Janardhan Kodavoor/ Team KaravaliXpress
27.6 C
Udupi
Wednesday, August 17, 2022
Sathyanatha Stores Brahmavara

ಡಾ! ಶ್ಯಾಮಪ್ರಸಾದ್ ಮುಖರ್ಜಿ ಹಾಗೂ ಡಾ! ವಿ.ಎಸ್. ಆಚಾರ್ಯ ರವರ ಜನ್ಮ ದಿನಾಚರಣೆ ಕಾರ್ಯಕ್ರಮ

ಭಾರತೀಯ ಜನಸಂಘದ ಸಂಸ್ಥಾಪಕ ಡಾ! ಶ್ಯಾಮಪ್ರಸಾದ್ ಮುಖರ್ಜಿಯವರ ಪ್ರೇರಣೆ ಹಾಗೂ ನವ ಉಡುಪಿಯ ನಿರ್ಮಾತೃ ಡಾ! ವಿ.ಎಸ್. ಆಚಾರ್ಯರವರ ಮಾರ್ಗದರ್ಶನ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಿಗೆ ಸದಾ ಸ್ಪೂರ್ತಿದಾಯಕ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದರು.

ಅವರು ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಜು.6ರಂದು ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆದ ಡಾ! ಶ್ಯಾಮಪ್ರಸಾದ್ ಮುಖರ್ಜಿ ಹಾಗೂ ಡಾ! ವಿ.ಎಸ್. ಆಚಾರ್ಯ ರವರ ಜನ್ಮ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಪುಷ್ಪಾರ್ಚನೆಗೈದು ಮಾತನಾಡಿದರು.

ಜವಾಹರಲಾಲ್ ನೆಹರು ಸಂಪುಟದಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಮಂತ್ರಿಗಳಾಗಿದ್ದ ಡಾ! ಶ್ಯಾಮಪ್ರಸಾದ್ ಮುಖರ್ಜಿಯವರು ನೆಹರುರವರ ತುಷ್ಠೀಕರಣ ನೀತಿ, ಪಾಶ್ಚಾತ್ಯ ವಿಚಾರಧಾರೆ ಹಾಗೂ ಜಮ್ಮು ಕಾಶ್ಮೀರ ವಿಚಾರದ ನಿಲುವನ್ನು ವಿರೋಧಿಸಿ ಸಂಪುಟಕ್ಕೆ ರಾಜೀನಾಮೆ ನೀಡಿದರು. ನೆಹರು ಮತ್ತು ಕಾಂಗ್ರೆಸ್ ಧೋರಣೆಯಿಂದ ದೇಶದ ಅಖಂಡತೆ, ಸುಭಿಕ್ಷೆ ಮತ್ತು ಸಂಸ್ಕೃತಿಯ ವಿಚಾರಕ್ಕೆ ತೊಂದರೆಯಾಗುತ್ತದೆ ಎಂಬುದನ್ನು ಅರಿತ ಡಾ! ಶ್ಯಾಮಪ್ರಸಾದ್ ಮುಖರ್ಜಿಯವರು ಭಾರತೀಯ ಜನಸಂಘವನ್ನು ಸ್ಥಾಪಿಸಿದರು.

ಒಂದು ದೇಶದಲ್ಲಿ ಒಂದೇ ಪ್ರಧಾನಿ, ಒಂದೇ ಸಂವಿಧಾನ ಮತ್ತು ಒಂದೇ ಧ್ವಜ ಇರಬೇಕು. ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಮಾತ್ರವಲ್ಲದೆ ಭಾರತದ ಸಂವಿಧಾನವೇ ಪೂರ್ಣವಾಗಿ ಅಲ್ಲಿಗೂ ಅನ್ವಯವಾಗಬೇಕು ಎಂಬ ತತ್ವ ಸಿದ್ದಾಂತದೊಂದಿಗೆ ಡಾ! ಮುಖರ್ಜಿಯವರು ಜಮ್ಮು ಕಾಶ್ಮೀರದ 370ನೇ ವಿಧಿ ರದ್ಧತಿ ಹಾಗೂ ವಿಶೇಷ ಸ್ಥಾನಮಾನ ರದ್ದು ಮಾಡುವಂತೆ ಹೋರಾಟ ರೂಪಿಸಿದ್ದರು. ಜಮ್ಮು ಮತ್ತು ಕಾಶ್ಮೀರ ಸಂಪೂರ್ಣವಾಗಿ ಭಾರತದೊಂದಿಗೆ ವಿಲೀನವಾಗಬೇಕೆಂಬ ಅವರ ಮಹಾತ್ವಾಕಾಂಕ್ಷೆಯ ಹೋರಾಟದಲ್ಲಿ ಕಾಶ್ಮೀರ ಪ್ತವೇಶಿಸಿದ ಸಂದರ್ಭದಲ್ಲಿ ಅವರ ಬಂಧನವಾಗುತ್ತದೆ. ಶ್ರೀನಗರದಲ್ಲಿ ನಡೆದ ಅವರ ನಿಗೂಢ ಸಾವಿನ ಬಗ್ಗೆ ದೇಶದ ಜನತೆಗೆ ಇಂದಿಗೂ ಸ್ಪಷ್ಟತೆ ಸಿಕ್ಕಿಲ್ಲ.

ಡಾ! ಮುಖರ್ಜಿಯವರು ಭಾರತೀಯ ಜನಸಂಘವನ್ನು ಸ್ಥಾಪನೆ ಮೂಲಕ ಸರಕಾರ ಮತ್ತು ಪಕ್ಷ ಹೇಗಿರಬೇಕು ಎಂಬ ಚಿಂತನೆ ಮತ್ತು ಮಾರ್ಗದರ್ಶನ ನೀಡಿದರು. ಅವರ ಉದಾತ್ತ ಚಿಂತನೆಯಂತೆ ಇಂದು ಪಕ್ಷವು ಸದೃಢವಾಗಿ ಬೆಳೆದಿದೆ. ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ಹಾಗೂ 370ನೇ ವಿಧಿ ರದ್ದುಗೊಂಡಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯವರ ನೇತೃತ್ವದಲ್ಲಿ ಸಾರ್ಥಕ ಜನಪರ ಆಡಳಿತ ನೀಡುವ ಮೂಲಕ ಡಾ! ಶ್ಯಾಮಪ್ರಸಾದ್ ಮುಖರ್ಜಿಯವರ ದೂರದರ್ಶಿತ್ವದ ಚಿಂತನೆಗಳನ್ನು ಸಾಕಾರಗೊಳಿಸುತ್ತಿವೆ ಎಂದು ಕುಯಿಲಾಡಿ ಹೇಳಿದರು.

ಪ್ರಭಾವಿ ಹಾಗೂ ಹಿರಿಯ ರಾಜಕೀಯ ಮುತ್ಸದ್ಧಿಯಾಗಿದ್ದ ಡಾ! ವಿ.ಎಸ್. ಆಚಾರ್ಯರವರು ಉತ್ತಮ ಆಡಳಿತಗಾರರಾಗಿ ಸ್ಟೇಟ್ ಮೆನ್ ಎನಿಸಿಕೊಂಡಿದ್ದರು. ರಾಜ್ಯ ಸರಕಾರದ ಕ್ಲಿಷ್ಟಕರ ವಿಚಾರಗಳಲ್ಲಿ ಎಲ್ಲರೂ ಒಪ್ಪುವಂತಹ ಸಲಹೆ ಸೂಚನೆಗಳನ್ನು ನೀಡುತ್ತಿದ್ದರು‌. ಉಡುಪಿ ನಗರಸಭೆಯ ಅಧ್ಯಕ್ಷರಾಗಿ, ವಿಧಾನಸಭಾ ಸದಸ್ಯರಾಗಿ, ವಿಧಾನ ಪರಿಷತ್ ಸದಸ್ಯರಾಗಿ, ಉನ್ನತ ಶಿಕ್ಷಣ, ವೈದ್ಯಕೀಯ ಶಿಕ್ಷಣ, ಧಾರ್ಮಿಕ ದತ್ತಿ ಇಲಾಖೆ ಹಾಗೂ ಗೃಹ ಸಚಿವರಾಗಿ ಸಾರ್ಥಕ ಸೇವೆ ಸಲ್ಲಿಸಿರುವ ಡಾ! ವಿ.ಎಸ್. ಆಚಾರ್ಯರ ಸಚ್ಚಾರಿತ್ರ್ಯವಂತ ವ್ಯಕ್ತಿತ್ವ ಮತ್ತು ಮಾರ್ಗದರ್ಶನ ಪಕ್ಷದ ಕಾರ್ಯಕರ್ತರಿಗೆ ಸದಾ ಪ್ರೇರಣಾದಾಯಕ ಎಂದು ಕುಯಿಲಾಡಿ ಹೇಳಿದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಹಾಗೂ ಕಾರ್ಯಕ್ರಮದ ಸಂಚಾಲಕ ಪೆರ್ಣಂಕಿಲ ಶ್ರೀಶ ನಾಯಕ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮನೋಹರ್ ಎಸ್. ಕಲ್ಮಾಡಿ, ಉಡುಪಿ ನಗರಸಭೆಯ ಅಧ್ಯಕ್ಷೆ ಸುಮಿತ್ರಾ ನಾಯಕ್, ರಾಜ್ಯ ಎಸ್.ಸಿ. ಮೋರ್ಚಾ ಪ್ರಧಾನ ಕಾರ್ಯದರ್ಶಿ ದಿನಕರ ಬಾಬು, ರಾಜ್ಯ ಅಲ್ಪಸಂಖ್ಯಾತ ಮೋರ್ಚಾ ಉಪಾಧ್ಯಕ್ಷ ಸಲೀಂ ಅಂಬಾಗಿಲು, ಬಿಜೆಪಿ ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಸತ್ಯಾನಂದ ನಾಯಕ್, ಜಿಲ್ಲಾ ವಕ್ತಾರ ಗುರುಪ್ರಸಾದ್ ಶೆಟ್ಟಿ ಕಟಪಾಡಿ, ಜಿಲ್ಲಾ ಕಾರ್ಯದರ್ಶಿ ನಳಿನಿ ಪ್ರದೀಪ್ ರಾವ್, ಜಿಲ್ಲಾ ಪದಾಧಿಕಾರಿಗಳು, ಜಿಲ್ಲಾ ಮೋರ್ಚಾ, ಜಿಲ್ಲಾ ಪ್ರಕೋಷ್ಠ, ಮಂಡಲಗಳ ಪದಾಧಿಕಾರಿಗಳು, ನಗರಸಭಾ ಸದಸ್ಯರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಬಿಜೆಪಿ ಜಿಲ್ಲಾ ಸಹ ವಕ್ತಾರ ಹಾಗೂ ಕಾರ್ಯಕ್ರಮದ ಸಹ ಸಂಚಾಲಕ ಗಿರೀಶ್ ಎಮ್. ಅಂಚನ್ ಸ್ವಾಗತಿಸಿದರು. ಜಿಲ್ಲಾ ಮಾಧ್ಯಮ ಸಂಚಾಲಕ ಶ್ರೀನಿಧಿ ಹೆಗ್ಡೆ ಕಾರ್ಯಕ್ರಮ ನಿರೂಪಿಸಿ, ಜಿಲ್ಲಾ ಸಹ ವಕ್ತಾರ ಶಿವಕುಮಾರ್ ಅಂಬಲಪಾಡಿ ವಂದಿಸಿದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!