ಗೂಗಲ್ ಮೀಟ್ ಮೂಲಕ ಕಾರ್ಗಿಲ್ ವಿಜಯ ದಿವಸ್ ಆಚರಣೆ

 

            ಬೈಂದೂರು ಚಂದ್ರಶೇಖರ ನಾವಡ

 

ಭಾರತೀಯರಿಗೆ ಜುಲೈ 26 ಹೆಮ್ಮೆಯ, ಐತಿಹಾಸಿಕ ದಿನ. ಭಾರತದ ಗಡಿಯೊಳಗೆ ಅವಿತಿದ್ದ ಶತ್ರುಗಳನ್ನು ಬಗ್ಗುಬಡಿದು ಕಾರ್ಗಿಲ್ ಯುದ್ಧದಲ್ಲಿ ವಿಜಯ ಸಾಧಿಸಿ ಭಾರತದ ತ್ರಿವರ್ಣ ಧ್ವಜವನ್ನು ಶಾಶ್ವತವಾಗಿ ಬಾನೆತ್ತರಕ್ಕೆ ಹಾರಾಡುವಂತೆ ಮಾಡಿದ ಅವಿಸ್ಮರಣೀಯ ದಿನ. ಕೊರೊನಾ ಮಾರ್ಗಸೂಚಿ ಪ್ರಕಾರ ಪ್ರಸ್ತುತ ಯಾವುದೇ ಕಾರ್ಯಕ್ರಮ ಮಾಡುವಂತಿಲ್ಲ.
ಆದರೆ, ಸ್ವಚ್ಛ ಭಾರತ್ ಫ್ರೆಂಡ್ಸ್ ಮತ್ತು ಸೌತ್ ಕೆನರಾ ಫೊಟೊಗ್ರಾಫರ್ಸ್ ಅಸೋಸಿಯೇಷನ್ ದಕ್ಷಿಣ ಕನ್ನಡ- ಉಡುಪಿ ಸಂಯುಕ್ತವಾಗಿ ಜು. 26 ಶನಿವಾರ ಸಂಜೆ ಗೂಗಲ್ ಮೀಟ್ ತಂತ್ರಜ್ಞಾನ ಮೂಲಕ ಕಾರ್ಗಿಲ್ ವಿಜಯ ದಿನವನ್ನು ವಿನೂತನವಾಗಿ ಆಚರಿಸಲಾಯಿತು.
ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ 19 ಮಹಾರ್ ರೆಜಿಮೆಂಟ್ ಬೈಂದೂರು ಚಂದ್ರಶೇಖರ ನಾವಡ ದಿಕ್ಸೂಚಿ ಭಾಷಣ ಮಾಡಿದರು. ಸೇನೆಯಲ್ಲಿನ ತನ್ನ ಅನುಭವವನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಅವರು, ಕಾರ್ಗಿಲ್ ನಲ್ಲಿ ನಡೆದ ರೋಚಕ ಘಟನಾವಳಿಗಳನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದರು. ಸೈನ್ಯಕ್ಕೆ ಸಂಬಂಧಿಸಿದಂತೆ ಕನ್ನಡದಲ್ಲಿ ಹೆಚ್ಚೆಚ್ಚು ಸಾಹಿತ್ಯ ಕೃಷಿ ನಡೆಯಬೇಕು ಎಂಬ ಆಶಯ ವ್ಯಕ್ತಪಡಿಸಿದರು. ಸೈನ್ಯ ಮತ್ತು ಸೈನಿಕರನ್ನು ಟೀಕಿಸುವವರಿಗೆ ಸೇನೆಗೆ ಸೇರುವಂತೆ ಸವಾಲೆಸೆದರು.
ಸೌತ್ ಕೆನರಾ ಫೊಟೊಗ್ರಾಫರ್ಸ್ ಅಸೋಸಿಯೇಶನ್ ಮಾಧ್ಯಮ ಪ್ರತಿನಿಧಿ ಜನಾರ್ದನ ಕೊಡವೂರು ಪ್ರಸ್ತಾವಿಕವಾಗಿ ಮಾತನಾಡಿದರು. ಪೂರ್ಣಿಮಾ ಜನಾರ್ದನ್ ಯೋಧರ ಬಗ್ಗೆ ಬರೆದ ಕವಿತೆ ವಾಚಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಹಾಡಿದ ದೇಶ ಭಕ್ತಿಗೀತೆ ಬಿತ್ತರಗೊಂಡಿತು.
ಸ್ವಚ್ಛ ಭಾರತ್ ಫ್ರೆಂಡ್ಸ್ ಸಂಚಾಲಕ ಗಣೇಶ್ ಪ್ರಸಾದ್ ಜಿ. ನಾಯಕ್ ಸ್ವಾಗತಿಸಿ, ನಿರೂಪಿಸಿದರು. ಸೌತ್ ಕೆನರಾ ಫೊಟೊಗ್ರಾಫರ್ಸ್ ಅಸೋಸಿಯೇಶನ್ ಅಧ್ಯಕ್ಷ ಕರಂದಾಡಿ ಶ್ರೀಧರ ಶೆಟ್ಟಿಗಾರ್, ಸ್ವಚ್ಛ ಭಾರತ್ ಫ್ರೆಂಡ್ಸ್ ಸಂಯೋಜಕ ರಾಘವೇಂದ್ರ ಪ್ರಭು ಕರ್ವಾಲು, ಉದಯ ನಾಯ್ಕ್, ವಿವೇಕ್ ಮುಂತಾದವರಿದ್ದರು.

 
 
 
 
 
 
 
 
 
 
 

Leave a Reply