿತು۔

ಬೆಳಿಗ್ಗೆ ಮಾಮೂಲಿನಂತೆ ದೇವಸ್ಥಾನಕ್ಕೆ ಹೋಗಿದ್ದಾಗ ಬಾಲ್ಯದ ದಿನಗಳ ನೆನಪು ಕಾಡಿ ಅಲ್ಲೇ ಹಿಂದೆ ಹರಿಯುತ್ತಿರುವ ಇಂದ್ರಾಣಿ ಯನ್ನೊಮ್ಮೆ ನೋಡೋಣ ಎಂದು ದೇವಳದ ಹೊರಸುತ್ತಿನ ಹಿಂದಿನ ಮೆಟ್ಟಿಲು ಇಳಿದು ನೋಡಿದರೆ ಅಬ್ಬ ಇಡೀ ಪ್ರದೇಶ ಜಲಾವೃತ ۔ ಇಂದ್ರಾಣಿ ನದಿ, ಅದರ ಬದಿಯ ಗದ್ದೆಗಳು, ಈಚೆ ಹರಿವ ಸಣ್ಣ ತೊರೆ ಇವೆಲ್ಲವೂ ಒಂದೇ ಆಗಿ ಪೂರ್ತಿ ನೀರಿನಿಂದ ಆವೃತವಾಗಿ ಮಧ್ಯದಲ್ಲಿರುವ ಮುಕ್ತಿಧಾಮ ಕಟ್ಟಡ ಮತ್ತು ಗಣಪತಿ ಗುಡಿಗಳು ನೀರಿನ ಮಧ್ಯೆ ಅನಾಥ ವಾಗಿ ನಿಂತಂತೆ ಅನ್ನಿಸಿತು.

ಮತ್ತೆ ಕೆಲವು ಛಾಯಾಚಿತ್ರಗಳನ್ನು ತೆಗೆದು ಸ್ವಲ್ಪ ಆಚೆ ರಸ್ತೆಬದಿಯಲ್ಲಿರುವ ವಿಪ್ರಶ್ರೀ ಸಭಾ ಬದಿಯಲ್ಲಿ ತುಂಬಾ ಜನ ನಿಂತಿರುವು ದನ್ನು ಕಂಡು ಏನಾದರೂ ಆಪತ್ತು ಒದಗಿ ದ್ದಲ್ಲಿ ಕಿಂಚಿತ್ತಾದರೂ ಸಹಾಯ ಮಾಡಬಹು ದೇನೋ ಎಂಬ ಆಲೋಚನೆಯೊಂದಿಗೆ ಅಲ್ಲಿಗೆ ಬಂದು ರಸ್ತೆಯ ಆ ಬದಿಯಿಂದ ಈ ಬದಿಗೆ ರಭಸವಾಗಿ ಹರಿಯುತ್ತಿದ್ದ ನೀರನ್ನು ನೋಡುತ್ತ ನಿಂತಿದ್ದೆ.

ಸುಮಾರು ಐವತ್ತರಿಂದ ನೂರು ಜನ ಅಲ್ಲಿ ಸೇರಿದ್ದರು. ಒಮ್ಮೆಗೆ ಅಮ್ಮಿ ಅಕ್ಕ ಎಂಬ ಕರೆ ಕೇಳಿ ತಿರುಗಿದರೆ ಅಲ್ಲಿನ ರಸ್ತೆಯಲ್ಲಿ ದೋಣಿ ಹಿಡಿದು ನಮ್ಮೂರ ನಗರಸಭಾ ಸದಸ್ಯ ವಿಜಯ ಕೊಡವೂರು ತಯಾರಾಗಿ ನಿಂತಿದ್ದರು. ಅವರೊಂದಿಗೆ ವಾರ್ಡ್ ಅಭಿ ವೃದ್ಧಿ ಅಧ್ಯಕ್ಷ ಪ್ರಭಾತ್ ಕೊಡವೂರು, ಯುವಕ ಸಂಘ ಕೊಡವೂರು, ಹಳೆ ವಿದ್ಯಾರ್ಥಿ ಸಂಘದ ಸದಸ್ಯರು , ಊರಿನ ಕೆಲ‌ ಪ್ರಮುಖರು, ಸುಮನಸಾ ಸಾಂಸ್ಕೃತಿಕ ಸಂಘ, ಸಮಾನ ಮನಸ್ಕ ಯುವಕರ ಪಡೆಯೊಂದಿಗೆ ನಮ್ಮ ಗ್ರಾಮದ ತಗ್ಗು ಪ್ರದೇಶದಲ್ಲಿ ನೀರಿನಲ್ಲಿ ಸಿಲುಕಿದವರ ರಕ್ಷಣೆಗೆ ಧಾವಿಸಲು ಅಣಿಯಾಗುತ್ತಿದ್ದರು.

ಸುಮಾರು ಹತ್ತು ಮಂದಿ ಯುವಕರು ಒಂದು ದೋಣಿಯಲ್ಲಿ ಒಂದೇ ತರಹದ ರೈನ್ ಕೋಟ್ ಧರಿಸಿ ಜಲಾವೃತವಾಗಿದ್ದ ಚೆನ್ನಂಗಡಿ, ಬೈಲಕೆರೆ , ಅತ್ತಲಡಿ, ಕುಡಾರ್ ತೋಟ ಮುಂತಾದ ಪ್ರದೇಶಗಳಿಗೆ ತೆರಳಲು ಅನುವಾದರು. ಬಿರು ಬೀಸುಗಾಳಿ, ಎಡೆ ಬಿಡದ ಮಳೆ, ಕಾಲಿನ ಮಂಡಿ ತನಕದ ನೀರಿನಲ್ಲಿ ಒದ್ದೆಯಾಗಿ ನಿಂತು ನಿಂತು ಒಂಥರಾ ಚಳಿ ಹಿಡಿದಂತೆ ಆಗಿದ್ದರೂ ಆ ಯುವಕರ ಉತ್ಸಾಹಕ್ಕೆ ಯಾವುದೇ ತಡೆಯಿರಲಿಲ್ಲ.

ಮೂರು ದೋಣಿಗಳಲ್ಲಿ ಕಾರ್ಯಪ್ರವೃತ್ತರಾದ ಯುವಪಡೆ ಏಳು ಸಲ ತೆರಳಿ ನೆರೆಯಲ್ಲಿ ಹುಟ್ಟು ಹಾಕಿ ನೆರೆಯಲ್ಲಿ ಸಿಲುಕಿ ಸಂಕಷ್ಟ ದಲ್ಲಿದ್ದ ಸುಮಾರು 70 ಜನರನ್ನು ಸುರಕ್ಷಿತವಾಗಿ ಕರೆ ತರುವಲ್ಲಿ ಯಶಸ್ವಿ ಯಾದರು.

ದೋಣಿ ಸಾಗಲು ಸರಿಯಾದ ದಾರಿ ಇಲ್ಲದ, ಅಲ್ಲಲ್ಲಿ ದಾರಿಗಡ್ಡವಾಗಿ ಒಂದಷ್ಟು ಪೊದೆ, ಗಿಡ ಮರಗಳ ತಡೆ, ಬೀಸುವ ಸುಳಿಗಾಳಿ ಜೋರಾಗಿ ಸುರಿಯು ತ್ತಿರುವ ಮಳೆ ಯಾವುದನ್ನೂ ಲೆಕ್ಕಿಸದೆ ಜನರ ಪ್ರಾಣ ಉಳಿಸುವ ಕಾಯಕದಲ್ಲಿ ವ್ಯಸ್ತರಾದ ಯುವಪಡೆಯ ಮನದಲ್ಲಿ ಇದ್ದದ್ದು ಆದಷ್ಟು ಬೇಗ ಯಾವುದೇ ಅಪಾಯವಿಲ್ಲದೆ ಎಲ್ಲರನ್ನೂ ಸಂರಕ್ಷಿಸಬೇಕೆಂಬ ಆಶಯ.

ಅವರ ಕಾಯಕಕ್ಕೆ ಊರಿಗೆ ಊರೇ ಶಹಬಾಸ್ ಎಂದು ಮೆಚ್ವಿತು. ಅವರಿಗೆ ತಮ್ಮ ನೆರವಿನ ಹಸ್ತ ಚಾಚಿದ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದ ವ್ಯವಸ್ಥಾಪನಾ ಮಂಡಳಿ ನೆರೆ ಸಂತ್ರಸ್ತರಿಗಾಗಿ ಗಂಜಿ ಕೇಂದ್ರ ತೆರೆದು ಸಾಂತ್ವನ ನೀಡಿದರೆ ಮತ್ತೆ ಕೆಲವರಿಗೆ ವಿಪ್ರಶ್ರೀಯಲ್ಲಿ, ಉಳಿದವ ರಿಗೆ ಕೊಡವೂರು ಯುವಕ ಸಂಘದಲ್ಲಿ ತಾತ್ಕಾಲಿಕ ನೆಲೆ ಕಲ್ಪಿಸಲಾಯಿತು.

ಒಬ್ಬ ಕ್ರಿಯಾಶೀಲ ನಾಯಕನ ನೇತ್ರತ್ವದಲ್ಲಿ, ಸಮಾನ ಮನಸ್ಕ ಯುವಕರ ತಂಡ ಸದಭಿರುಚಿಯ ಸಂಘ-ಸಂಸ್ಥೆಗಳು , ಊರಿನ ದೇವಸ್ಥಾನ, ಸುಮನಸ್ಸಿನ ಊರಿನ ಪ್ರಮುಖರು ಜಾತಿ-ಮತಭೇದವಿಲ್ಲದೆ ರಾಜಕೀಯ ಪಕ್ಷಗಳ ಹಂಗಿಲ್ಲದೆ ಒಂದು ಊರಿನ ಜನತೆಯ ಒಳಿತಿಗಾಗಿ ಶ್ರಮವಹಿಸಿ ಕಾರ್ಯ ಸಾಧಿಸಬಹುದು ಎನ್ನುವುದಕ್ಕೆ ನಮ್ಮೂರು ಕೊಡವೂರಿನಲ್ಲಿ ಇಂದು ನಡೆದ ಘಟನೆ ಸಣ್ಣ ಉದಾಹರಣೆ ۔

ಇಡೀ ಉಡುಪಿ ಜಿಲ್ಲೆ ಬಲು ಅಪರೂಪದ ಎಡೆಬಿಡದ ವರ್ಷಧಾರೆಯಿಂದ ಅಪಾಯಕ್ಕೆ ಸಿಲುಕಿದ್ದು ಜಲಾವೃತವಾದ ಪ್ರದೇಶಗಳ ಜನರ ರಕ್ಷಣೆಗೆ ಕ್ರಮ ಕೈಗೊಳ್ಳುವುದು ಅಗತ್ಯವಾಗಿದ್ದು ಸರಕಾರದೊಂದಿಗೆ ಸರಕಾರೇತರ ಸಂಘ ಸಂಸ್ಥೆಗಳು, ಯುವ ಸಮುದಾಯ ಕೈ ಜೋಡಿಸಿ ಕಾರ್ಯಪ್ರವೃತ್ತ ರಾದಲ್ಲಿ ಅನಿಶ್ಚಿತ ವಿಕೋಪಗಳಿಂದ ತಾತ್ಕಾಲಿಕ ರಕ್ಷಣೆ ಪಡೆಯಬಹುದು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!