ವಿಕಲಚೇತನರ ಜಿಲ್ಲಾ ಮಟ್ಟದ ದಿನಾಚರಣೆಯು ಡಿಸೆಂಬರ್ 3 ರಂದು ನಡೆಯಲಿದೆ: ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್

ಉಡುಪಿ:ಜಿಲ್ಲಾ ಮಟ್ಟದ ವಿಕಲಚೇತನರ ದಿನಾಚರಣೆಯನ್ನು ಡಿಸೆಂಬರ್ 3 ರಂದು ಉಡುಪಿ ನಗರದ ಅಮ್ಮಣ್ಣಿ ರಾಮಣ್ಣ ಸಭಾಭವನದಲ್ಲಿ ಬೆಳಗ್ಗೆ 10.30 ಕ್ಕೆ ಆಚರಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್  ಹೇಳಿದರು. ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ವಿಕಲಚೇತನರ ದಿನಾಚರಣೆಯ ಆಚರಿಸುವ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ವಿಶ್ವ ವಿಕಲಚೇತನರ ದಿನಾಚರಣೆಯು ಡಿಸೆಂಬರ್ 3 ರಂದು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ. ಜಿಲ್ಲಾ ಮಟ್ಟದಲ್ಲಿ ಸಹ ಅಂದೇ ಕಾರ್ಯಕ್ರಮವನ್ನು ನಿಯೋಜಿಸಿ, ಅರ್ಥ ಪೂರ್ಣವಾಗಿ ಆಚರಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ವಿಕಲಚೇತನರಿಗೆ ಕ್ರೀಡಾ ಸ್ಪರ್ಧೆಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುವುದು. ಎಂದ ಅವರು, ಜಿಲ್ಲಾ ವ್ಯಾಪ್ತಿಯಲ್ಲಿ 21 ವಿವಿಧ ರೀತಿಯ ಅಂಗವಿಕಲತೆಯ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದೊಂದಿಗೆ ಹಾಗೂ ವಿಕಲಚೇತನರ ಪೋಷಕರನ್ನೊಳಗೊಂಡ ಜಾಥಾ ಕಾರ್ಯಕ್ರಮವು ಅಂದು ಬೆಳಗ್ಗೆ 9.30 ಕ್ಕೆ ಉಡುಪಿ ಕೋರ್ಟ್ ಸರ್ಕಲ್‌ನಿಂದ ಸಭಾ ಕಾರ್ಯಕ್ರಮ ನಡೆಯುವ ಅಮ್ಮಣ್ಣಿ ರಾಮಣ್ಣ ಸಭಾಭವನ ದವರೆಗೆ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಸಮಾರಂಭಕ್ಕೆ ವಿಶೇಷ ಮಕ್ಕಳನ್ನು ವಿಶಿಷ್ಟವಾಗಿ ಕರೆತರುವ ಬಗ್ಗೆ ಜಾಗೃತಿ ವಹಿಸಿ ಯಾವುದೇ ರೀತಿಯ ಲೋಪವಾಗ ದಂತೆ ನೋಡಿಕೊಳ್ಳಬೇಕು. ಈ ಬಗ್ಗೆ ಸ್ವಯಂ ಸೇವಾ ಸಂಸ್ಥೆಗಳು ಸಹ ಅಗತ್ಯವಿರುವ ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಬೇಕು ಎಂದರು. ಕಾರ್ಯಕ್ರಮಕ್ಕೆ ಶಿಷ್ಠಾಚಾರದಂತೆ ಜನಪ್ರತಿನಿಧಿಗಳು ಹಾಗೂ ಗಣ್ಯರನ್ನು ಆಹ್ವಾನಿ ಸಬೇಕು ಎಂದ ಅವರು, ಅಂಗವಿಕಲತೆಗೆ ಕಾರಣ, ಪರಿಹಾರ ಮತ್ತು ಅಂಗವಿಕಲರಿಗೆ ಸಿಗುವ ಸವಲತ್ತುಗಳ ಬಗ್ಗೆ ಯಕ್ಷಗಾನ ಪ್ರಸಂಗದ ಮೂಲಕ ಅರಿವು ಮೂಡಿಸಬೇಕು ಎಂದರು.
ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ವೀಣಾ ವಿವೇಕಾನಂದ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ರತ್ನಾ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮರಾವ್, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಬಿ ಹಾಗೂ ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
 
 
 
 
 
 
 
 
 

Leave a Reply