ರಾಜಸ್ಥಾನದ ಕಾಂಗ್ರೆಸ್ ಸರಕಾರವನ್ನು ಬರ್ಖಾಸ್ತು ಮಾಡಲು ಎನ್. ರವಿಕುಮಾರ್ ಆಗ್ರಹ

ಬೆಂಗಳೂರು: ನೂಪುರ್ ಶರ್ಮರ ಹೇಳಿಕೆಯನ್ನು ಬೆಂಬಲಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ರಾಜಸ್ಥಾನದ ಉದಯಪುರದ ಟೈಲರ್ ಕನ್ಹಯ್ಯಲಾಲ್ ಅವರನ್ನು ಅತ್ಯಂತ ಭಯಾನಕ, ಭೀಭತ್ಸ, ಕ್ರೂರವಾಗಿ ಹತ್ಯೆ ಮಾಡಲಾಗಿದೆ. ಕುರಿ, ಕೋಳಿ ಹತ್ಯೆಗಿಂತ ಭೀಕರವಾಗಿ ಹತ್ಯೆ ನಡೆದಿದೆ. ಇದು ಅತ್ಯಂತ ಖಂಡನೀಯ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್ ಅವರು ಟೀಕಿಸಿದರು.

ಬೆಂಗಳೂರಿನ ಬಿಜೆಪಿ ನಗರ ಕಾರ್ಯಾಲಯ “ಭಾವುರಾವ್ ದೇಶಪಾಂಡೆ ಭವನ” ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಡಿಯೋ ಮಾಡಿ ಹತ್ಯೆ ಮಾಡಲಾಗಿದೆ. ಹಂತಕರನ್ನು ಬಂಧಿಸಲಾಗಿದೆ. ಇದು ಈ ದೇಶದಲ್ಲಿ ಈಚೆಗೆ ನಡೆದ ಅತ್ಯಂತ ಭೀಕರ ಘಟನೆ. ಅಲ್ಲಿನ ಮುಖ್ಯಮಂತ್ರಿಯವರು ನರೇಂದ್ರ ಮೋದಿಯವರು ಮತ್ತು ಅಮಿತ್ ಶಾ ಅವರನ್ನು ಖಂಡಿಸಿದ್ದು ಅತ್ಯಂತ ನಾಚಿಕೆಗೇಡಿನ ಸಂಗತಿ ಎಂದು ಖಂಡಿಸಿದರು.

ಕನ್ಹಯ್ಯಲಾಲ್ 15 ದಿನ ಮೊದಲೇ ಜೀವ ಬೆದರಿಕೆಯ ಕುರಿತು ಪೊಲೀಸರಿಗೆ ದೂರು ನೀಡಿದ್ದರು. ಆದರೆ, ಅಲ್ಲಿನ ಪೊಲೀಸರು ರಾಜಿ ಮಾಡಿಸಿದ್ದರು. ಆದ್ದರಿಂದ ಈ ದುರ್ಘಟನೆಗೆ ಕಾಂಗ್ರೆಸ್ ಸರಕಾರವೇ ಕಾರಣ ಎಂದ ಅವರು, ಪ್ರತಿಭಟನೆ ಮಾಡುವ ಸಿದ್ದರಾಮಯ್ಯ ಎಲ್ಲಿ ಹೋಗಿದ್ದಾರೆ? ಎಂದು ಪ್ರಶ್ನಿಸಿದರು. ಆದ್ದರಿಂದ ಹತ್ಯೆಗೆ ನೇರ ಕಾರಣವಾದ ರಾಜಸ್ಥಾನದ ಕಾಂಗ್ರೆಸ್ ಸರಕಾರವನ್ನು ಬರ್ಖಾಸ್ತು ಮಾಡಬೇಕೆಂದು ಅವರು ರಾಷ್ಟ್ರಪತಿಗಳು ಮತ್ತು ಕೇಂದ್ರ ಸರಕಾರವನ್ನು ಆಗ್ರಹಿಸಿದರು.

ಕುರಿ, ಮೇಕೆಗಳಂತೆ ಕಾಶ್ಮೀರಿ ಪಂಡಿತರ ಹತ್ಯೆ:

ಕಾಶ್ಮೀರಿ ಪಂಡಿತರನ್ನು ಇದೇ ರೀತಿ ಕುರಿ, ಮೇಕೆಗಳಂತೆ ಹತ್ಯೆ ಮಾಡಿದ್ದರು. ಉಟ್ಟ ಬಟ್ಟೆಯಲ್ಲಿ ಓಡುವಂತೆ ಮಾಡಿದ್ದರು. ಅವತ್ತೇ ಇದನ್ನು ನಿಯಂತ್ರಿಸಿದ್ದರೆ ಈ ರೀತಿ ಅಟ್ಟಹಾಸ, ಅಹಂಕಾರ ಮೆರೆಯಲು ಅವಕಾಶ ಇರುತ್ತಿರಲಿಲ್ಲ. ಪರಿಣಾಮವಾಗಿ ಕರ್ನಾಟಕದಲ್ಲೂ ಹರ್ಷನ ಕೊಲೆ ನಡೆಯಿತು. ಅದೇ ಕತ್ತಿಗಳೇ ಕನ್ಹಯ್ಯ ಲಾಲ್ ಹತ್ಯೆ ಮಾಡಿವೆ ಎಂದು ಆರೋಪಿಸಿದರು. ಅವರನ್ನು ಕಂಡರೆ ಪ್ರೀತಿ, ತಿಲಕ ಕಂಡರೆ ಭೀತಿ ಎಂಬುದು ಕಾಂಗ್ರೆಸ್ ನೀತಿಯೇ ಎಂದು ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಅವರನ್ನು ಪ್ರಶ್ನಿಸಿದರು.

ನ್ಯಾಷನಲ್ ಹೆರಾಲ್ಡ್ ಕುರಿತು ವಾರಗಟ್ಟಲೆ ಪ್ರತಿಭಟನೆ ಮಾಡಿದ ಕಾಂಗ್ರೆಸ್ಸಿಗರಿಗೆ ನಮ್ಮ ದೇಶದ ಬಗ್ಗೆ ನಿಜಕ್ಕೂ ಪ್ರೀತಿ ಇದ್ದರೆ, ಸೆಕ್ಯುಲರಿಸಂ ನೀತಿ ಬಗ್ಗೆ, ರಾಷ್ಟ್ರೀಯತೆ ಬಗ್ಗೆ ಪ್ರೀತಿ ಇದ್ದರೆ ಕನ್ಹಯ್ಯ ಲಾಲ್ ಘಟನೆ ವಿರುದ್ಧ ದೇಶದಲ್ಲಿ ಕಾಂಗ್ರೆಸ್‍ನಿಂದ ಎಷ್ಟು ಪ್ರತಿಭಟನೆ ನಡೆದಿದೆ ಎಂದು ಲೆಕ್ಕ ಕೊಡಬೇಕು ಎಂದು ಆಗ್ರಹಿಸಿದರು. ಅವರು ಮಾತ್ರ ನಿಮಗೆ ಮತ ಚಲಾಯಿಸುತ್ತಾರೆಯೇ? ಉಳಿದವರು ಮತ ನೀಡುವುದಿಲ್ಲವೇ? ಕತ್ತಿ ಕಂಡರೆ ಪ್ರೀತಿ ನಿಮ್ಮ ರಾಷ್ಟ್ರೀಯತೆಯೇ ಎಂದು ಕೇಳಿದರು.

ವಿಪರೀತ ತುಷ್ಟೀಕರಣವೇ ಇದೆಲ್ಲದಕ್ಕೂ ಕಾರಣ ಎಂದ ಅವರು, ಧಾರವಾಡದಲ್ಲಿ ಕಲ್ಲಂಗಡಿ ಹಣ್ಣನ್ನು ಕೊಯ್ದು ಬಿಸಾಡಿದಾಗ ಸಿದ್ದರಾಮಯ್ಯ ಎಷ್ಟು ಪೌರುಷದಿಂದ ಮಾತನಾಡಿದ್ದರು? ಎಷ್ಟು ಠೇಂಕಾರದಿಂದ ಖಂಡಿಸಿದ್ದರು? ಕನ್ಹಯ್ಯ ಲಾಲ್ ಹತ್ಯೆ ವೇಳೆ ರಕ್ತದ ಹೊಳೆ ಹರಿಸಿದರು; ಚೀತ್ಕರಿಸಿದರೂ ಬಿಡಲಿಲ್ಲ. ನರೇಂದ್ರ ಮೋದಿಯವರಿಗೆ ಎಚ್ಚರಿಕೆ ಕೊಟ್ಟರು. ಆದರೆ, ರಾಜಸ್ಥಾನದ ಕಾಂಗ್ರೆಸ್ ಸರಕಾರ ಮೌನವಾಗಿತ್ತು. ಈ ಆರೋಪಿಗಳಿಗೆ ಕಠಿಣ ಶಿಕ್ಷೆಯನ್ನು ಕೊಡಬೇಕು ಎಂದು ಒತ್ತಾಯಿಸಿದರು.

ಉದಯಪುರ ವಿಚಾರದಲ್ಲಿ ಕಾಂಗ್ರೆಸ್‍ನ ವರ್ತನೆಯನ್ನು ಜನರು ಗಮನಿಸುತ್ತಿದ್ದಾರೆ. ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಪ್ರಿಯಾಂಕ ಗಾಂಧಿ ಅವರು ಒಂದು ಗಟ್ಟಿಧ್ವನಿಯ ಹೇಳಿಕೆಯನ್ನೂ ನೀಡಿಲ್ಲ ಎಂದು ಆಕ್ಷೇಪಿಸಿದರು. ಬಿಜೆಪಿ ಒಂದು ಜವಾಬ್ದಾರಿಯುತ ಪಕ್ಷವಾಗಿ ಇಡೀ ದೇಶದಲ್ಲಿ ಪ್ರತಿಭಟನೆ ನಡೆಸುತ್ತಿದೆ; ಇಡೀ ದೇಶದ ಜನರು ಇದನ್ನು ಖಂಡಿಸುತ್ತಿದ್ದಾರೆ ಎಂದರು.

ಹಿಂದುಗಳು ಬಿಟ್ಟಿಯಾಗಿ ಸಿಗುತ್ತಾರಾ? ಹಿಂದುಗಳು ಬಿಟ್ಟಿಯಾಗಿ ಸಿಗುತ್ತಾರಾ? ಸೆಕ್ಯುಲರ್ ನ ಪರಮೋಚ್ಛ ನಾಯಕರಾದ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಈ ಪ್ರಶ್ನೆಗೆ ಉತ್ತರ ಕೊಡಲಿ ಎಂದು ಆಗ್ರಹಿಸಿದರು. ನಿಮ್ಮ ಸೆಕ್ಯುಲರಿಸಂ, ನ್ಯಾಷನಾಲಿಟಿ ಎಲ್ಲಿ ಹೋಗಿದೆ. ಅದನ್ನು ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಅಡವಿಟ್ಟಿದ್ದೀರಾ? ಎಂದು ಕೇಳಿದರು.

ಕಾಂಗ್ರೆಸ್ಸಿಗರು ಸಿದ್ದರಾಮಯ್ಯ ಆಡಳಿತವಿದ್ದಾಗ ಕೆಎಫ್‍ಡಿ, ಎಸ್‍ಡಿಪಿಐ, ಪಿಎಫ್‍ಐನ 1,600 ಜನರ ಮೇಲಿದ್ದ 175 ಪ್ರಕರಣಗಳನ್ನು ರದ್ದುಪಡಿಸಿದ್ದರು. ನಿನ್ನೆ ಕತ್ತಿಯಿಂದ ಹತ್ಯೆ ಆದರೂ ಒಂದು ಗಟ್ಟಿಧ್ವನಿಯ ಹೇಳಿಕೆಯನ್ನು ಕೂಡಲೇ ಕೊಡಲಿಲ್ಲ. ಮುಸಲ್ಮಾನನ ಹತ್ಯೆ ಆಗುತ್ತಿದ್ದರೆ ಇಡೀ ದೇಶದಲ್ಲಿ ಕಾಂಗ್ರೆಸ್ ಬೀದಿಗೆ ಇಳಿದು ಪ್ರತಿಭಟಿಸುತ್ತಿತ್ತು ಎಂದು ಟೀಕಿಸಿದರು.

ಐಸಿಸ್ (ಐಎಸ್‍ಐಎಸ್) ಸಿರಿಯಕ್ಕೆ ಮಾತ್ರ ಸೀಮಿತವಾಗಿತ್ತು. ಇವತ್ತು ರಾಜಸ್ಥಾನಕ್ಕೆ ಬಂದಿದೆ. ಕಾಶ್ಮೀರಕ್ಕೆ ಈ ಹಿಂದೆಯೇ ಬಂದಿದೆ. ನಾಳೆ ನಮ್ಮ ಮನೆ ಬಾಗಿಲಿಗೆ ಬರಬಹುದು. ಇದಕ್ಕೆ ಕಾಂಗ್ರೆಸ್ಸೇ ಕಾರಣ. ಐಸಿಸ್ ಮತ್ತು ಕಾಂಗ್ರೆಸ್ ಸಹೋದರರಂತಿವೆ. ಐಸಿಸ್, ಕಾಂಗ್ರೆಸ್ ಕೆಎಫ್‍ಡಿ, ಎಸ್‍ಡಿಪಿಐ ಮತ್ತು ಪಿಎಫ್‍ಐ ಇವೆಲ್ಲವೂ ಒಂದು ಪರಿವಾರದಂತಿವೆ ಎಂದು ತಿಳಿಸಿದರು. 

ಕಾಂಗ್ರೆಸ್ಸಿಗರಿಗೆ ಪ್ರಶ್ನೆಗಳು:

1. ನೀವು ರಾಷ್ಟ್ರೀಯ ಕಾಂಗ್ರೆಸ್ ಎನ್ನುತ್ತೀರಿ. ನೀವು ಕೆಎಫ್‍ಡಿ, ಎಸ್‍ಡಿಪಿಐ ಮತ್ತು ಪಿಎಫ್‍ಐಯ 1,600 ಜನರ ಮೇಲಿದ್ದ 175 ಪ್ರಕರಣಗಳನ್ನು ಯಾಕೆ ರದ್ದುಪಡಿಸಿದಿರಿ?

2. ಹರ್ಷನ ಹತ್ಯೆ ಮಾಡಿದ ಕತ್ತಿ, ಕಾಶ್ಮೀರಿ ಪಂಡಿತರÀನ್ನು ಹತ್ಯೆ ಮಾಡಿದ ಕತ್ತಿ, ಉದಯಪುರದಲ್ಲಿ ಕನ್ಹಯ್ಯಲಾಲ್ ಹತ್ಯೆ ಮಾಡಿದ ಕತ್ತಿ- ಈ ಮೂರೂ ಒಂದೇ ಅಲ್ಲವೇ? ಈ ಕತ್ತಿಯ ಕೊಡುಗೆ ಸಿದ್ದರಾಮಯ್ಯ, ರಾಹುಲ್ ಗಾಂಧಿ ಅವರ ಕಾಂಗ್ರೆಸ್‍ನದಲ್ಲವೇ? (ಯಾಕೆಂದರೆ ಕಾಶ್ಮೀರದಲ್ಲಿ ಕಾಂಗ್ರೆಸ್ ಆಡಳಿತದಲ್ಲಿತ್ತು. ಉದಯಪುರದಲ್ಲೂ ಕಾಂಗ್ರೆಸ್ ಆಡಳಿತದಲ್ಲಿದೆ. ಹರ್ಷನ ಹತ್ಯೆ ನೀವು ಬೆಂಬಲಿಸಿದವರ ಕೊಡುಗೆಯಾಗಿದೆ)

3. ನೀವೇ ಬೆಳೆಸಿದ ತುಷ್ಟೀಕರಣದ ನೀತಿ ಭಯೋತ್ಪಾದನಾ ಕುಕೃತ್ಯಕ್ಕೆ ಕಾರಣವಾಗಿದೆ. ಐಸಿಸ್ ನಮ್ಮ ದೇಶದಲ್ಲೂ ಬೆಳೆಯಲು ಕಾಂಗ್ರೆಸ್ ಕಾರಣ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಬ್ರದರ್‍ ಗೆ ಕತ್ತಿ ಕಂಡರೆ ಪ್ರೀತಿ ಮತ್ತು ತಿಲಕ ಕಂಡರೆ ಭಯವೇ? ತಿಲಕ ಹಾಕಿದವರು ನಿಮಗೆ ಬ್ರದರ್ ಅಲ್ಲವೇ?

ಕನ್ಹಯ್ಯಲಾಲ್ ಹತ್ಯೆ ಖಂಡಿಸಿ ಒಂದು ವಾರ ಕಾಲ ಬಿಜೆಪಿ ಪ್ರತಿಭಟನೆ ನಡೆಸಲಿದೆ. ಕಾಂಗ್ರೆಸ್‍ನ ಧೋರಣೆಯನ್ನು ನಾವು ಖಂಡಿಸಲಿದ್ದೇವೆ ಎಂದರು. ಬೆಂಗಳೂರು ಕೇಂದ್ರ ಸಂಸದ ಪಿ.ಸಿ. ಮೋಹನ್ ಹಾಗೂ ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಜಿ. ಮಂಜುನಾಥ್ ಅವರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.

 
 
 
 
 
 
 
 
 
 
 

Leave a Reply