ಆಶಾ ನಿಲಯದಲ್ಲಿ ಮಾದರಿ ಕೈತೋಟ – ಡಾ.ಧನಂಜಯ

ಮಣಿಪಾಲ : ದಿ. ಟಿ.ಎ.ಪೈಯವರು ಹುಟ್ಟಿದ ದಿನದಂದು  ಮೂರು ಸಂಸ್ಥೆಗಳಿಗೆ ಅಲ್ಲಿರುವ ನಿವಾಸಿಯವರಿಗೆ ಮಧ್ಯಾಹ್ನದ ಊಟದ ಬಗ್ಗೆ ಸ್ವಲ್ಪ ಅಂಶ ಅರ್ಥಿಕ ನೆರವನ್ನು ಹಲವಾರು ವರ್ಷಗಳಿಂದ ಭಾರತೀಯ ವಿಕಾಸ ಟ್ರಸ್ಟ್, ಮಣಿಪಾಲ ನೀಡುತ್ತಾ ಬರುತ್ತಿದೆ. ಒಂದು ಅವರು ಕಲಿತ ಶಾಲೆ ಟಿ.ಎ.ಪೈ ಮೊಡರ್ನ್ ಶಾಲೆ, ಕಾಡಬೆಟ್ಟು, ಮತ್ತು ಆಶಾ ನಿಲಯ, ಭಿನ್ನ ಸಾಮರ್ಥ್ಯದ ಮಕ್ಕಳ ಶಾಲೆ, ಉಡುಪಿ ಹಾಗು  ಬಾಲನಿಕೇತನ, ಕುಕ್ಕಿಕಟ್ಟೆ – ಫೋಷಣೆಯ ಅಗತ್ಯವುಳ್ಳ ಮಕ್ಕಳ ಸಂಸ್ಥೆ.
ಈ ವರ್ಷ ಕೊರೋನಾದಿಂದಾಗಿ ಭಿನ್ನ ಸಾಮರ್ಥ್ಯದ ಮಕ್ಕಳ ಶಾಲೆ – ಆಶಾ ನಿಲಯದ ಮಕ್ಕಳಲ್ಲಿ ಹೆಚ್ಚಿನವರು ಮನೆಗೆ ಹೋಗಿದ್ದರು.  ಆದ್ದರಿಂದ ಸಂಸ್ಥೆಯ ಮುಖ್ಯಸ್ಥರು ಊಟದ ಬಗ್ಗೆ ನೆರವು ನೀಡುವ ಬದಲು ತಮಗೆ ಗ್ರೋ ಬ್ಯಾಗನ್ನು ನೀಡಿದರೆ ಅದರಲ್ಲಿ ಸಂಸ್ಥೆಯಲ್ಲಿ ಸದ್ಯಕ್ಕೆ ಇರುವ ಮಕ್ಕಳು ಮತ್ತು ಶಿಕ್ಷಕರು ಸೇರಿ ತರಕಾರಿಯನ್ನು ಬೆಳೆಸುತ್ತೇವೆ ಎಂದು ಹೇಳಿದುದರ ಮೇರೆಗೆ ಗ್ರೋಬ್ಯಾಗನ್ನು ನೀಡಲಾಯಿತು.  
ಅದರ ಜೊತೆಗೆ ಸಂಸ್ಥೆಯವರು ಪೈಂಟಿನ ಬಕೆಟನ್ನು ಗುಜರಿ ಅಂಗಡಿಯಿಂದ ಖರೀದಿಸಿ, ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರ (ಕೆ.ವಿ.ಕೆ) ದಿಂದ ಉತ್ತಮ ತರಕಾರಿ ಬೀಜ ಬೆಂಡೆ ಮತ್ತು ಅಲಸಂಡೆಯನ್ನು ತಂದು ಅವರಲ್ಲಿಯೇ ಇದ್ದ ಹಟ್ಟಿ ಗೊಬ್ಬರವನ್ನು ಹಾಕಿ ಬೀಜ ಬಿತ್ತಿ ಉತ್ತಮ ರೀತಿಯಲ್ಲಿ ತರಕಾರಿಯನ್ನು ಬೆಳೆಸಿ, ಬೆಳೆದ ತರಕಾರಿಯನ್ನು ಮಾರಾಟ ಮಾಡಿ ಉತ್ತಮ ಆದಾಯವನ್ನು ಗಳಿಸಿದ್ದಾರೆ. 
ಇತ್ತೀಚೆಗೆ ಕೆ.ವಿ.ಕೆ ಮುಖ್ಯಸ್ಥರು, ಹಿರಿಯ ವಿಜ್ಞಾನಿ ಡಾ.ಧನಂಜಯ ಮತ್ತು ಡಾ. ಸಚ್ಚಿನ್ ಯು.ಎಸ್ ಕೀಟಶಾಸ್ತ್ರ ತಜ್ಞರು  ಸಂಸ್ಥೆಗೆ ಭೇಟಿ ನೀಡಿ ಅಲ್ಲಿ ಬೆಳೆದ ತರಕಾರಿಯನ್ನು ನೋಡಿ ಬಹಳ ಮೆಚ್ಚುಗೆ ವ್ಯಕ್ತ ಪಡಿಸಿದುದಲ್ಲದೆ, ಕೆ.ವಿ.ಕೆಯು ತಮಗೆ  ಸೂಕ್ತ ಮಾರ್ಗದರ್ಶನವನ್ನು ನೀಡಲು ಸದಾ ಸಿದ್ಧವಿದೆ.  
ಇನ್ನೂ ಮುಂದೆಯೂ ತಮಗೆ ಬೇಕಾದ ತರಕಾರಿ ಬೀಜವನ್ನು ಉಚಿತವಾಗಿ ನೀಡುವ ಭರವಸೆ ನೀಡಿದರು. ಅಲ್ಲದೆ ಇಲ್ಲಿಯ ಕೈತೋಟ ಎಲ್ಲರಿಗೂ ಮಾದರಿಯಾಗಿದೆ.  ಯಾವ ರಾಸಾಯನಿಕ ಗೊಬ್ಬರ ಅಥವಾ ಕೀಟ ನಾಶಕವನ್ನು ಬಳಸದೆ ತೋಟವು ತರಕಾರಿಯಿಂದ ಸಮೃದ್ಧವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
 
ಬಿವಿಟಿಯ ಕಾರ್ಯಕ್ರಮ ಸಂಯೋಜಕಿ ಎ.ಲಕ್ಷ್ಮೀ ಬಾಯಿ ಸಂಸ್ಥೆಯ ಮುಖ್ಯಸ್ಥೆ ಶಶಿ ಕೋಟ್ಯಾನ್. ಶಿಕ್ಷಕ ವೃಂದ, ಕೆಲವು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
 
 
 
 
 
 
 
 
 
 
 

Leave a Reply