ಮೊಗವೀರ ಸಮಾಜದ ಎಲ್ಲಾ ಬೇಡಿಕೆಗಳ ಈಡೇರಿಕೆ : ಸಿ.ಎಂ

ಕಾಪು: ಉಪ್ಪಳದಿಂದ ಶೀರೂರಿನವರೆಗಿನ ಸಮಸ್ತ ಮೊಗವೀರರ ಆರಾಧಾನಾ ಕೇಂದ್ರ ಸುಮಾರು 36 ಕೋಟಿ ರೂಪಾಯಿ ವೆಚ್ಚದಲ್ಲಿ ಸಮಗ್ರವಾಗಿ ಜೀರ್ಣೋದ್ಧಾರಗೊಂಡಿರುವ ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಆಡಳಿತಕ್ಕೊಳಪಟ್ಟಿರುವ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಸೋಮವಾರ ರಾಜ್ಯದ ಮುಖ್ಯಮಂತ್ರಿ ಎಸ್.ಆರ್. ಬಸವರಾಜ ಬೊಮ್ಮಾಯಿ ಅವರು ಸೋಮವಾರ ಭೇಟಿ ನೀಡಿದರು.

ಉಚ್ಚಿಲ ಮಹಾಲಕ್ಷ್ಮೀ ಕ್ಷೇತ್ರಕ್ಕೆ ಭೇಟಿ ನೀಡಿದ ಅವರು ದೇಗುಲದಲ್ಲಿ ನಡೆಯುತ್ತಿರುವ ಬ್ರಹ್ಮಕಲಶ ಪುಣ್ಯೋತ್ಸವದ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು, ದೇವರ ದರ್ಶನ ಪಡೆದರು.

ಇದಕ್ಕೂ ಮೊದಲು ನಡೆದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮೊಗವೀರರು ಶ್ರಮ ಜೀವಿಗಳು. ಕರಾವಳಿಯ ಆರ್ಥಿಕ ಪುನಶ್ಚೇತನದಲ್ಲಿ ಮೊಗವೀರರ ಅಪಾರ ಕೊಡುಗೆಗಳಿದೆ. ಸರಕಾರ ಮತ್ತು ದಾನಿಗಳ ಸಹಿತವಾಗಿ ಪ್ರತಿಯೊಬ್ಬ ಸಮಾಜ ಭಾಂದವರ ಶ್ರಮದ ಫಲವಾಗಿ ಮಹಾಲಕ್ಷ್ಮೀ ದೇವಸ್ಥಾನ ನಿರ್ಮಾಣಗೊಂಡಿದ್ದು ಇದು ಸಮುದಾಯದ ಒಗ್ಗಟ್ಟನ್ನು ತೋರಿಸಿಕೊಟ್ಟಿದೆ ಎಂದರು.

ಸಿಎಂ ಬೊಮ್ಮಾಯಿ
ಡಾ. ಜಿ. ಶಂಕರ್ ನೇತೃತ್ವದಲ್ಲಿ ದ.ಕ. ಮೊಗವೀರ ಮಹಾಜನ ಸಂಘ ಸಹಿತವಾಗಿ ಮೊಗವೀರ ಸಮುದಾಯದ ಬೇಡಿಕೆಯಂತೆ ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದ ಮುಂದುವರಿದ ಜೀರ್ಣೋದ್ಧಾರ ಕಾಮಗಾರಿಗಾಗಿ ಐದು ಕೋಟಿ ರೂಪಾಯಿ ಅನುದಾನ ಹಾಗೂ ವಿದ್ಯಾರ್ಥಿ ನಿಲಯ ಸ್ಥಾಪನೆ, ಮೊಗವೀರ ಮಹಿಳೆಯರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ಸೌಲಭ್ಯ, ಡೀಸೆಲ್ ಸಬ್ಸಿಡಿ ಹೆಚ್ಚಳ ಸಹಿತವಾಗಿ ಎಲ್ಲಾ ಬೇಡಿಕೆಗಳನ್ನೂ ಈಡೇರಿಸುವುದಾಗಿ ಅವರು ಭರವಸೆ ನೀಡಿದರು.

ರಾಜ್ಯ ಸಚಿವರಾದ ಎಸ್. ಅಂಗಾರ, ಕೋಟ ಶ್ರೀನಿವಾಸ ಪೂಜಾರಿ, ವಿ. ಸುನೀಲ್ ಕುಮಾರ್, ಶ್ರೀರಾಮುಲು, ಶಾಸಕರಾದ ಲಾಲಾಜಿ ಆರ್. ಮೆಂಡನ್, ರಘುಪತಿ ಭಟ್, ಬಿ.ಎಂ. ಸುಕುಮಾರ ಶೆಟ್ಟಿ, ಭರತ್ ಶೆಟ್ಟಿ, ವೇದವ್ಯಾಸ ಕಾಮತ್, ಮಂಗಳೂರು ಮೇಯರ್ ಪ್ರೇಮಾನಂದ ಶೆಟ್ಟಿ, ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ ಪಾಲ್ ಸುವರ್ಣ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಬಿಜೆಪಿ ಪ್ರಭಾರಿ ಉದಯ ಕುಮಾರ್ ಶೆಟ್ಟಿ, ಕರ್ನಾಟಕ ರಾಜ್ಯ ಗಂಗಾಮತಸ್ಥರ ಸಂಘದ ರಾಜ್ಯಾಧ್ಯಕ್ಷ ಬಿ. ಮೌಲಾಲಿ, ಬೆಣ್ಣೆಕುದ್ರು‌‌ ಕುಲಮಹಾಸ್ತ್ರೀ ಅಮ್ಮನವರ ದೇವಸ್ಥಾನದ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಎ. ಸಿ. ಕುಂದರ್, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ವಾಸುದೇವ ಸಾಲ್ಯಾನ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗುಂಡು ಬಿ.‌ ಅಮೀನ್ ಮೊದಲಾದವರು ಉಪಸ್ಥಿತರಿದ್ದರು.

ಬ್ರಹ್ಮಕಲಶ ಪುಣ್ಯೋತ್ಸವ ಸಮಿತಿ ಅಧ್ಯಕ್ಷ ನಾಡೋಜ‌ ಡಾ. ಜಿ. ಶಂಕರ್ ಅವರ ನೇತೃತ್ವದಲ್ಲಿ ಮಹಾಲಕ್ಷ್ಮೀ ದೇವಸ್ಥಾನದ ಮುಂದುವರಿದ ಅಭಿವೃದ್ಧಿ ಯೋಜನೆಗಳು ಮತ್ತು ಮೊಗವೀರ ಸಮಾಜದ ವಿವಿಧ ಬೇಡಿಕೆಗಳುಳ್ಳ ಮನವಿಯನ್ನು ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷರಾದ ಜಯ ಸಿ. ಕೋಟ್ಯಾನ್ ಅವರ ಮೂಲಕವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ನೀಡಲಾಯಿತು.

ನಾಡೋಜ ಡಾ. ಜಿ. ಶಂಕರ್ ಸ್ವಾಗತಿಸಿ, ಪ್ರಸ್ತಾವನೆಗೈದರು. ದ.ಕ. ಮೊಗವೀರ ಮಹಾಜನ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಸುಧಾಕರ ಕುಂದರ್ ವಂದಿಸಿದರು. ದಾಮೋದರ ಶರ್ಮಾ ಕಾರ್ಯಕ್ರಮ ನಿರೂಪಿಸಿದರು.

 
 
 
 
 
 
 
 
 
 
 

Leave a Reply