Janardhan Kodavoor/ Team KaravaliXpress
25.6 C
Udupi
Thursday, September 29, 2022
Sathyanatha Stores Brahmavara

ಬುಕ್ ಬ್ರಹ್ಮ ಕಥಾ ಸ್ಪರ್ಧೆ 2022ʼರ ಪ್ರಶಸ್ತಿ ಪ್ರಕಟಣೆ

ಬುಕ್‌ ಬ್ರಹ್ಮ ಅವರ ಆಶ್ರಯದಲ್ಲಿ ಬ್ರೀವಿಂಗ್‌ ಗ್ಯಾಜೆಟ್ಸ್, ನವಕರ್ನಾಟಕ ಪ್ರಕಾಶನ, ಫೆರ್ಬಿಂಡನ್‌ ಮತ್ತು ಕಾಗ್ನಿಕ್ವೆಸ್ಟ್ ಇವರ ಸಹಯೋಗದಲ್ಲಿ ಆಯೋಜಿಸಿದ್ದ ‌ʻಕಥಾ ಸ್ಪರ್ಧೆ 2022ʼರ ಪ್ರಶಸ್ತಿ ಪ್ರಕಟಿಸಲಾಗಿದೆ.

ಮೊದಲ ಬಹುಮಾನ ಪೂರ್ಣಿಮಾ ಮಾಳಗಿಮನಿ ಅವರ ’ವಿನ್ನರ್ ವಿನ್ನರ್ ಚಿಕನ್ ಡಿನ್ನರ” ಕಥೆಗೆ ದೊರೆತಿದೆ.ಅವರಿಗೆ 50 ಸಾವಿರ ರೂ. ನಗದು ಮತ್ತು ಪ್ರಶಸ್ತಿ ಫಲಕ ದೊರೆತಿದೆ.

ಎರಡನೇ ಬಹುಮಾನ ಬಸವಣ್ಣೆಪ್ಪ ಕಂಬಾರ ಅವರ ’ನೆರಳ ನರ್ತನ’ ಕಥೆಗೆ ಲಭಿಸಿದ್ದು, 25 ಸಾವಿರ ರೂ. ನಗದು ಮತ್ತು ಪ್ರಶಸ್ತಿ ಫಲಕ ದೊರೆತಿದೆ.

ಮೂರನೇ ಬಹುಮಾನ ಸಂದೀಪ ನಾಯಕ ಅವರ ’ಚಂದ್ರಶಾಲೆಯಲ್ಲಿ ನಿಂತ ತೇರು’ ಕಥೆಗೆ ದೊರೆತಿದ್ದು, 15 ಸಾವಿರ ರೂ. ನಗದು ಮತ್ತು ಪ್ರಶಸ್ತಿ ಫಲಕ ದೊರೆತಿದೆ.

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ, ಕೊಂಕಣಿ ಕಥೆಗಾರ ದಾಮೋದರ ಮಾವಜೊ ಪ್ರಶಸ್ತಿ ಘೋಷಿಸಿದರು. ಈ ಹಂತದಲ್ಲಿ ಬುಕ್‌ ಬ್ರಹ್ಮದ ಮುಖ್ಯಸ್ಥ ಸತೀಶ್‌ ಚಪ್ಪರಿಕೆ ಅವರು ಪ್ರಶಸ್ತಿಗೆ ಆಯ್ಕೆಯಾದ ಕತೆಗಾರರೊಂದಿಗೆ ಸಂವಾದ ನಡೆಸಿದರು. ಮೊದಲ, ಎರಡನೆಯ ಮತ್ತು ಮೂರನೆಯ ಪ್ರಶಸ್ತಿಗೆ ವಿಜೇತರ ಹೆಸರು ಪ್ರಕಟಿಸುವ ಹೊತ್ತಿನಲ್ಲಿ ಆ ಮೂವರು ಕಥೆಗಾರರನ್ನು ವೇದಿಕೆಗೆ ಆಹ್ವಾನಿಸಲಾಯಿತು.

ಅನುಪಮಾ ಪ್ರಸಾದ್ ಅವರ ’ಕುಂತ್ಯಮ್ಮಳ ಮಾರಾಪು’, ಮೌನೇಶ ಬಡಿಗೇರ ಅವರ ’ಒಂಟಿ ಓಲೆಯ ಮುತ್ತು’, ನಂದಿನಿ ಹೆದ್ದುರ್ಗ ಅವರ ’ಬಾಗಿದ ರೆಪ್ಪೆಯ ಅಡಗುತಾಣದಲ್ಲಿ’ ಕಥೆಗಳು ಸಮಾಧಾನಕರ ಬಹುಮಾನ ಪಡೆದಿವೆ. ಸಮಾಧಾನಕರ ಬಹುಮಾನ ಪಡೆದ ಕತೆಗಳಿಗೆ ತಲಾ ಐದು ಸಾವಿರ ರೂ. ನಗದು ಮತ್ತು ಪ್ರಶಸ್ತಿ ಫಲಕ ದೊರೆತಿದೆ. ಉಳಿದ 14 ಕಥೆಗಾರರಿಗೆ ತಲಾ ಒಂದು ಸಾವಿರ ರೊ ನಗದು ಮತ್ತು ಪ್ರಶಸ್ತಿ ಫಲಕ ನೀಡಲಾಯಿತು.

ಕಥಾಸ್ಪರ್ಧೆಯ ವಿಜೇತರು ಯಾರು ಎಂಬುದು ಕಟ್ಟ ಕಡೆಯ ಕ್ಷಣದವರೆಗೂ ರಹಸ್ಯವಾಗಿಯೇ ಇತ್ತು. ವಿಜೇತರಿವರು ಎಂಬುದು ಪ್ರಕಟವಾಗುವ ಹೊತ್ತಿಗೆ ಕಾರ್‍ಯಕ್ರಮ ಅಂತಿಮ ಹಂತ ಮುಟ್ಟಿತ್ತು.

ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿರ್ದೇಶಕ ಗಿರೀಶ್‌ ಕಾಸರವಳ್ಳಿ ಅವರು ಕಥಾ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನಗಳನ್ನು ಪಡೆದ ಕಥೆಗಳನ್ನು ಪ್ರಕಟಿಸಿದರು. ವಿಷಣ್ಣ ಭಾವದಲ್ಲಿರುವ ಈ ಕಾಲವನ್ನು ನಮ್ಮ ಕತೆಗಾರರು ಹೇಗೆ ಚಿತ್ರಿಸಿದ್ದಾರೆ ಎಂಬುದು ಕುತೂಹಲಕರ ಎಂದು ಅವರು ಹೇಳಿದರು.

ಇನ್ಫೋಸಿಸ್ ಬೆಂಗಳೂರು ಕೇಂದ್ರದ ಮುಖ್ಯಸ್ಥ, ಸೀನಿಯರ್‌ ವೈಸ್‌ ಪ್ರೆಸಿಡೆಂಟ್‌ ಗುರುರಾಜ ದೇಶಪಾಂಡೆ, ಕನ್ನಡಕ್ಕಾಗಿ ಬುಕ್ ಬ್ರಹ್ಮ ಮಾಡುತ್ತಿರುವ ಕೆಲಸವನ್ನು ಶ್ಲಾಘಿಸಿದರು.

ಕಥಾಸ್ಪರ್ಧೆ ತೀರ್ಪುಗಾರರಾಗಿದ್ದ ಜಿ.ಎನ್.ರಂಗನಾಥರಾವ್, ಶ್ರೀಧರ ಬಳಗಾರ, ಕೇಶವ ಮಳಗಿ, ಆಶಾದೇವಿ ಉಪಸ್ಥಿತರಿದ್ದರು.ಕಥಾಸ್ಪರ್ಧೆಗೆ ಬಂದಿದ್ದ ಕಡೆಯ ಸುತ್ತಿನ 50 ಕಥೆಗಳನ್ನು ಓದಿದ ಹಿನ್ನೆಲೆಯಲ್ಲಿ, ಕಥೆಗಳು ಪಡೆದುಕೊಳ್ಳುತ್ತಿರುವ ಇವತ್ತಿನ ನಿಲುವು ಒಲವುಗಳ ಬಗ್ಗೆ ಆಶಾದೇವಿ ಅವರು ಮಾತನಾಡಿದರು. ಕನ್ನಡ ಕಾವ್ಯ, ಕಥೆ ಮತ್ತು ವಿಮರ್ಶೆ ಯಾವ ಅನುಮಾನವೂ ಇಲ್ಲದೆ ಎಲ್ಲ ಭಾಷೆಗಳಿಗಿಂತ ಮುಂದಿದೆ ಎಂದು ಅವರು ಹೇಳಿದರು. ನವಕರ್ನಾಟಕ ಪ್ರಕಾಶನದ ರಮೇಶ್ ಉಡುಪ, ಅಂಕಿತ ಪುಸ್ತಕದ ಪ್ರಕಾಶ್ ಕಂಬತ್ತಳ್ಳಿ ಪಾಲ್ಗೊಂಡಿದ್ದರು.

ಯಕ್ಷಗಾನ ಕಲಾವಿದೆ ಅಶ್ವಿನಿ ಕೊಂಡದಕುಳಿ ಅವರ ರಂಗಪ್ರವೇಶವಾಗುವುದರೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಬುಕ್ ಬ್ರಹ್ಮ ಪ್ರಧಾನ ಸಂಪಾದಕ ದೇವು ಪತ್ತಾರ್ ಸ್ವಾಗತಿಸಿದರು. ಬುಕ್ ಬ್ರಹ್ಮ ಸಿಇಒ ಉಷಾ ಪ್ರಸಾದ್ ವಂದಿಸಿದರು. ವತ್ಸಲಾ ಮೋಹನ್, ಸ್ವಸ್ತಿಕಾ ಶೆಟ್ಟಿ ನಿರೂಪಿಸಿದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!