Janardhan Kodavoor/ Team KaravaliXpress
24.6 C
Udupi
Sunday, September 25, 2022
Sathyanatha Stores Brahmavara

75 ಹಾಗೂ ಎನ್‌ಇಪಿ ಸಂದರ್ಭದಲ್ಲಿ ಅದಮಾರು ಮಠದ ನೆನಪು~ ಡಾ.ಶ್ರೀಕಾಂತ್ ಸಿದ್ದಾಪುರ

ದೇಶಭಕ್ತಿ, ಕಲೆ, ಸಂಸ್ಕೃತಿ, ಶಿಕ್ಷಣ ಎಂದಾಕ್ಷಣ ನಮ್ಮ ನೆನಪಿಗೆ ಬರುವುದು ಉಡುಪಿಯ ಶ್ರೀ ಅದಮಾರು ಮಠ. ಕರಾವಳಿಯ ಹೆಮ್ಮೆಯ ಕಲೆಯಾದ ಯಕ್ಷಗಾನದ ಬೆಳವಣಿಗೆಯಲ್ಲಿ ನರಹರಿತೀರ್ಥರ ಕೊಡುಗೆ ಇನ್ನೂ ಹಸಿರಾಗಿದೆ. ಶೈಕ್ಷಣಿಕ ಸೇವೆಯಲ್ಲಿ ರಾಷ್ಟ್ರಮಟ್ಟದ ಗಮನ ಸೆಳೆದ ಮಠ. ಸ್ವಾತಂತ್ರ್ಯ ಹೋರಾಟದಲ್ಲಿಯೂ ಅದಮಾರು ಮಠದ ಪಾತ್ರವಿದೆ. ಇದೀಗ ಸ್ವಾತಂತ್ರ್ಯಕ್ಕೆ ಸಂಭ್ರಮದ ಅಮೃತಮಹೋತ್ಸವ ವರ್ಷ. ದೇಶದಲ್ಲಿ ಬಹುನಿರೀಕ್ಷೆಯ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯ ಸಂಭ್ರಮ. ಶಿಕ್ಷಣತಜ್ಞರು ಹಾಗೂ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಅದಮಾರು ಮಠದ ಶ್ರೀ ಶ್ರೀ ವಿಬುಧೇಶತೀರ್ಥರ ಸ್ಮರಣೆ ಈ ಸಂದರ್ಭದ ಸಂಭ್ರಮಕ್ಕೆ ವಿಶೇಷ ಮೆರುಗು ಎಂದರೆ ತಪ್ಪಾಗದು.

 ಶ್ರೀಗಳ ಸ್ವಾತಂತ್ರ್ಯ ಹೋರಾಟ: ಶ್ರೀ ಶ್ರೀ ವಿಬುಧೇಶತೀರ್ಥರು ಸ್ವಾತಂತ್ರö್ಯ ಹೋರಾಟಗಾರರು. ಅಧ್ಯಾತ್ಮ ಸಾಧನೆಗಳೊಂದಿಗೆ ದೇಶಭಕ್ತಿ ಹಾಗೂ ಜ್ಞಾನಪ್ರಸರಣಕ್ಕಾಗಿ ತನ್ನನ್ನು ಸಮರ್ಪಿಸಿಕೊಂಡವರು. ಸ್ವಾತಂತ್ರ್ಯ ಸಂಗ್ರಾಮದ ಸಮಯ. ಶ್ರೀಪಾದರು ಆಗಿನ್ನೂ ವಿದ್ಯಾರ್ಥಿ. ರಮೇಶ ಎಂಬ ಹೆಸರು. ಮೂಲ್ಕಿಯಲ್ಲಿ ಬ್ರಿಟಿಷರ ವಿರುದ್ಧ ಬೃಹತ್ ಪ್ರತಿಭಟನೆ. ಈ ಮೆರವಣಿಗೆ ಗಾಂಧಿ ಮೈದಾನದ ತನಕ ಹರಿದಿತ್ತು. ಅಲ್ಲಿ ಸಭೆ. ವೇದಿಕೆಯನ್ನೇರಿ ಬ್ರಿಟಿಷರ ವಿರುದ್ಧ ಭಾಷಣ ಮಾಡಿದರು. ಬ್ರಿಟಿಷರು ಜಾರಿಗೆ ತರುತ್ತಿರುವ ವಾರಸುದಾರಿಕೆಗೆ ದತ್ತು ಮಕ್ಕಳು ಹಕ್ಕುದಾರರಲ್ಲ ಎಂಬ ಕಾಯ್ದೆಯ ವಿರುದ್ಧ ವಾಗ್ದಾಳಿ ನಡೆಸಿದರು. 

ಹಿಮಾಲಯವನ್ನೇರಿ ಉಫ್ ಎಂದು ಊದಿದರೆ ಹಾರಿ ಹೋಗುವಷ್ಟು ಸಂಖ್ಯೆಯಲ್ಲಿರುವ ಬ್ರಿಟಿಷರು ನಮ್ಮನ್ನು ಆಳುವುದು ನಾಚಿಕೆಯ ಸಂಗತಿ ಎಂದು ಗುಡುಗಿದರು. ಅವರ ದೇಶಭಕ್ತಿಗೆ ಇಡೀ ಸಭೆಯೇ ಬೆರಗಾಗಿತ್ತು. ೧೯೪೨ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಚಳವಳಿ. ಉಡುಪಿಯಲ್ಲಿಯೂ ದೇಶಪ್ರೇಮದ ಕೂಗು ಮುಗಿಲು ಮುಟ್ಟಿತ್ತು. ಶ್ರೀ ವಿಬುಧೇಶತೀರ್ಥರು ಆಗ ಉಡುಪಿ ಬೋರ್ಡ್ ಹೈಸ್ಕೂಲಿನಲ್ಲಿ ಓದುತ್ತಿದ್ದರು. ಮುಖ್ಯೋಪಾಧ್ಯಾಯರಾಗಿದ್ದ ರೋಕಿ ಫೆರ್ನಾಂಡಿಸರ ನೆಚ್ಚಿನ ಶಿಷ್ಯರು. ಹೈಸ್ಕೂಲಿನ ಮಾಡನ್ನೇರಿದರು. ಧ್ವಜಾರೋಹಣ ಮಾಡಿ ದೇಶಪ್ರೇಮವನ್ನು ಮೆರೆದು ಪರಕೀಯರ ಆಳ್ವಿಕೆಯ ವಿರುದ್ಧ ಪ್ರತಿಭಟಿಸಿದರು.

ಅಧ್ಯಾತ್ಮದೊಂದಿಗೆ ವಿಜ್ಞಾನ ಹಾಗೂ ತಂತ್ರಜ್ಞಾನದತ್ತ ಕುತೂಹಲ:ಸ್ವಾತಂತ್ರ್ಯಾನಂತರ ಶ್ರೀಗಳು ಶಿಕ್ಷಣದ ಮಹತ್ವವನ್ನು ಮನಗಂಡರು. ಗುಣಮಟ್ಟದ ಶಿಕ್ಷಣದಿಂದ ಮಾತ್ರ ಬಲಿಷ್ಠ ಭಾರತ ನಿರ್ಮಾಣ ಎಂದು ಬಲವಾಗಿ ನಂಬಿದರು. ಈ ಉದ್ದೇಶದಿಂದ ದೇಶದಾದ್ಯಂತ ಗುಣಮಟ್ಟದ ಶಿಕ್ಷಣ ಸಂಸ್ಥೆಗಳನ್ನು ಹುಟ್ಟು ಹಾಕಿದರು. ದೇಶಭಕ್ತಿಯನ್ನು ವಿದ್ಯಾರ್ಥಿಗಳಲ್ಲಿ ತುಂಬಲು ಪೂರಕವಾದ ಶಿಕ್ಷಣಕ್ಕೆ ಒತ್ತು ನೀಡಿದರು. ಅಧ್ಯಾತ್ಮದೊಂದಿಗೆ ವಿಜ್ಞಾನ ಹಾಗೂ ತಂತ್ರಜ್ಞಾನದಲ್ಲಿ ಭಾರತದ ಬೆಳವಣಿಗೆಯ ಅಗತ್ಯವನ್ನು ಪ್ರತಿಪಾದಿಸಿದರು. ಇದರ ಪರಿಣಾಮವಾಗಿ ವಿಜ್ಞಾನಕ್ಕಾಗಿಯೇ ಒಂದು ಸಂಶೋಧನಾ ಕೇಂದ್ರವನ್ನು ಬೆಂಗಳೂರಿನಲ್ಲಿ ಸ್ಥಾಪಿಸಿದರು. 

ಸ್ವಾಮಿ ವಿವೇಕಾನಂದರು ಐ.ಐ.ಎಸ್ಸಿ. ಸ್ಥಾಪನೆ ಕುರಿತು ಜೆಮ್‌ಷೆಡ್ ಟಾಟಾರವರಲ್ಲಿ ಪ್ರಸ್ತಾಪಿಸಿದ ಸಂದರ್ಭ ಇಲ್ಲಿ ನೆನಪಾಗುತ್ತದೆ. ಒಮ್ಮೆ ಹಡಗಿನಲ್ಲಿ ವಿವೇಕಾನಂದರು ಪ್ರಯಾಣಿಸುತ್ತಿದ್ದರು. ಅದೇ ಹಡಗಿನಲ್ಲಿ ಟಾಟಾ ಕೂಡ ಪ್ರಯಾಣಿಕರು. ಇಬ್ಬರೂ ಮುಖಾಮುಖಿಯಾದರು. ಅವರಿಬ್ಬರ ಸಂವಾದದ ವಿಷಯ ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತವನ್ನು ಬಲಿಷ್ಠಗೊಳಿಸುವುದು. ಈ ಸಂವಾದದ ಪರಿಣಾಮವೇ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಉಗಮವಾಯಿತು. ವಿಬುಧೇಶತೀರ್ಥರು ಕೂಡ ಸಿಎನ್‌ಆರ್ ರಾವ್ ಮೊದಲಾದ ಅಂತರಾಷ್ಟ್ರೀಯ ಖ್ಯಾತಿಯ ವಿಜ್ಞಾನಿಗಳೊಂದಿಗೆ ಚರ್ಚಿಸುತ್ತಿದ್ದ ವಿಚಾರ ಭಾರತವು ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ಜಗತ್ತಿನ ಗಮನ ಸೆಳೆಯುವಂತಾಗಬೇಕು. ಇಲ್ಲಿನ ಪ್ರತಿಭಾವಂತರು ಸಂಶೋಧನೆಗೆ ಅವಕಾಶಗಳಿಲ್ಲದೆ ವಿದೇಶಕ್ಕೆ ಹೋಗಿ ಸಂಶೋಧನೆ ನಡೆಸುವ ಪರಿಸ್ಥಿತಿಯನ್ನು ತಪ್ಪಿಸಬೇಕು. ಈ ದೇಶದಲ್ಲಿಯೇ ಉನ್ನತ ಸಂಶೋಧನೆ ಕೈಗೊಂಡು ಅದರ ಫಲಿತಾಂಶವು ಭಾರತದ ಮೂಲಕ ವಿಶ್ವಕ್ಕೆ ಕೊಡುಗೆಯಾಗಬೇಕು.

ಕಥೆಯ ಮೂಲಕ ಉಪದೇಶ: ಶ್ರೀಗಳು ಹೊರಮುಖದಲ್ಲಿ ಗಂಭೀರವಾದ ವ್ಯಕ್ತಿತ್ವದವರು. ಆದರೆ ಅಂತರ೦ಗದಲ್ಲಿ ಅಷ್ಟೇ ಮೃದು. ಅವರಲ್ಲಿ ಹಾಸ್ಯಪ್ರವೃತ್ತಿಯೂ ಹುದುಗಿತ್ತು. ಅವರು ಭಾಷಣ ಮಾಡುವಾಗ ಕೆಲವೊಮ್ಮೆ ಈ ಹಾಸ್ಯ ಮನೋಭಾವ ಹೊರಸೂಸುತ್ತಿತ್ತು. ಅಂಥ ಒಂದು ಘಟನೆ ನೆನಪಾಗುತ್ತದೆ. ಪೂರ್ಣಪ್ರಜ್ಞ ಕಾಲೇಜಿನ ವಾರ್ಷಿಕೋತ್ಸವ. ಶ್ರೀಗಳ ಆಶೀರ್ವಚನದ ನುಡಿಗಳ ಸಂದರ್ಭ. ಎಲ್ಲರ ಚಿತ್ತ ಶ್ರೀಗಳತ್ತ. ಶ್ರೀಗಳು ನಸುನಗುತ್ತಾ ಅವರದ್ದೇ ಆದ ಶೈಲಿಯಲ್ಲಿ ಒಂದು ಕಥೆಯನ್ನು ಹೇಳಿ ವಿದ್ಯಾರ್ಥಿಗಳನ್ನು ರಂಜಿಸಿದರು. ಈ ಕಥೆಯ ಹಿಂದೆ ಒಂದು ಮೌಲ್ಯವೂ ಅಡಗಿತ್ತು. 

ಒಂದು ತರಗತಿ. ಅಧ್ಯಾಪಕರು ಮಕ್ಕಳಿಗೆ ಟಿಪ್ಪಣಿ ಬರೆಸುತ್ತಿದ್ದರು. ಎಲ್ಲಾ ಮಕ್ಕಳೂ ವಿಧೇಯರಾಗಿ ಅಧ್ಯಾಪಕರು ಹೇಳಿದುದನ್ನು ಬರೆದುಕೊಳ್ಳುತ್ತಿದ್ದರು. ಆದರೆ ಇವರ ನಡುವೆ ಒಬ್ಬ ವಿದ್ಯಾರ್ಥಿ ಏನನ್ನೂ ಬರೆದು ಕೊಳ್ಳದೆ ಸುಮ್ಮನೆ ಕುಳಿತಿದ್ದನು. ಅಧ್ಯಾಪಕರು ಆ ವಿದ್ಯಾರ್ಥಿಯ ಬಳಿ ಬಂದರು. ತಾನು ಹೇಳಿದ ಟಿಪ್ಪಣಿಯನ್ನು ಏಕೆ ಬರೆದುಕೊಳ್ಳುತ್ತಿಲ್ಲ? ಎಂದು ಪ್ರಶ್ನಿಸಿದರು. ಆ ವಿದ್ಯಾರ್ಥಿ ಅಷ್ಟೇ ನಯವಾಗಿ ಉತ್ತರಿಸಿದನು. ಸರ್, ನನ್ನ ಅಜ್ಜನ ಬಳಿ ಇದೇ ಟಿಪ್ಪಣಿ ಇದೆ. ಶ್ರೀಗಳು ಈ ಕಥೆಯನ್ನು ಹೇಳಿ ಮುಗಿಸುತ್ತಿದ್ದಂತೆ ಇಡೀ ಸಭೆ ನಗುತ್ತದೆ. ಶ್ರೀಗಳೂ ಸಭೆಯನ್ನು ನೋಡಿ ತಾವೂ ನಗುತ್ತಾ ನಗುವಿನ ನಡುವೆ ಮಾತನ್ನು ಮುಂದುವರಿಸುತ್ತಾರೆ.

ಈ ಕಥೆಯ ಹಿಂದಿನ ಅವರ ಕಾಳಜಿ ಅಧ್ಯಾಪಕರು ನಿರಂತರ ಅಧ್ಯಯನ ಮತ್ತು ಸಂಶೋಧನೆಗೆ ತಮ್ಮನ್ನು ಅರ್ಪಿಸಿಕೊಳ್ಳಬೇಕು. ಎಲ್ಲಾ ಕ್ಷೇತ್ರಗಳಲ್ಲೂ ಕಾಲದಿಂದ ಕಾಲಕ್ಕೆ ನೂತನ ಆವಿಷ್ಕಾರಗಳು ನಡೆಯುತ್ತಿರುತ್ತವೆ. ಅಧ್ಯಾಪಕರಿಗೆ ಇವುಗಳ ಅರಿವಿರಬೇಕು. ಅಂದರೆ ನಮ್ಮ್ಮ ಜ್ಞಾನವು uಠಿಜಚಿಣe ಆಗುತ್ತಿರಬೇಕು. ಅಮೃತ ಮಹೋತ್ಸವ ಹಾಗೂ ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಟಾನದ ಈ ಸಂದರ್ಭದಲ್ಲಿ ಶ್ರೀಗಳ ಕೊಡುಗೆ ಸ್ಮರಣೀಯ.

~ ಡಾ.ಶ್ರೀಕಾಂತ್ ಸಿದ್ದಾಪುರ

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!