ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಹಿರಿಯರಿಗೆ ಪುಷ್ಪನಮನ

ಬೆಂಗಳೂರು: ಡಾ. ಶ್ಯಾಮಪ್ರಸಾದ ಮುಖರ್ಜಿ ಅವರು ದೇಶಕ್ಕೆ ಕೊಟ್ಟ ಕೊಡುಗೆ ಅಪಾರವಾದುದು. ದೇಶ ಮತ್ತು ಸಮಾಜಕ್ಕಾಗಿ ಕಾಶ್ಮೀರದಲ್ಲಿ ಅವರ ಬಲಿದಾನವಾಗಿದೆ. ಕಾಶ್ಮೀರವನ್ನು ಪ್ರತ್ಯೇಕವಾಗಿ ನೋಡುವುದನ್ನು ಅವರು ಸಹಿಸಿರಲಿಲ್ಲ ಎಂದು ವಿಧಾನಪರಿಷತ್ ಮಾಜಿ ಸದಸ್ಯ ಮತ್ತು ಮಾಜಿ ರಾಜ್ಯ ಕಾರ್ಯದರ್ಶಿ ಎನ್. ಶಂಕರಪ್ಪ ಅವರು ತಿಳಿಸಿದರು.

ನಗರದ ಮಲ್ಲೇಶ್ವರದ ರಾಜ್ಯ ಬಿಜೆಪಿ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ದೇಶದ ಅಖಂಡತೆಗೆ, ಸಾರ್ವಭೌಮತ್ವದ ಉಳಿಕೆಗೆ ಬಲಿದಾನಗೈದ ಧೀಮಂತ ನಾಯಕ ಡಾ. ಶ್ಯಾಮಪ್ರಸಾದ ಮುಖರ್ಜಿ ಅವರ ಬಲಿದಾನ ದಿವಸ ಮತ್ತು “ಕರ್ನಾಟಕದ ಕೇಸರಿ” ಎಂದೇ ಪ್ರಖ್ಯಾತರಾಗಿದ್ದ ಭಾರತೀಯ ಜನಸಂಘದ ಸಂಸ್ಥಾಪಕ ಸದಸ್ಯ ಜಗನ್ನಾಥರಾವ್ ಜೋಶಿ ಅವರ ಜನ್ಮದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಇಬ್ಬರು ಗಣ್ಯರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಲಾಯಿತು. ಬಳಿಕ ಎನ್.ಶಂಕರಪ್ಪ ಅವರು ಮಾತನಾಡಿದರು.

ಜಮ್ಮು- ಕಾಶ್ಮೀರಕ್ಕೆ ವಿಶೇóಷ ಸ್ಥಾನಮಾನ ಕೊಡುವುದನ್ನು ವಿರೋಧಿಸಿ ದೆಹಲಿಯಿಂದ 10 ಸಾವಿರ ಜನರೊಂದಿಗೆ ಅವರು ಜಮ್ಮುವಿಗೆ ಪ್ರತಿಭಟನೆ ನಡೆಸಿದ್ದರು. ಜಮ್ಮುವಿನಲ್ಲಿ ಬಂಧಿತರಾದ ಅವರು ಅನುಮಾನಾಸ್ಪದವಾಗಿ ಕೊನೆಯುಸಿರು ಎಳೆದರು ಎಂದು ವಿವರಿಸಿದರು. ಕಾಶ್ಮೀರ ನಮ್ಮ ದೇಶದಲ್ಲಿ ಉಳಿದಿರಲು ಮುಖರ್ಜಿ ಅವರ ತ್ಯಾಗವೇ ಕಾರಣ ಎಂದರು.

ಭಾರತೀಯ ಜನಸಂಘದ ಉಪಾಧ್ಯಕ್ಷರೂ ಆಗಿದ್ದ ಜಗನ್ನಾಥರಾವ್ ಜೋಶಿ ಅವರು, ಮಧ್ಯಪ್ರದೇಶದಿಂದ ಎರಡು ಬಾರಿ ಸಂಸದರಾಗಿ ಆಯ್ಕೆಯಾದವರು. ಗೋವಾ ಪ್ರದೇಶವು ಪೋರ್ಚುಗೀಸರಿಂದ ಮುಕ್ತವಾಗಲು ಜೋಶಿ ಅವರ ಪಾತ್ರ ಬಹುದೊಡ್ಡದು ಎಂದು ತಿಳಿಸಿದರು. ಜೋಶಿಯವರು ಬಹಳ ಸರಳ ಮನುಷ್ಯರಾದರೂ ದೊಡ್ಡ ಆರ್ಥಿಕ ತಜ್ಞರಾಗಿದ್ದರು ಎಂದರಲ್ಲದೆ, ಅವರ ಒಡನಾಟವನ್ನು ನೆನಪಿಸಿಕೊಂಡರು.
ಇವರಿಬ್ಬರು ಪಕ್ಷದ ಎರಡು ಕಣ್ಣುಗಳಿದ್ದಂತೆ ಎಂದು ಅಭಿಪ್ರಾಯಪಟ್ಟರು. ಶ್ಯಾಮಪ್ರಸಾದ ಅವರಿಂದ ಪ್ರೇರೇಪಿತನಾದ ತಾವು ಮಗನಿಗೆ ಅದೇ ಹೆಸರನ್ನು ನಾಮಕರಣ ಮಾಡಿದ್ದನ್ನು ನೆನಪಿಸಿಕೊಂಡರು.

ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್, ರಾಜ್ಯ ಕಾರ್ಯದರ್ಶಿ ಜಗದೀಶ್ ಹಿರೇಮನಿ, ರಾಜ್ಯ ಕಾರ್ಯಾಲಯ ಕಾರ್ಯದರ್ಶಿ ಲೋಕೇಶ್ ಅಂಬೆಕಲ್ಲು, ಶಾಸಕ ಡಾ|| ಶಿವರಾಜ್ ಪಾಟೀಲ್, ಮೋರ್ಚಾಗಳ ಪದಾಧಿಕಾರಿಗಳು, ಪಕ್ಷದ ಮುಖಂಡರು, ಕಾರ್ಯಕರ್ತರು ಮತ್ತು ಕಾರ್ಯಾಲಯದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply