ಫೋಟೊ ಕ್ಲಿಕ್ಕಿಸಿರುತ್ತಿರುವಾಗಲೇ ಕೈ ಕೊಟ್ಟ ಹೃದಯ

ನಗರದ ವೃತ್ತಿನಿರತ ಫೋಟೊಗ್ರಾಫರ್ ಒಬ್ಬರು ಕಾರ್ಯಕ್ರಮವೊಂದರಲ್ಲಿ ಫೋಟೊ ತೆಗೆಯುತ್ತಿರುವಾಗಲೇ ಹೃದಯಾಘಾತದಿಂದ ಕುಸಿದು ಬಿದ್ದು ಮೃತಪಟ್ಟ ಘಟನೆ ಭಾನುವಾರ ಸಂಜೆ ನಡೆದಿದೆ. ಸಾಗರ ತಾಲೂಕಿನ ಹೆಗ್ಗೋಡು ಸಮೀಪದ ಹೆಬ್ಬೈಲಿನ ಸೋಮೇಶ್ವರ ದೇವಸ್ಥಾನದಲ್ಲಿ ಭಾನುವಾರ ಸಂಜೆ ಈ ಘಟನೆ ನಡೆದಿದೆ. ಇಲ್ಲಿನ ರಾಮನಗರದ ನಿವಾಸಿ ಚಂದ್ರು(42) ಮೃತ ಪಟ್ಟ ದುರ್ದೈವಿ.

ಕಾರ್ಯಕ್ರಮದಲ್ಲಿ ಫೋಟೊ ತೆಗೆಯುವ ವೇಳೆ ಚಂದ್ರು ಕುಸಿದು ಬಿದ್ದರು. ತಕ್ಷಣ ಅವರನ್ನು ನಗರದ ಉಪವಿಭಾಗೀಯ ಆಸ್ಪತ್ರೆಗೆ ಸೇರಿಸುವ ಪ್ರಯತ್ನ ನಡೆಯಿತಾದರೂ ಆ ವೇಳೆಗೆ ಕೊನೆಯುಸಿರೆಳೆದಿದ್ದರು. ನಗರದ ಶಿಲ್ಪ ಸ್ಟುಡಿಯೋ ಮಾಲೀಕರಾಗಿದ್ದ ಚಂದ್ರು ಪತ್ನಿ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಎಲ್ಲರೊಂದಿಗೆ ಸ್ನೇಹದಿಂದ ಬೆರೆಯುತ್ತಿದ್ದುದರಿಂದ ದೊಡ್ಡ ಸಂಖ್ಯೆಯ ಸ್ನೇಹಿತರ ಬಳಗ ಅವರದಾಗಿತ್ತು.

 
 
 
 
 
 
 
 
 

Leave a Reply