ಮಕ್ಕಳು ಪಾಶ್ಚಾತ್ಯ ಸಂಸ್ಕೃತಿಯತ್ತ ವಾಲದಂತೆ ಎಚ್ಚರವಹಿಸಬೇಕು~ ಡಾ| ನಿ.ಬೀ.ವಿಜಯನ

ಉಡುಪಿ: ದೇಶದ ಸಂಪತ್ತಾಗಿರುವ ಮಕ್ಕಳು ಮಾನಸಿಕ, ಶೈಕ್ಷಣಿಕ, ಬೌದ್ಧಿಕ ಹಾಗೂ ಧಾರ್ಮಿಕವಾಗಿ ಆರೋಗ್ಯವಂತರಾಗಿದ್ದಲ್ಲಿ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ ಎಂದು ಅಂಬಲಪಾಡಿ ಶ್ರೀ ಜನಾರ್ದನ ಮಹಾಕಾಳಿ ದೇವಸ್ಥಾನದ ಕ್ಷೇತ್ರಾಧಿಕಾರಿ ನಿಡಂಬೂರು ಬೀಡು ಡಾ. ವಿಜಯ ಬಲ್ಲಾಳ ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ ಮತ್ತು ಉಡುಪಿ ತಾಲೂಕು ಆಯೋಜನೆಯಲ್ಲಿ ಶುಕ್ರವಾರ ಅಂಬಲಪಾಡಿ ಭವಾನಿ ಮಂಟಪದಲ್ಲಿ ನಡೆದ ಚಿಗುರು ಬಾಲ ಪ್ರತಿಭೆಗಳ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ದೇಶದ ಭವಿಷ್ಯ ನಿರ್ಮಾಣದಲ್ಲಿ ಮಕ್ಕಳ ಪಾತ್ರ ಮಹತ್ವದ್ದು. ಈ ಹಿನ್ನೆಲೆಯಲ್ಲಿ ನಮ್ಮ ಕಲೆ, ಸಂಸ್ಕೃತಿ, ಸಂಸ್ಕಾರಗಳ ಬಗ್ಗೆ ಮಕ್ಕಳಲ್ಲಿ ಅರಿವು ಮತ್ತು ಒಲವು ಮೂಡಿಸುವಲ್ಲಿ ಹೆತ್ತವರು ಶ್ರಮಿಸಬೇಕು. ಪಾಶ್ಚಾತ್ಯ ಸಂಸ್ಕೃತಿಯತ್ತ ವಾಲ ದಂತೆ ಎಚ್ಚರವಹಿಸಬೇಕು ಎಂದು ಕಿವಿಮಾತು ಹೇಳಿದರು. ಮಕ್ಕಳ ಮೇಲೆ ಒತ್ತಡ ಹೇರುವುದು ಸಲ್ಲದು ಎಂದರು.

ಅಭ್ಯಾಗತರಾಗಿದ್ದ ಉಡುಪಿ ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಕರಾವಳಿಯ ಮಕ್ಕಳು ಎಲ್ಲ ಕ್ಷೇತ್ರಗಳಲ್ಲೂ ಮುಂದಿದ್ದಾರೆ ಎಂದರು.

ಉಡುಪಿ ತಾಲೂಕು ಸಾಹಿತ್ಯ ಸಮ್ಮೇಳನದ 13ನೇ ಅಧಿವೇಶನದ ಸರ್ವಾಧ್ಯಕ್ಷ ಡಾ. ಎನ್. ತಿರುಮಲೇಶ್ವರ ಭಟ್, ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ನಗರಸಭಾ ಸದಸ್ಯ ಹರೀಶ ಶೆಟ್ಟಿ, ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಸ್ಥಾಪಕ ಉಡುಪಿ ವಿಶ್ವನಾಥ ಶೆಣೈ, ಸಾಫಲ್ಯ ಟ್ರಸ್ಟ್ ಪ್ರವರ್ತಕಿ ನಿರುಪಮಾ ಪ್ರಸಾದ್, ಕಸಾಪ ಬ್ರಹ್ಮಾವರ ತಾಲೂಕು ಅಧ್ಯಕ್ಷ ರಾಮಚಂದ್ರ ಐತಾಳ, ಉಡುಪಿ ಕ್ಷೇತ್ರ ಶಿಕ್ಷಣಾಧಿಕಾರಿ ಡಿ. ಎಚ್. ಚಂದ್ರೇಗೌಡ ಅಭ್ಯಾಗತರಾಗಿದ್ದರು.

ಉಡುಪಿ ಕಸಾಪ ಗೌರವ ಕಾರ್ಯದರ್ಶಿಗಳಾದ ಜನಾರ್ದನ ಕೊಡವೂರು ಮತ್ತು ರಂಜಿನಿ ವಸಂತ್, ಕೋಶಾಧಿಕಾರಿ ರಾಜೇಶ ಭಟ್ ಪಣಿಯಾಡಿ, ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಪ್ರಭು ಕರ್ವಾಲು ಇದ್ದರು.

ಕಸಾಪ ಉಡುಪಿ ತಾಲೂಕು ಘಟಕ ಅಧ್ಯಕ್ಷ ರವಿರಾಜ್ ಎಚ್. ಪಿ. ಸ್ವಾಗತಿಸಿ, ಮಾಧ್ಯಮ ಪ್ರತಿನಿಧಿ ಕಿರಣ್ ಮಂಜನಬೈಲು ವಂದಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪ್ರಸ್ತಾವನೆಗೈದರು. ಕವಯತ್ರಿ ಪೂರ್ಣಿಮಾ ಸುರೇಶ್ ನಿರೂಪಿಸಿದರು.
ಬಳಿಕ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.

 
 
 
 
 
 
 

Leave a Reply