‘ಪ್ರಧಾನಿಯವರ ಮನ್ ಕೀ ಬಾತ್ ವೀಕ್ಷಣೆ’ ಮತ್ತು ‘ಸಂಜೀವಿನಿ ವಿಶೇಷ ಸಂತೆ’ – ಪೂರ್ವಭಾವಿ ಸಭೆ

ಆಗಸ್ಟ್ 28 ರವಿವಾರ ಬೆಳಿಗ್ಗೆ ಗಂಟೆ 11.00ಕ್ಕೆ ಅಂಬಲಪಾಡಿ ಗ್ರಾಮ ಪಂಚಾಯತ್ ಸಹಯೋಗದೊಂದಿಗೆ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ತಾಲೂಕು ಸಂಜೀವಿನಿ ಒಕ್ಕೂಟದ ಸ್ವಸಹಾಯ ಸಂಘದ ಸದಸ್ಯರಿಂದ ನಡೆಯಲಿರುವ ಪ್ರಧಾನಿ ನರೇಂದ್ರ ಮೋದಿಯವರ ಆಗಸ್ಟ್ ತಿಂಗಳ ‘ಮನ್ ಕೀ ಬಾತ್ ನೇರ ಪ್ರಸಾರ ವೀಕ್ಷಣೆ’ ಮತ್ತು ‘ಸಂಜೀವಿನಿ ಒಕ್ಕೂಟದ ವಿಶೇಷ ಸಂತೆ’ ಕಾರ್ಯಕ್ರಮದ ಪೂರ್ವಭಾವಿ ಸಭೆಯು ಅಂಬಲಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ರೋಹಿಣಿ ಎಸ್. ಪೂಜಾರಿ ಅಧ್ಯಕ್ಷತೆಯಲ್ಲಿ ಅಂಬಲಪಾಡಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಉಡುಪಿ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಬಾಬು ಎಂ. ಮಾತನಾಡಿ, ಜಿಲ್ಲೆಯಲ್ಲಿ ಸಂಜೀವಿನಿ ಮಹಿಳಾ ಸ್ವಸಹಾಯ ಸಂಘಗಳು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಿವೆ. ಮಹಿಳಾ ಸಬಲೀಕರಣದ ಸದುದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಎನ್.ಆರ್.ಎಲ್.ಎಂ. ಯೋಜನೆಯನ್ನು ಜಾರಿಗೆ ತಂದಿದ್ದು, ಜಿಲ್ಲೆಯಾದ್ಯಂತ ಸಂಜೀವಿನಿ ಸ್ವಸಹಾಯ ಸಂಘಗಳ ಸದಸ್ಯರು ಗುಡಿ ಕೈಗಾರಿಕೆಗಳಲ್ಲಿ ಉತ್ಪಾದಿಸಿದ ಗೃಹೋಪಯೋಗಿ ಉತ್ಪನ್ನಗಳನ್ನು ‘ಸಂಜೀವಿನಿ ಸಂತೆ’ ಮೂಲಕ ಮಾರಾಟ ಮಾಡುವ ಪ್ರಕ್ರಿಯೆ ಮಹಿಳೆಯರಲ್ಲಿ ಸ್ವಾವಲಂಬನೆಯ ಆತ್ಮ ವಿಶ್ವಾಸವನ್ನು ಹೆಚ್ಚಿಸಿದೆ. ಸಾರ್ವಜನಿಕರು ಸಂಜೀವಿನಿ ಸಂತೆಯಲ್ಲಿ ಗರಿಷ್ಠ ಪ್ರಮಾಣದಲ್ಲಿ ಉತ್ಪನ್ನಗಳನ್ನು ಖರೀದಿಸುವ ಮೂಲಕ ಮಹಿಳೆಯರಿಗೆ ಆತ್ಮಸ್ಥೈರ್ಯ ತುಂಬಬೇಕು ಎಂದರು.

ಕರ್ನಾಟಕ ಸರಕಾರದ ಉದ್ಯಮ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಕೆ.ಉದಯ ಕುಮಾರ್ ಶೆಟ್ಟಿ ಮಾತನಾಡಿ ‘ಸಂಜೀವಿನಿ ಸಂತೆ’ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನಪ್ರಿಯತೆ ಪಡೆದಿದೆ. ಕೇಂದ್ರ ಸರಕಾರದ ಎನ್.ಆರ್.ಎಲ್.ಎಂ. ಯೋಜನೆಯು ‘ಆತ್ಮ ನಿರ್ಬರ ಭಾರತ’ ಪರಿಕಲ್ಪನೆಗೆ ಪೂರಕವಾಗಿದೆ. ಪ್ರಧಾನಿ ಮೋದಿ ಆಶಯದಂತೆ ‘ವೋಕಲ್ ಫಾರ್ ಲೋಕಲ್’ ತತ್ವವು ಸಂಜೀವಿನಿ ಒಕ್ಕೂಟದ ಸದಸ್ಯರ ಸ್ಥಳೀಯ ಉತ್ಪಾದನಾ ಕ್ರಾಂತಿಯ ಮೂಲಕ ಪ್ರಚಲಿತವಾಗುತ್ತಿದೆ. ಇಂದು ಉತ್ತಮ ಗುಣಮಟ್ಟದ ಉತ್ಪನ್ನಗಳು ಸ್ಥಳೀಯರಿಂದಲೇ ಉತ್ಪಾದನೆಗೊಂಡು ಸ್ಥಳೀಯರ ಬೇಡಿಕೆಯನ್ನು ಪೂರೈಸುವ ಪ್ರಕ್ರಿಯೆಯಿಂದ ಸಂಜೀವಿನಿ ಒಕ್ಕೂಟದ ಸ್ವಸಹಾಯ ಸಂಘಗಳ ಮಹಿಳೆಯರು ಜವಾಬ್ದಾರಿಯನ್ನು ಬದ್ಧತೆ ಮತ್ತು ಪರಿಪೂರ್ಣತೆಯಿಂದ ನಿಭಾಯಿಸುತ್ತಾರೆ ಎಂಬುದನ್ನು ಸಾಬೀತುಪಡಿಸಿದೆ ಎಂದರು.

ಎನ್.ಆರ್.ಎಲ್.ಎಂ. ಜಿಲ್ಲಾ ವ್ಯವಸ್ಥಾಪಕ ಪ್ರಭಾಕರ್ ಆಚಾರ್ಯ ಪ್ರಸ್ತಾವಿಕವಾಗಿ ಮಾತನಾಡಿ ಕೇಂದ್ರ ಸರಕಾರದ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಡಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದ (ಎನ್.ಆರ್.ಎಲ್.ಎಂ) ಅನ್ವಯ ನಡೆಯುತ್ತಿರುವ ಸಂಜೀವಿನಿ ಒಕ್ಕೂಟಗಳ ಚಟುವಟಿಕೆ, ಕಾರ್ಯ ನಿರ್ವಹಣೆ ಹಾಗೂ ಒಕ್ಕೂಟದ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರಿಂದ ಉತ್ಪಾದಿತ ಉತ್ಪನ್ನಗಳ ಮಾರಾಟ ಮಳಿಗೆ ಸಂಜೀವಿನಿ ಸಂತೆಯ ಬಗ್ಗೆ ವಿಸ್ತೃತ ಮಾಹಿತಿ ನೀಡಿದರು.

ಅಂಬಲಪಾಡಿ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಶಿವಕುಮಾರ್ ಅಂಬಲಪಾಡಿ ಮಾತನಾಡಿ ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯ ಮನ್ ಕೀ ಬಾತ್ ಕಾರ್ಯಕ್ರಮದ ಆಗಸ್ಟ್ ತಿಂಗಳ ನೇರ ಪ್ರಸಾರ ವೀಕ್ಷಣೆಯು ಪ್ರಧಾನಿ ಕಾರ್ಯಾಲಯದಿಂದ ಅನುಮೋದನೆಗೊಂಡ ರಾಜ್ಯದ ವೀಕ್ಷಣಾ ಕೇಂದ್ರ ಅಂಬಲಪಾಡಿ ಗ್ರಾಮ ಪಂಚಾಯತ್ ನ ಸುವರ್ಣ ಸೌಧ ಸಭಾಂಗಣದಲ್ಲಿ ಆಗಸ್ಟ್ 28 ರವಿವಾರ ಬೆಳಿಗ್ಗೆ ಗಂಟೆ 11.00ಕ್ಕೆ ನಡೆಯಲಿದ್ದು, ವೀಕ್ಷಣೆಯಲ್ಲಿ ವಿಶೇಷವಾಗಿ ತಾಲೂಕು ಸಂಜೀವಿನಿ ಒಕ್ಕೂಟದ ಸದಸ್ಯರು ಭಾಗವಹಿಸಲಿದ್ದಾರೆ. ಬೆಳಿಗ್ಗೆ ಗಂಟೆ 9.30ರಿಂದ ಸಂಜೀವಿನಿ ಒಕ್ಕೂಟದ ‘ವಿಶೇಷ ಸಂತೆ’ ನಡೆಯಲಿದೆ. ತಾಲೂಕು ಸಂಜೀವಿನಿ ಒಕ್ಕೂಟದ ಸದಸ್ಯರು, ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ವಿನಂತಿಸಿದರು.

ಎನ್.ಆರ್.ಎಲ್.ಎಂ. ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಕೃಷ್ಣ, ಉಡುಪಿ ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷ ರಾಜೇಂದ್ರ ಪಂದುಬೆಟ್ಟು, ಅಂಬಲಪಾಡಿ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷೆ ಉಷಾ ಕಿದಿಯೂರು, ತಾಲೂಕು ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಲತಾ ಅಶೋಕ್, ಗ್ರಾಮ ಪಂಚಾಯತ್ ಸದಸ್ಯರಾದ ರಾಜೇಶ್ ಸುವರ್ಣ, ಶಶಿಧರ್ ಸುವರ್ಣ, ಹರೀಶ್ ಪಾಲನ್ ಕಪ್ಪೆಟ್ಟು, ಪ್ರಮೋದ್ ಸಾಲಿಯಾನ್, ಶಕುಂತಲಾ ಶೆಟ್ಟಿ, ಭಾರತಿ ಭಾಸ್ಕರ್, ಉಷಾ ಶೆಟ್ಟಿ, ಕುಸುಮ ಹಾಗೂ ಸಂಜೀವಿನಿ ಒಕ್ಕೂಟದ ಅಂಬಲಪಾಡಿ, ಕಡೇಕಾರು, ಉದ್ಯಾವರ, ತೆಂಕನಿಡಿಯೂರು, ಬಡಾನಿಡಿಯೂರು, ಕೆಮ್ಮಣ್ಣು ಮತ್ತು ಕಲ್ಯಾಣಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಸದಸ್ಯರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

ಅಂಬಲಪಾಡಿ ಗ್ರಾಮ ಪಂಚಾಯತ್ ಪಿ.ಡಿ.ಒ. ವಸಂತಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಅಂಬಲಪಾಡಿ ಸಂಜೀವಿನಿ ಒಕ್ಕೂಟದ ಎಂಬಿಕೆ ಪ್ರಮೀಳಾ ವಂದಿಸಿದರು.

 
 
 
 
 
 
 
 
 
 
 

Leave a Reply