​ಬೆಳೆ ವಿಮೆ ಯೋಜನೆ-ನೋಂದಣಿಗೆ ಸೂಚನೆ

ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿಗೆ ಮುಖ್ಯ ಬೆಳೆಯಾದ ಭತ್ತವನ್ನು ಗ್ರಾಮ ಪಂಚಾಯತ್ ಮಟ್ಟಕ್ಕೆ ಹಾಗೂ​ ಉದ್ದು, ನೆಲಗಡಲೆ ಬೆಳೆಗಳನ್ನು ಹೋಬಳಿ ಮಟ್ಟದಲ್ಲಿ ಬೆಳೆ ವಿಮೆ ಯೋಜನೆಯಡಿ ನೋಂದಣಿಗಾಗಿ​ ಅಧಿಸೂಚಿಸಲಾಗಿದೆ.

ಹಿಂಗಾರು ಹಂಗಾಮಿಗೆ ಮುಖ್ಯ ಬೆಳೆಯಾದ ಭತ್ತವನ್ನು ಉಡುಪಿ ತಾಲೂಕಿನ 15 ಗ್ರಾಮ ಪಂಚಾಯತ್, ಕುಂದಾಪುರ​​ ತಾಲೂಕಿನ 34 ಗ್ರಾಮ ಪಂಚಾಯತ್, ಕಾರ್ಕಳ ತಾಲೂಕಿನ 32 ಗ್ರಾಮ ಪಂಚಾಯತ್ ಒಟ್ಟು 81 ಗ್ರಾಮ​ ಪಂಚಾಯತ್‌ಗಳಲ್ಲಿ ವಿಮಾ ಮೊತ್ತ 86000 ರೂ. (ಪ್ರತಿ ಹೆಕ್ಟರ್) ಗೆ, ವಿಮಾ ಕಂತು 1290 ರೂ. (ಪ್ರತಿ ಹೆಕ್ಟರ್‌ಗೆ)ನ್ನು ಪಾವತಿಸಬೇಕಾಗಿರುತ್ತದೆ. ನೋಂದಣಿಗೆ ಡಿಸೆಂಬರ್ 31 ಕೊನೆಯ ದಿನ.


ಉದ್ದು ಬೆಳೆಯನ್ನು ಬ್ರಹ್ಮಾವರ, ಕಾಪು, ಕೋಟ, ಉಡುಪಿ, ಕುಂದಾಪುರ, ಬೈಂದೂರು, ವಂಡ್ಸೆ ಒಟ್ಟು 7​ ಹೋಬಳಿಗಳಲ್ಲಿ ವಿಮಾ ಮೊತ್ತ 28000 ರೂ. (ಪ್ರತಿ ಹೆಕ್ಟರ್) ಗೆ, ವಿಮಾ ಕಂತು 420 ರೂ. (ಪ್ರತಿ ಹೆಕ್ಟರ್‌ಗೆ) ನ್ನು​ ಪಾವತಿಸಬೇಕಾಗಿರುತ್ತದೆ. ನೋಂದಣಿಗೆ ನವೆಂಬರ್ 30 ಕೊನೆಯ ದಿನ.

ನೆಲಗಡಲೆ ಬೆಳೆಯನ್ನು ಕುಂದಾಪುರ, ಬೈಂದೂರು, ಕೋಟ ಒಟ್ಟು 3 ಹೋಬಳಿಗಳಲ್ಲಿ ವಿಮಾ ಮೊತ್ತ 46000 ರೂ.​ (ಪ್ರತಿ ಹೆಕ್ಟರ್) ಗೆ, ವಿಮಾ ಕಂತು 690 ರೂ. (ಪ್ರತಿ ಹೆಕ್ಟರ್‌ಗೆ) ನ್ನು ಪಾವತಿಸಬೇಕಾಗಿರುತ್ತದೆ. ನೊಂದಣಿಗೆ ಡಿಸೆಂಬರ್​ 31 ಕೊನೆಯ ದಿನ.


ಸ್ಥಳೀಯಾಡಳಿತ ಪ್ರದೇಶಗಳನ್ನೊಳ​ಗೊಂಡಂತೆ ರೈತರು ಪಹಣಿಪತ್ರ, ಖಾತೆ/ ಪಾಸ್ ಪುಸ್ತಕ, ಕಂದಾಯ ರಶೀದಿ,​ ಆಧಾರ್ ಸಂಖ್ಯೆ/ ಆಧಾರ್ ನೋಂದಣಿ ಸಂಖ್ಯೆ ಹಾಗೂ ಮೊಬೈಲ್ ಸಂಖ್ಯೆಗಳನ್ನು ಒದಗಿಸಿ ಸ್ಥಳೀಯ ಸಾಲ ನೀಡುವ​ ವಾಣಿಜ್ಯ ಅಥವಾ ಗ್ರಾಮೀಣ ಮಟ್ಟದ ವ್ಯವಸಾಯ ಸೇವಾ ಸಹಕಾರ ಸಂಘಗಳನ್ನು ಸಂಪರ್ಕಿಸಿ ಅಥವಾ ಬೆಳೆ ವಿಮಾ​ ಸಂಸ್ಥೆಯ ಮೂಲಕ ಬೆಳೆ ವಿಮೆಗೆ ನೋಂದಾಯಿಸಿಕೊಳ್ಳಬಹುದಾಗಿದೆ.​ 


ಬೆಳೆ ವಿಮಾ ಯೋಜನೆಯಿಂದ ರೈತರಿಗೆ ಪ್ರಯೋಜನಗಳು: ಅಧಿಸೂಚಿತ ಘಟಕದಲ್ಲಿ ಭಿತ್ತನೆಯಿಂದ ಕಟಾವಿನ​ ಪೂರ್ವದವರೆಗೆ ಹವಾಮಾನ ವೈಪರಿತ್ಯಗಳಾದ ಅಧಿಕ ಮಳೆ, ನೆರೆಯಿಂದ ಬೆಳೆ ಮುಳುಗಡೆ, ದೀರ್ಘಕಾಲ ತೇವಾಂಶ​ ಕೊರತೆ, ತೀವ್ರ ಬರಗಾಲ ಮುಂತಾದವುಗಳಿಗೆ ನಿರೀಕ್ಷಿತ​ ಇಳುವರಿಯು, ಪ್ರಾರಂಭಿಕ ಇಳುವರಿಯ ಶೇ. 50 ಕ್ಕಿಂತ ಕಡಿಮೆ ಇದ್ದಲ್ಲಿ ಅಥವಾ ಬೆಳೆ ನಷ್ಟ ಕಂಡು​ ಬಂದಲ್ಲಿ ಮುಂಚಿತವಾಗಿ ವಿಮೆ ಮಾಡಿದ ರೈತರಿಗೆ ಶೇ. 25 ರಷ್ಟು ಬೆಳೆ ನಷ್ಟ ಪರಿಹಾರ ದೊರೆಯಲಿದೆ. ಬೆಳೆ ಕಟಾವಿನ ವಾಸ್ತವಿಕ
ಇಳುವರಿ ಆಧಾರದ ಮೇಲೆ ಅಂತಿಮ ಬೆಳೆ ನಷ್ಟ ಪರಿಹಾರದಲ್ಲಿ ಹೊಂದಾಣಿಕೆ.


ಸ್ಥಳ ನಿರ್ದಿಷ್ಟ ಪ್ರಕೃತಿ ವಿಕೋಪಗಳಾದ ಆಲಿಕಲ್ಲು ಮಳೆ, ಭೂಕುಸಿತ, ಬೆಳೆ ಮುಳುಗಡೆಯಿಂದ ಬೆ​​ಳೆ ಹಾನಿಯಾದಲ್ಲಿ​ ವೈಯಕ್ತಿಕ ವಾಗಿ ಪರಿಹಾರ ದೊರೆಯಲಿದ್ದು, ಅಧಿಸೂಚಿಸಿದ ಘಟಕದಲ್ಲಿ ಶೇ. 25 ಕ್ಕಿಂತ ಹೆಚ್ಚಿನ ಪ್ರದೇಶದಲ್ಲಿ ಬೆಳೆ​ ನಷ್ಟವಾದಲ್ಲಿ ವಿಮೆಗೆ ಒಳಪಟ್ಟ ಬೆಳೆ ನಷ್ಟವಾದ ರೈತರಿಗೆ ಮಾದರಿ ಸಮೀಕ್ಷೆಗೆ ಅನುಗುಣವಾಗಿ ಪರಿಹಾರ​ ದೊರೆಯಲಿದೆ.


ಕಟಾವಿನ ನಂತರದ ಬೆಳೆಯನ್ನು ಜಮೀನಿನಲ್ಲಿ ಒಣಗಲು ಬಿಟ್ಟ ಸಂದರ್ಭದಲ್ಲಿ (14 ದಿನಗಳ ಒಳಗೆ) ಚಂಡಮಾರುತ,​ ಅಕಾಲಿಕ ಮಳೆಯಿಂದ ಬೆಳೆ ನಾಶವಾದಲ್ಲಿ ವೈಯಕ್ತಿಕವಾಗಿ ಪರಿಹಾರ ದೊರೆಯಲಿದೆ. ಮೇಲಿನ ಎರಡೂ ಸಂದರ್ಭದಲ್ಲಿ​ ರೈತರು ವಿಮಾ / ಆರ್ಥಿಕ ಸಂಸ್ಥೆಗೆ 72 ಗಂಟೆಗಳ ಒಳಗಾಗಿ ಬೆಳೆ ಹಾನಿ ವಿವರದ ಮಾಹಿತಿ ಒದಗಿಸಬೇಕು.


ಮಳೆ ಅಭಾವ ಅಥವಾ ಪ್ರತಿಕೂಲ ಹವಾಮಾನ ಪರಿಸ್ಥಿತಿಯಲ್ಲಿ ಅಧಿಸೂಚಿತ ಘಟಕದಲ್ಲಿ ಶೇ. 75 ರಷ್ಟು ಬಿತ್ತನೆ​ ವಿಫಲಗೊಂಡಲ್ಲಿ ವಿಮಾ ಮೊತ್ತದ ಗರಿಷ್ಟ ಶೇ. 25 ರಷ್ಟು ಪರಿಹಾರ ವಿಮೆ ಮಾಡಿಸಿದ ರೈತರಿಗೆ ದೊರೆಯಲಿದೆ.

ಬೆಳೆ ಸಾಲ ಪಡೆದ ರೈತರಿಗೆ ಬೆಳೆ ವಿಮೆಗೆ ಕಡ್ಡಾಯವಾಗಿ ಒಳಪಡಿಸಲಿದ್ದು, ತದನಂತರ ರೈತರು ಬ್ಯಾಂಕ್​ ವ್ಯವಸ್ಥಾಪಕರಿಗೆ ಆ ಬೆಳೆಯಲ್ಲಿ ನೊಂದಣಿಗೆ ನಿಗದಿಪಡಿಸಿದ ಅಂತಿಮ ದಿನಾಂಕದ 7 ದಿನಗಳ ಪೂರ್ವಭಾವಿಯಾಗಿ ಲಿಖಿತ​ ಮುಚ್ಚಳಿಕೆ ಪತ್ರ ನೀಡಿ ಬೆಳೆ ವಿಮೆ ನೋಂದಣಿ​ಯಿಂದ ವಿನಾಯಿತಿಯನ್ನು ಪಡೆಯಬಹುದಾಗಿದೆ. ಸಾಲ ಪಡೆಯದ​ ರೈತರಿಗೆ ಬೆಳೆ ವಿಮೆಯು ಐಚ್ಛಿಕವಾಗಿರುತ್ತದೆ.


ಹೆಚ್ಚಿನ ಮಾಹಿತಿಗೆ ಸ್ಥಳೀಯ ಕೃಷಿ ಇಲಾಖೆಯ ಕಚೇರಿಯನ್ನು ಅಥವಾ ಉಡುಪಿ, ಕುಂದಾಪುರ, ಕಾರ್ಕಳ ತಾಲೂಕು​ ಸಹಾಯಕ ಕೃಷಿ ನಿರ್ದೇಶಕರನ್ನು ಸಂಪರ್ಕಿಸು​ವಂತೆ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 
 
 
 
 
 
 
 
 
 
 

Leave a Reply