ಹೆತ್ತ ತಾಯಿಯನ್ನೇ ಶೌಚಾಲಯದಲ್ಲಿ ಕೂಡಿ ಹಾಕಿ ಚಿತ್ರಹಿಂಸೆ ನೀಡಿದ ಪಾಪಿ ಪುತ್ರ

ಮಗ ಸೊಸೆ ಜೊತೆಗೆ ಸೇರಿ ತನ್ನನ್ನು ಶೌಚಾಲಯದೊಳಗೆ ಕೂಡಿಹಾಕಿ ಚಿತ್ರಹಿಂಸೆ ನೀಡಿದ್ದಾರೆ ಎಂದು ಆರೋಪಿಸಿ ವೃದ್ಧೆಯೊಬ್ಬರು ಬಂಟ್ವಾಳ‌ ನಗರ ಪೊಲೀಸರಿಗೆ ದೂರು ನೀಡಿದ್ದು, ಈ ಬಗ್ಗೆ ಮಗ ಹಾಗೂ ಸೊಸೆ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಬಂಟ್ವಾಳ ತಾಲೂಕಿನ ಬೆಂಜನಪದವು ಕರಾವಳಿ ಸೈಟ್ ಎಂಬಲ್ಲಿ ಈ‌ ಘಟನೆ ನಡೆದಿದೆ ಎನ್ನಲಾಗಿದ್ದು, 70 ವರ್ಷ ವಯಸ್ಸಿನ ಗಿರಿಜಾ ಎಂಬವರೇ ದೂರು ನೀಡಿದವರು.

ತಾನು ಕರಾವಳಿ ಸೈಟ್‌ನಲ್ಲಿ ಮಗ ಹರಿರಾಂ‌ ಹಾಗೂ ಸೊಸೆ ಪೂಜಾ ಜೊತೆ ವಾಸ್ತವ್ಯ ಇದ್ದು, ಕಳೆದ ಜನವರಿಯಲ್ಲಿ ತಾನು ಜಾರಿಬಿದ್ದು, ಸೊಂಟಕ್ಕೆ ಗಾಯವಾಗಿದ್ದರೂ ಮಗ ಸೊಸೆ ಚಿಕಿತ್ಸೆ ನೀಡಿಲ್ಲ.

ಶೌಚಗೃಹದಲ್ಲಿ ಕೂಡಿ ಹಾಕಿ ಒಂದೇ ಹೊತ್ತು ಊಟ ಮತ್ತು ಚಾ ನೀಡುತ್ತಿದ್ದುದಲ್ಲದೆ, ತುಳು ಭಾಷೆಯಲ್ಲಿ ‘ಪರಬು ಸೈಪುನಿಲ ಇಜ್ಜಿ’, ಎಂಬುದಾಗಿ ಬೈಯುತ್ತಿದ್ದು, ಹಸಿವೆಯಿಂದ ಊಟ ಕೇಳಿದರೆ ‘ಪರಬು ನಿಕ್ಕ್ ವನಸ್ ಕೊರ್ಪುಜ್ಜಿ, ಮಣ್ಣ್ ತಿಂದುದು, ಸೈಲ’ ಎಂದು ತುಳು ಭಾಷೆಯಲ್ಲಿ ಸೊಸೆಯು ಬೈಯುತ್ತಿದ್ದರು ಎಂದವರು ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಹಿರಿಯ ನಾಗರಿಕ‌ ಸಮಿತಿಯಿಂದ ರಕ್ಷಣೆ ವೃದ್ಧ ಮಹಿಳೆ‌ ಮನೆ ಮಂದಿಯಿಂದ ದೌರ್ಜನ್ಯಕ್ಕೆ ಒಳಗಾಗಿರುವ ಮಾಹಿತಿ ಪಡೆದ ಹಿರಿಯ ನಾಗರಿಕ ಸಮಿತಿ, ವೃದ್ಧೆ ಗಿರಿಜಾರನ್ನು ಶೌಚಗೃಹದಿಂದ ಹೊರಗೆ ಕರೆತಂದು ಉಪಚರಿಸಿ ನಂತರ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದು, ಠಾಣೆಯಲ್ಲಿ‌ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Leave a Reply