ಅಶ್ಲೀಲ ಮನಸ್ಥಿತಿಯ ಸತೀಶ್ ಜಾರಕಿಹೊಳಿ ಮತ್ತು ಕಾಂಗ್ರೆಸ್ ಹಿಂದೂಗಳ ಕ್ಷಮೆ ಕೇಳಬೇಕು: ಕುಯಿಲಾಡಿ ಸುರೇಶ್ ನಾಯಕ್

ಅಶ್ಲೀಲ ಮಾನಸಿಕತೆಯ ಸತೀಶ್ ಜಾರಕಿಹೊಳಿ ಹೇಳಿಕೆಯು ಕಾಂಗ್ರೆಸ್ ನ ಹಿಂದೂ ವಿರೋಧಿ ಮನಸ್ಥಿತಿಯನ್ನು ತಿಳಿಸುತ್ತದೆ. ಅಂದು ನೆಹರೂ ತನ್ನನ್ನು ಹಿಂದೂ ಎಂದು ಕರೆಯಬೇಡಿ ಎಂದು ಹೇಳಿದ್ದರು. ಅಂದಿನಿಂದ ಇಂದಿನವರೆಗೂ ಕಾಂಗ್ರೆಸ್ ಹಿಂದುಗಳ ಭಾವನೆಗೆ ಧಕ್ಕೆ ಉಂಟುಮಾಡುತ್ತಾ ಬಂದಿದೆ. ಕಾಶ್ಮೀರ, ರಾಮಸೇತು, ರಾಮ ಮಂದಿರ ವಿಚಾರಗಳಲ್ಲೂ ಕಾಂಗ್ರೆಸ್ ಹಿಂದೂ ವಿರೋಧಿ ನೀತಿಯನ್ನು ಅನುಸರಿಸಿದೆ. ಈ ಪ್ರಕರಣದ ಹಿನ್ನೆಲೆಯಲ್ಲಿ ಸತೀಶ್ ಜಾರಕಿಹೊಳಿ ವಿರುದ್ದ ದೂರು ದಾಖಲಿಸಲಾಗುವುದು. ಹಿಂದೂ ಪದ ಅಶ್ಲೀಲ ಅರ್ಥವನ್ನು ಸೂಚಿಸುತ್ತದೆ ಎಂದಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಮತ್ತು ಕಾಂಗ್ರೆಸ್ ಪಕ್ಷ ದೇಶದ ಹಿಂದೂಗಳ ಕ್ಷಮೆ ಕೋರಬೇಕು ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಆಗ್ರಹಿಸಿದರು.

ಅವರು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿಯವರ ಹಿಂದೂ ವಿರೋಧಿ ಹೇಳಿಕೆಯನ್ನು ಖಂಡಿಸಿ ಉಡುಪಿ ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ ಬುಧವಾರ ಬಿಜೆಪಿ ಜಿಲ್ಲಾ ಕಛೇರಿಯ ಬಳಿ ನಡೆದ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಹಾಗೂ ಮೈಸೂರ್ ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಕೆ.ಉದಯ ಕುಮಾರ್ ಶೆಟ್ಟಿ ಮಾತನಾಡಿ ಕಾಂಗ್ರೆಸ್ ಪಕ್ಷ ಹಿಂದೂ ವಿರೋಧಿ ಎಂಬುದು ಪದೇ ಪದೇ ಸಾಬೀತಾಗುತ್ತಿದೆ. ಬೈಬಲ್ ನೆರೆಹೊರೆಯವರನ್ನು ಪ್ರೀತಿಸಿ ಎಂದು ಹೇಳಿದರೆ, ಹಿಂದೂ ನೆರೆಮನೆಯವರಲ್ಲಿ ನಿನ್ನನ್ನು ಕಾಣು ಎನ್ನುತ್ತದೆ. ಇಂತಹ ಶ್ರೇಷ್ಠ ಸನಾತನ ಧರ್ಮ ಹಿಂದು. ಭಾರತ 105 ಕೋಟಿ ಹಿಂದೂಗಳಿಗೆ ಸತೀಶ್ ಜಾರಕಿಹೊಳಿ ಅವಮಾನ ಮಾಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಕಾಂಗ್ರೆಸ್ ಕಾರ್ಯಾಧ್ಯಕ್ಷ ಸ್ಥಾನದಿಂದ ಸತೀಶ್ ಜಾರಕಿಹೊಳಿಯನ್ನು ತಕ್ಷಣ ವಜಾ ಮಾಡಬೇಕೆಂದು ಆಗ್ರಹಿಸಿದರು.

ರಾಜೀವ್ ಗಾಂಧಿಯವರು ಅಧಿಕಾರದಲ್ಲಿದ್ದಾಗ 400 ಲೋಕಸಭಾ ಸದಸ್ಯರು ಕಾಂಗ್ರೆಸ್ ಪಕ್ಷದವರಿದ್ದರು. ಆದರೆ ಇಂದಿನ ಕಾಂಗ್ರೆಸ್ ನ ದುಸ್ಥಿತಿಯನ್ನು ದೇಶದ ಜನರೇ ಗಮನಿಸಿದ್ದಾರೆ. ಇದಕ್ಕೆ ಕಾರಣ ಕಾಂಗ್ರೆಸ್ ನ ಹಿಂದೂ ವಿರೋಧಿ ನೀತಿಗಳು. ಕಾಂಗ್ರೆಸ್ ಗೆ ಮುಸ್ಲಿಂ ಮತವನ್ನು ಟೀಕೆ ಮಾಡುವ ಧೈರ್ಯವಿದೆಯಾ..? ಟೀಕೆ ಮಾಡಿದರೇ ಅವರು ನಿಮ್ಮ ಕತ್ತನ್ನು ಕತ್ತರಿಸುತ್ತಾರೆ ಎಂಬ ಭಯ ನಿಮಗಿದೆ. ಕಾಂಗ್ರೆಸ್ ವರಿಷ್ಠರು ಎನಿಸಿಕೊಂಡವರೆಲ್ಲಾ ಮೋಹನ್ ದಾಸ್ ಕರಮಚಂದ್ ಗಾಂಧಿಯವರ ಕುಟುಂಬಸ್ಥರಲ್ಲ. ಎಲ್ಲರೂ ನಕಲಿ ಗಾಂಧಿಗಳು ಎಂದು ಕಿಡಿಕಾರಿದರು.

ಪ್ರತಿ ಬಾರಿ ಹಿಂದೂ ಧರ್ಮಕ್ಕೆ ಮಾಡುವ ಅವಮಾನವನ್ನು ಹಿಂದೂ ಸಹಿಸಲಾರ. ಸತೀಶ್ ಜಾರಕಿಹೊಳಿಯ ಹೇಳಿಕೆಗೆ ಕಾಂಗ್ರೆಸ್ ನೈತಿಕ ಹೊಣೆಯನ್ನು ಹೊತ್ತು, ಸಮಸ್ತ ಹಿಂದುಗಳ ಕ್ಷಮೆಯಾಚಿಸಬೇಕು. ಈ ಹೇಳಿಕೆಯನ್ನು ಹಿಂಪಡೆಯದೇ ಇದ್ದಲ್ಲಿ ತಾರ್ಕಿಕ ಅಂತ್ಯವಾಗುವವರೆಗೂ ಹೋರಾಟ ಮಾಡುತ್ತೇವೆ ಎಂದರು.

ಉಡುಪಿ ಶಾಸಕ ಕೆ.ರಘುಪತಿ ಭಟ್, ಮಾಜಿ ಜಿಲ್ಲಾಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ ಮತ್ತು ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಎಸ್. ಶೆಟ್ಟಿ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಸತೀಶ್ ಜಾರಕಿಹೊಳಿಯ ಅಶ್ಲೀಲ ಮನಸ್ಥಿತಿಯನ್ನು ಖಂಡಿಸಿದರು.

ಹಿಂದೂ ವಿರೋಧಿ ಹೇಳಿಕೆ ನೀಡಿ ಸಮಾಜದಲ್ಲಿ ಅಶಾಂತಿ ಸೃಷ್ಠಿಸಲು ಯತ್ನಿಸುತ್ತಿರುವ ಸತೀಶ್ ಜಾರಕಿಹೊಳಿ ಯವರನ್ನು ಗಡಿಪಾರು ಮಾಡಬೇಕು ಎಂದು ಪ್ರತಿಭಟನಾಕಾರರು ಘೋಷಣೆ ಕೂಗಿದರು.

ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ರವಿ ಅಮೀನ್, ಬೈಕಾಡಿ ಸುಪ್ರಸಾದ್ ಶೆಟ್ಟಿ, ಪೆರ್ಣಂಕಿಲ ಶ್ರೀಶ ನಾಯಕ್, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಗೀತಾಂಜಲಿ ಎಮ್. ಸುವರ್ಣ, ಜಿಲ್ಲಾ ವಕ್ತಾರ ಕೆ.ರಾಘವೇಂದ್ರ ಕಿಣಿ, ಉಡುಪಿ ನಗರಾಧ್ಯಕ್ಷ ಮಹೇಶ್ ಠಾಕೂರ್, ಉಡುಪಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್, ಮಾಜಿ ರಾಜ್ಯ ಕಾರ್ಯದರ್ಶಿ ತಿಂಗಳೆ ವಿಕ್ರಮಾರ್ಜುನ ಹೆಗ್ಗಡೆ, ರಾಜ್ಯ ಎಸ್.ಸಿ. ಮೋರ್ಚಾ ಪ್ರ.ಕಾರ್ಯದರ್ಶಿ ದಿನಕರ ಬಾಬು, ರಾಜ್ಯ ಮಹಿಳಾ ಮೋರ್ಚಾ ಪ್ರ.ಕಾರ್ಯದರ್ಶಿ ಶಿಲ್ಪಾ ಜಿ. ಸುವರ್ಣ, ರಾಜ್ಯ ಅಲ್ಪಸಂಖ್ಯಾತ ಮೋರ್ಚಾ ಉಪಾಧ್ಯಕ್ಷ ಸಲೀಂ ಅಂಬಾಗಿಲು, ಮಾಜಿ ನಗರಸಭೆ ಅಧ್ಯಕ್ಷ ಕಿರಣ್ ಕುಮಾರ್ ಬೈಲೂರು, ಜಿಲ್ಲಾ ಒಬಿಸಿ ಮೋರ್ಚಾ ಅಧ್ಯಕ್ಷ ಸುರೇಂದ್ರ ಪಣಿಯೂರು, ಜಿಲ್ಲಾ ಎಸ್.ಸಿ. ಮೋರ್ಚಾ ಅಧ್ಯಕ್ಷ ಗೋಪಾಲ ಕಳಂಜಿ, ನಗರಸಭೆ ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್, ಸ್ಥಾಯಿ ಸಮಿತಿ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಪ್ರಮುಖರಾದ ಸತ್ಯಾನಂದ ನಾಯಕ್, ಗುರುಪ್ರಸಾದ್ ಶೆಟ್ಟಿ, ನಳಿನಿ ಪ್ರದೀಪ್ ರಾವ್, ಅನಿತಾ ಶ್ರೀಧರ್, ಶಿವಕುಮಾರ್ ಅಂಬಲಪಾಡಿ, ಶ್ರೀನಿಧಿ ಹೆಗ್ಡೆ, ಜಗದೀಶ್ ಆಚಾರ್ಯ ಹಾಗೂ ಜಿಲ್ಲಾ, ಮೋರ್ಚಾ, ಪ್ರಕೋಷ್ಠ, ಮಂಡಲ, ಮಹಾಶಕ್ತಿ ಕೇಂದ್ರ, ಶಕ್ತಿ ಕೇಂದ್ರ ಮತ್ತು ಬೂತ್ ಪದಾಧಿಕಾರಿಗಳು, ನಗರಸಭೆ ಸದಸ್ಯರು, ವಿವಿಧ ಸ್ತರದ ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply