ಬಂಟಕಲ್ಲು – ಹಿರಿಯ ಅರ್ಚಕ ವೇ.ಮೂ.ವೇದವ್ಯಾಸರಾಯ ಭಟ್‌ಗೆ ಭಾವಪೂರ್ಣ ಶ್ರದ್ಧಾಂಜಲಿ

ಶಿರ್ವ:-ಶ್ರೀಕ್ಷೇತ್ರ ಬಂಟಕಲ್ಲು ಶ್ರೀದುರ್ಗಾಪರಮೇಶ್ವರೀ ದೇವಳದ ಪ್ರತಿಷ್ಠಾ ವರ್ಷದಲ್ಲಿ(1942) ಅರ್ಚಕರಾಗಿ ಬಂದು ಸಮಾಜದ ಹಾಗೂ ಶ್ರೀದೇವಳ ಸರ್ವಾಂಗೀಣ ಅಭಿವೃದ್ಧಿಯಲ್ಲಿ ವಿಶಿಷ್ಠ ಕೊಡುಗೆ ನೀಡಿದ, ಹಿರಿಯ ಮಾರ್ಗದರ್ಶಕರಾಗಿದ್ದ ವೇದಮೂರ್ತಿ ಕೆ.ವೇದವ್ಯಾರಾಯ ಭಟ್(93ವ) ಅವರ ನಿಧನದ ಪ್ರಯುಕ್ತ ಮಂಗಳವಾರ ಶ್ರೀದೇವಳದ ವಠಾರದಲ್ಲಿ ಶ್ರೀದೇವಳದ ಆಡಳಿತ ಮಂಡಳಿ, ರಾಜಾಪುರ ಸಾರಸ್ವತ ಯುವವೃಂದ, ಶ್ರೀದುರ್ಗಾ ಮಹಿಳಾ ಮಂಡಳಿ ಹಾಗೂ ಅಭಿಮಾನಿ ಬಳಗದ ವತಿಯಿಂದ ಸಾರ್ವಜನಿಕ ಶ್ರದ್ಧಾಂಜಲಿ ಸಮರ್ಪಿಸಲಾಯಿತು.

ಶ್ರೀದೇವಳದ ಆಡಳಿತ ಮೊಕ್ತೇಸರ ಶಶಿಧರ ವಾಗ್ಲೆ ಮಾತನಾಡಿ, ಶ್ರೀದೇವಳದ ಉನ್ನತಿ, ಸಮಾಜ ಸಂಘಟನೆ ಹಾಗೂ ಸರ್ವ ಕಾರ್ಯಗಳಿಗೆ ಮಾರ್ಗದರ್ಶಕರಾಗಿದ್ದ ಹಿರಿಯ ಕೊಂಡಿ ವೇದವ್ಯಾಸರಾಯ ಭಟ್‌ರವರು. ಅವರ ಸೇವೆ ಸದಾ ಸ್ಮರಣೀಯ ಎಂದರು. ನಿವೃತ್ತ ಶಿಕ್ಷಕ ಬಿ.ಪುಂಡಲೀಕ ಮರಾಠೆ ಮಾತನಾಡಿ, ಬಹುಮುಖ ಪ್ರತಿಭಾ ಸಂಪನ್ನರಾದ ಭಟ್ಟರ ಅಗಲುವಿಕೆ ಶ್ರೀದೇವಳಕ್ಕೆ ಮಾತ್ರ ಸೀಮಿತವಾಗಿರದೆ ಸಮಸ್ತ ಭಜಕವೃಂದಕ್ಕೆ ತುಂಬಲಾರದ ನಷ್ಠ. 

 

ಅವರು ಅನುಭವೀ ವೈದಿಕರಾಗಿ, ಶ್ರೀದೇವಳದ ಪ್ರಗತಿಯ ರೂವಾರಿಯಾಗಿ, ಯಕ್ಷಗಾನ, ಭಜನೆ, ಸಮಾಜಸೇವೆಯಲ್ಲದೆ ಸಮಾಜದ ಹಲವು ದೇವಾಲಯಗಳಿಗೂ ಮಾರ್ಗದರ್ಶಕರಾಗಿ, ಶ್ರೀಮಠದ ಸಂಪರ್ಕ ಹಾಗೂ ಕ್ಷೇತ್ರದಲ್ಲಿ ಶ್ರೀಗಳವರ ಚಾತುಮಾಸ್ಯ ವ್ಯವಸ್ಥೆಯ ರೂವಾರಿಯಾಗಿ ನೀಡಿದ ಸೇವೆಯನ್ನು ಸ್ಮರಿಸಿದರು.

ಶ್ರೀದೇವಳದ ಆಡಳಿತ ಮಂಡಳಿ ಅಧ್ಯಕ್ಷ ಗಂಪದಬೈಲು ಜಯರಾಮ ಪ್ರಭು,  ಶ್ರೀದುರ್ಗಾ ಮಹಿಳಾ ಮಂಡಳಿ ಅಧ್ಯಕ್ಷೆ ಶೋಭಾ ಪಾಟ್ಕರ್  ನುಡಿ ನಮನ ಸಲ್ಲಿಸಿದರು. ಯಕ್ಷ ಕ್ಷೇತ್ರದಲ್ಲಿ ದಿವಂಗತರ ಸೇವೆಯನ್ನು ಸ್ಮರಿಸಿ  ಉಡುಪಿ ವಿಠಲ ನಾರಾಯಣ ಪುರಾಣಿಕ್ ಯಕ್ಷಗಾನ ಶೈಲಿಯಲ್ಲಿ ನುಡಿ ನಮನ ಸಲ್ಲಿಸಿದರು. ಅರ್ಚಕ ಸುಧೀಂದ್ರ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

 
 ಮೌನ ಪ್ರಾರ್ಥನೆಯೊಂದಿಗೆ  ದಿವಂಗತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ  ಭಾವಪೂರ್ಣ ಶೃದ್ಧಾಂಜಲಿ  ಸಲ್ಲಿಸಲಾಯಿತು. ಆರ್‌ಎಸ್‌ಬಿ ಯುವ ವೃಂದದ ಗೌರವ ಅಧ್ಯಕ್ಷ  ಕೆ.ಆರ್.ಪಾಟ್ಕರ್ ಪ್ರಾಸ್ತಾವಿಕ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು. ಅಧ್ಯಕ್ಷೆ ಶ್ರಾವ್ಯಾ ಪಾಟ್ಕರ್ ಧನ್ಯವಾದವಿತ್ತರು.
 
 
 
 
 
 
 
 
 
 
 

Leave a Reply