ಗ್ರಾಮ ಒನ್ ಕೇಂದ್ರ ರಾಜ್ಯಾದ್ಯಂತ ಪ್ರಾರಂಭಕ್ಕೆ ಕ್ರಮ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಉಡುಪಿ, ಜೂನ್ 1 : ಮುಂಬರುವ ದಿನಗಳಲ್ಲಿ ಗ್ರಾಮ ಒನ್ ಕೇಂದ್ರವನ್ನು ರಾಜ್ಯಾದ್ಯಂತ ಪ್ರಾರಂಭಿಸಲು ಸೂಕ್ತ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.

ಅವರು ಇಂದು ಹೆಬ್ರಿ * ತಾಲ್ಲೂಕು ಆಡಳಿತ ಸೌಧದ* ನೂತನ ಕಟ್ಟಡ ಉದ್ಘಾಟನೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ತರಗತಿ ಕೊಠಡಿಗಳ ನಿರ್ಮಾಣ, ಹೆಬ್ರಿ ಬಸ್ ನಿಲ್ದಾಣ ಕಾಮಗಾರಿಗಳ *ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ಸರ್ಕಾರದ ಆಡಳಿತವನ್ನು ಜನರ ಮನೆ ಬಾಗಿಲಿಗೆ ಒಯ್ಯುವ ಕಲ್ಪನೆಯನ್ನು ಕಂದಾಯ ದಾಖಲೆಗಳು ಮನೆ ಬಾಗಿಲಿಗೆ ಎನ್ನುವ ಕಾರ್ಯಕ್ರಮದ ಮೂಲಕ ಸಾಕಾರಗೊಳಿಸಲಾಗಿದೆ. ಸ್ಪಂದನಾಶೀಲ ಸರ್ಕಾರದ ಕಾರ್ಯಕ್ರಮ. ಸುಶಾಸನ ಒಳ್ಳಯ ಆಡಳಿತದ ಪ್ರತೀಕ.ಜನರ ಸುತ್ತ ಅಭಿವೃದ್ಧಿಯಾಗಬೇಕು. ನಮ್ಮ ಸರ್ಕಾರ ಈ ಚಿಂತನೆಯ ಆಧಾರದ ಮೇಲೆ ಕೆಲಸ ಮಾಡುತ್ತಿದೆ ಎಂದರು.

ಆಳುವುದು ಬೇರೆ, ಆಡಳಿತ ನಡೆಸುವುದು ಬೇರೆ. ಜನಪರ ಚಿಂತನೆ, ಆಡಳಿತ ಮೌಲ್ಯಗಳನ್ನು ಎತ್ತಿಹಿಡಿಯುವ ಕೆಲಸವಾಗಬೇಕು. ಜನರಿಗೆ ಸ್ವಚ್ಛ, ಸರಳ ಆಡಳಿತ ನೀಡಬೇಕು. ಆಳುವುದು , ಆಡಳಿತ ನಡೆಸುವುದು ರಾಜ್ಯದ ಪ್ರಗತಿಯ ಚಕ್ರಗಳು. ಪ್ರಧಾನಿ ನರೇಂದ್ರ ಮೋದಿಯವರ ಮಾರ್ಗದರ್ಶನದಲ್ಲಿ ನಾಯಕರಾದ ಯಡಿಯೂರಪ್ಪನವರ ನೇತೃತ್ವದಲ್ಲಿ ಕೋವಿಡ್ ನ್ನು ಸಮರ್ಥವಾಗಿ ನಿಭಾಯಿಸಲಾಗಿದೆ. ಇದಕ್ಕೆ ವೈದ್ಯರು, ಸಿಬ್ಬಂದಿಗಳು, ಆಶಾ ಕಾರ್ಯಕರ್ತರು,ಪೊಲೀಸರು ಸೇರಿದಂತೆ ಎಲ್ಲ ಕರೋನಾ ಯೋಧರ ಕೊಡುಗೆ ಮಹತ್ವದ್ದಾಗಿತ್ತು. ಪ್ರಧಾನಿ ಮೋದಿಯವರು ಭಾರತದ ಬೃಹತ್ ಜನಸಂಖ್ಯೆಗೆ ಕರೋನಾ ಲಸಿಕೆಯನ್ನು ನೀಡುವ ಮೂಲಕ ಜನತೆಗೆ ಆರೋಗ್ಯ ಸುರಕ್ಷಾ ಕವಚವನ್ನು ನೀಡಿದ್ದಾರೆ ಎಂದರು.

ದುಡಿಯುವ ವರ್ಗಕ್ಕೆ ಶಕ್ತಿ:

ಕರ್ನಾಟಕ ದೇಶದ ತಲಾವಾರು ಆದಾಯದಲ್ಲಿ 4ನೇ ಸ್ಥಾನದಲ್ಲಿದೆ. ಬಹುಪ್ರತಿಶತ ಜನರು ಜೀವನೋಪಾಯಕ್ಕಾಗಿ ದುಡಿಯುತ್ತಿದ್ದಾರೆ. ಈ ದುಡಿಯುವ ವರ್ಗಕ್ಕೆ ಶಕ್ತಿಯನ್ನು ತುಂಬಿ ಅವರ ತಲಾವಾರು ಆದಾಯ ಹೆಚ್ಚಿಸುವ ಕೆಲಸ ಮಾಡಬೇಕಿದೆ. ಆರ್ಥಿಕತೆ ಎಂದರೆ ಜನರ ದುಡಿಮೆ . ಸಶಕ್ತ ದುಡಿಯುವ ವರ್ಗವಿರುವ ದೇಶಕ್ಕೆ ಬಡತನವಿರುವುದಿಲ್ಲ. ದುಡಿಯುವ ವರ್ಗದ ಸ್ವಾವಲಂಬಿ, ಸ್ವಾಭಿಮಾನದ ಬದುಕು ಸಾಗಿಸಲು ಎಲ್ಲ ಸಹಕಾರ ನೀಡಲಾಗುವುದು ಎಂದರು.

ಮೂಲಭೂತ ಸೌಕರ್ಯಕ್ಕೆ ಒತ್ತು
ತಳಹಂತದ ದುಡಿಯುವ ವರ್ಗದಿಂದ ದೇಶದ ಆರ್ಥಿಕತೆ ಬದಲಾವಣೆಯಾಗುತ್ತದೆ. ಅವರ ಆರೋಗ್ಯ, ಮಕ್ಕಳ ಶಿಕ್ಷಣಕ್ಕೆ ಸರ್ಕಾರ ಸೂಕ್ತ ವ್ಯವಸ್ಥೆ ಮಾಡಲಿದೆ. ಕಾರ್ಮಿಕರ ಶ್ರಮಕ್ಕೆ, ರೈತನ ಬೆವರಿಗೆ ಈ ಸರ್ಕಾರ ಬೆಲೆಕೊಡುತ್ತದೆ. ಆದ್ದರಿಂದ ರೈತಮಕ್ಕಳಿಗೆ ವಿದ್ಯಾನಿಧಿ ಜಾರಿಮಾಡಿ, ಉಡುಪಿ ಜಿಲ್ಲೆಯಲ್ಲಿ 18 ಸಾವಿರ ಮಕ್ಕಳಿಗೆ ರೈತವಿದ್ಯಾನಿಧಿಯನ್ನು ನೀಡಲಾಗಿದೆ. ಮೂಲಭೂತ ಸೌಕರ್ಯಕ್ಕೆ ಒತ್ತು ನೀಡುವ ನಮ್ಮ ಸರ್ಕಾರ 3000 ಕೋಟಿ ರೂ. ವೆಚ್ಚದಲ್ಲಿ ರಾಜ್ಯ ಹೆದ್ದಾರಿಗಳ ನಿರ್ಮಾಣ, ಮೀನುಗಾರಿಕಾ ಬಂದರುಗಳ ಅಭಿವೃದ್ಧಿ, 5ಹೊಸ ವಿಮಾನ ನಿಲ್ದಾಣ ಅಭಿವೃದ್ಧಿ, ರೈಲ್ವೆ ಯೋಜನೆಗಳನ್ನು ಕೈಗೊಂಡು ನವಕರ್ನಾಟಕದಿಂದ ನವಭಾರತವನ್ನು ನಿರ್ಮಿಸುವ ಸಂಕಲ್ಪವನ್ನು ಸಾಕಾರಗೊಳಿಸಲಾಗುತ್ತಿದೆ. 8 ಹೊಸ ವಿಶ್ವವಿದ್ಯಾಲಯಗಳು, 7 ಇಂಜಿನಿಯರಿಂಗ್ ಕಾಲೇಜುಗಳನ್ನು ಐಐಟಿಯಾಗಿ ಮೇಲ್ದರ್ಜೆಗೇರಿಸಲಾಗುವುದು, ಇದು ಅಭಿವೃದ್ಧಿಯ ಪರ್ವ ಎಂದರು.

ಹೆಬ್ರಿ ಆದರ್ಶ ತಾಲ್ಲೂಕಾಗಬೇಕು:

ಕರಾವಳಿ ಪ್ರದೇಶದ ಸಮಗ್ರ ಅಭಿವೃದ್ಧಿ, ಗ್ರೀನ್ ಪವರ್, ಹಸಿರು ಇಂಧನ ಅಭಿವೃದ್ಧಿ, ಬೀಚ್ ಟೂರಿಸಂ, ಟೆಂಪಲ್ ಟೂರಿಸಂಗೆ ಪ್ರಾಶಸ್ತ್ಯ ನೀಡಿ ಟೂರಿಸಂ ಸರ್ಕೀಟ್ ಮಾಡಲಾಗುವುದು. ಫರ್ನೀಚರ್ ಕ್ಲಸ್ಟರ್ ಸ್ಥಾಪನೆಗೆ ತೀರ್ಮಾನ ಕೈಗೊಳ್ಳಲಾಗಿದೆ. ಈ ಭಾಗದಲ್ಲಿ ಇಎಸ್ಐ ಆಸ್ಪತ್ರೆಯನ್ನು ಪ್ರಾರಂಭಿಸಲು ಪ್ರಸ್ತಾವನೆ ಕೇಂದ್ರಕ್ಕೆ ಕಳಿಸಲಾಗಿದೆ. ಹೆಬ್ರಿಯಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳ ಮೂಲಕ ಸರ್ಕಾರ ಜನರಿಗೆ ಹತ್ತಿರವಾಗಲು ಪ್ರಯತ್ನಿಸಲಾಗುತ್ತಿದೆ. ಆದರ್ಶ ಆಡಳಿತವುಳ್ಳ ಆದರ್ಶ ತಾಲ್ಲೂಕಾಗಬೇಕು ಎಂಬುದು ಸರ್ಕಾರದ ಗುರಿ. ಕರಾವಳಿ ಜಿಲ್ಲೆಗಳ ಸಚಿವರ ನೇತೃತ್ವದಲ್ಲಿ ಈ ಗುರಿಯನ್ನು ಸಾಧಿಸಲಾಗುವುದು ಎಂದರು.

 
 
 
 
 
 
 
 
 
 
 

Leave a Reply