ಸಿಎಂ ಜಿಲ್ಲೆಯಲ್ಲೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ

ಬೆಂಗಳೂರು: 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮುಖ್ಯಮಂತ್ರಿ ತವರು ಜಿಲ್ಲೆಯಲ್ಲಿ ನಡೆಯಲಿದ್ದು, ಸಿಎಂ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಪೂರ್ವಭಾವಿ ಸಭೆಯಲ್ಲಿ ಸ್ಥಳ ಹಾಗೂ ದಿನಾಂಕವೂ ನಿಗದಿಯಾಗಿದೆ.

ಮೂರು ದಿನಗಳ ಈ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಹಾವೇರಿಯಲ್ಲಿ ಸೆಪ್ಟೆಂಬರ್ 23, 24 ಹಾಗೂ 25ರಂದು ಆಯೋಜಿಸಲು
ಸಭೆಯಲ್ಲಿ ನಿರ್ಧರಿಸಲಾಯಿತು. ಅಲ್ಲದೆ ಸಮ್ಮೇಳನವನ್ನು ಈ ಸಲ ಯಾವ ರೀತಿ ಆಯೋಜಿಸಬೇಕು, ಏನೆಲ್ಲ ಕಾರ್ಯಕ್ರಮಗಳನ್ನು ಅಳವಡಿಸಿಕೊಳ್ಳಬೇಕು ಎಂಬಿತ್ಯಾದಿ ವಿಚಾರಗಳೂ ಬಹುತೇಕ ಅಂತಿಮಗೊಂಡವು.

ಗೋಷ್ಠಿಗಳಲ್ಲಿ ಹೆಚ್ಚಿನ ಜನ ಭಾಗವಹಿಸುವಂತಾಗಬೇಕು ಹಾಗೂ ಅವು ಅರ್ಥಪೂರ್ಣವಾಗಿರಬೇಕು. ಸಮಿತಿಗಳಲ್ಲಿ ಸಕ್ರಿಯವಾಗಿರುವ ಸ್ಥಳೀಯ ಜನರನ್ನು ತೊಡಗಿಸಿಕೊಳ್ಳಬೇಕು. ಗೋಷ್ಠಿಗಳಲ್ಲಿಯೂ ಸ್ಥಳೀಯರಿಗೆ ಅವಕಾಶ ನೀಡಬೇಕು. ಎಲ್ಲ ತಾಲ್ಲೂಕುಗಳ ಸ್ವಯಂಸೇವಕರು ಭಾಗವಹಿಸಬೇಕು. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳು ಸೂಚಿಸಿದರು.

ವಸತಿ ವ್ಯವಸ್ಥೆ: ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸುವವರಿಗೆ ವಸತಿ ವ್ಯವಸ್ಥೆಯಾಗಬೇಕು. ಎಲ್ಲಿ, ಎಷ್ಟು ಜನರಿಗೆ ವಸತಿ ವ್ಯವಸ್ಥೆಯಾಗಿದೆ ಎಂಬ ಬಗ್ಗೆ ನಿಖರವಾಗಿ ಯೋಚಿಸಿ. ಹಾಸ್ಟೆಲ್​ಗಳು ಮತ್ತು ಡಾರ್ಮಿಟರಿಗಳನ್ನು ವಸತಿ ಶಾಲೆಗಳನ್ನು ಸದುಪಯೋಗ ಮಾಡಿಕೊಳ್ಳಬೇಕು. ಜತೆಗೆ ಪ್ರಮುಖ ಕಲ್ಯಾಣ ಮಂಟಪಗಳನ್ನು ಗುರುತಿಸಿ ಎಂದು ಸಿಎಂ ಸೂಚನೆ ನೀಡಿದರು. ಹುಬ್ಬಳ್ಳಿ ಮತ್ತು ದಾವಣಗೆರೆಯಲ್ಲಿಯೂ ವಸತಿಗೆ ವ್ಯವಸ್ಥೆ ಕಲ್ಪಿಸಬೇಕು ಎಂದರು.

ಮಾರ್ಗಮಧ್ಯೆಯೂ ಉತ್ತಮ ಹೋಟೆಲ್​ಗಳಿವೆ, ಖಾಸಗಿ ಶಾಲೆಗಳನ್ನು ಸಹ ಬಳಕೆ ಮಾಡಿಕೊಳ್ಳಬಹುದು ಎಂದರು. ತುರ್ತು ಪರಿಸ್ಥಿತಿಗಳಲ್ಲಿ ಬಳಕೆ ಮಾಡಲು ಕುಂಭಮೇಳದಲ್ಲಿ ಆಯೋಜಿಸಿದಂತೆ ಟೆಂಟ್​​ಗಳನ್ನು ಉಪಯೋಗಿಸಬಹುದು. ಇವುಗಳ ಬಗ್ಗೆ ಸೂಕ್ತ ನೀಲನಕ್ಷೆ ಸಿದ್ಧಪಡಿಸಲು ಸಿಎಂ ತಿಳಿಸಿದರು.

ಊಟ, ಕುಡಿಯುವ ನೀರು, ಶೌಚಾಲಯ ವ್ಯವಸ್ಥೆಯ ಬಗ್ಗೆಯೂ ಸೂಕ್ತ ಯೋಜನೆಗಳನ್ನು ರೂಪಿಸಬೇಕು ಎಂದ ಸಿಎಂ ಸಿದ್ಧತೆಗಳ ಬಗ್ಗೆ ಜಿಲ್ಲಾ ಮಟ್ಟದಲ್ಲಿ ಮತ್ತೊಂದು ಸಭೆ ಕರೆದು, ಅಂತಿಮಗೊಳಿಸಲಾಗುವುದು ಎಂದು ತಿಳಿಸಿದರು. ಅಲ್ಲದೆ ಬಜೆಟ್​ನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ 20 ಕೋಟಿ ರೂ. ಒದಗಿಸಲಾಗಿದೆ ಎಂದರು.

ಸಮ್ಮೇಳನವನ್ನು ಪರಿಸರಸ್ನೇಹಿ ಆಗಿಸಲು ಫ್ಲೆಕ್ಸ್ ಬಳಕೆ ನಿಷೇಧಿಸಿ ಜಾಹೀರಾತು ಫಲಕಗಳನ್ನು ಬಳಸುವಂತೆ ಎಂದು ಮುಖ್ಯಮಂತ್ರಿ ಸೂಚನೆ ನೀಡಿದರು.

ಸಭೆಯಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಚಂದ್ರಶೇಖರ್ ಕಂಬಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್, ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್, ಕೃಷಿ ಸಚಿವ ಬಿ.ಸಿ.ಪಾಟೀಲ್, ಸಂಸದ ಶಿವಕುಮಾರ್ ಉದಾಸಿ, ಶಾಸಕರಾದ ಅರುಣ್ ಕುಮಾರ್ ಪೂಜಾರ್, ನೆಹರು ಓಲೆಕಾರ್, ವಿಧಾನ ಪರಿಷತ್ ಸದಸ್ಯ ಸಲೀಂ ಅಹಮದ್, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ್ ಜೋಶಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಎನ್.ಮಂಜುಳಾ, ಹಾವೇರಿ ಜಿಲ್ಲಾಧಿಕಾರಿ ಡಾ. ಸಂಜಯ ಶೆಟ್ಟೆಣ್ಣವರ್ ಮೊದಲಾದವರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply