ಇತಿಹಾಸ ತಿಳಿಯದೇ ಹೊಸ ಇತಿಹಾಸ ಸೃಷ್ಠಿಸಲಾಗದು: ಸಚಿವ ಅಂಗಾರ

ಉಡುಪಿ, ನವೆಂಬರ್ 05 (ಕವಾ): ಇತಿಹಾಸವನ್ನು ತಿಳಿದುಕೊಳ್ಳದೇ ಇತಿಹಾಸ ಸೃಷ್ಠಿ ಮಾಡಲು ಸಾಧ್ಯವಿಲ್ಲ. ಇತಿಹಾಸದಲ್ಲಿ ಹಿರಿಯರ ತ್ಯಾಗ ಬಲಿದಾನದಿಂದ ಸಿಕ್ಕಿರುವ ಸ್ವಾತಂತ್ರö್ಯವನ್ನು ನಾವು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮೀನುಗಾರಿಕೆ,
ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ ಹೇಳಿದರು.

ಅವರು ಇಂದು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ, ನಾಡಪ್ರಭು ಕೆಂಪೇಗೌಡರ 108 ಅಡಿ ಕಂಚಿನ ಪ್ರತಿಮೆಯನ್ನು ಬೆಂಗಳೂರಿನಲ್ಲಿ ಉದ್ಘಾಟನೆ ಮಾಡುವ ಪೂರ್ವಭಾವಿಯಾಗಿ ಪವಿತ್ರ ಮೃತ್ತಿಕೆ (ಮಣ್ಣು) ಸಂಗ್ರಹಿಸುವ ಅಭಿಯಾನದ ಕೆಂಪೇಗೌಡರ ರಥಕ್ಕೆ ಆರತಿ ಬೆಳಗಿ, ಹಸಿರು ನಿಶಾನೆ ತೋರಿ, ಮಾತನಾಡಿದರು. ಬೆಂಗಳೂರಿನ ಸಮಗ್ರ ಬೆಳವಣಿಗೆಗೆ ಬಹಳ ಹಿಂದೆಯೇ ವ್ಯವಸ್ಥಿತವಾಗಿ ಯೋಜನೆ ರೂಪಿಸಿ, ಹಲವು ಕೆರೆಗಳನ್ನು ನಿರ್ಮಿಸಿ, ಮಾದರಿ ನಗರಗಳ ನಿರ್ಮಾಣಕ್ಕೆ ಕಾರಣಕರ್ತರಾಗಿದ್ದ ಕೆಂಪೇಗೌಡರು ಎಲ್ಲಾ ಆಡಳಿತಗಾರರಿಗೆ ಸದಾ ಮಾದರಿ ಎಂದರು.

ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಪ್ರತಿಮೆಯನ್ನು ರಾಜ್ಯ ಸರಕಾರದಿಂದ ಬೆಂಗಳೂರಿನಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಇದಕ್ಕೆ ರಾಜ್ಯದ ಎಲ್ಲ ಜಿಲ್ಲೆಗಳಿಂದಲೂ ಮೃತ್ತಿಕೆ ಸಂಗ್ರಹಿಸಲಾಗುತ್ತಿದೆ. ನವೆಂಬರ್ 11 ರಂದು ಪ್ರಧಾನಿ ನರೇಂದ್ರ
ಮೋದಿಯವರು ಉದ್ಘಾಟನೆ ಮಾಡಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಶಾಸಕ ಕೆ.ರಘುಪತಿ ಭಟ್, ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ, ಎಸ್.ಪಿ ಹಾಕೆ ಅಕ್ಷಯ್ ಮಚ್ಚೀಂದ್ರ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಎಚ್., ತರಬೇತಿ ನಿರತ ಐ.ಎ.ಎಸ್. ಅಧಿಕಾರಿ
ಯತೀಶ್, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಕಿರಣ್ ಪಡ್ನೇಕರ್, ಯೋಜನಾ ನಿರ್ದೇಶಕ ಬಾಬು ಎಂ. ಉಪಸ್ಥಿತರಿದ್ದರು.
ಎನ್.ಆರ್.ಎಲ್.ಎಂ ವ್ಯವಸ್ಥಾಪಕ ಪ್ರಭಾಕರ ಆಚಾರ್ ಕಾರ್ಯಕ್ರಮ ನಿರ್ವಹಿಸಿದರು.

 
 
 
 
 
 
 
 
 
 
 

Leave a Reply