ಸಂಸದೆ ಶೋಭಾ ಕರಂದ್ಲಾಜೆಯವರ ಹೇಳಿಕೆಯಿಂದ ಕ್ರೈಸ್ತ ಸಮುದಾಯಕ್ಕೆ ನೋವುಂಟಾಗಿದ್ದು ಕೂಡಲೇ ಕ್ರೈಸ್ತರ ಕ್ಷಮೆಯನ್ನು ಕೋರಬೇಕು~ ವೆರೋನಿಕಾ ಕರ್ನೆಲಿಯೊ

ಸಂಸದೆ ಶೋಭಾ ಕರಂದ್ಲಾಜೆಯವರು ಚರ್ಚುಗಳು ಕೋವಿಡ್ ಲಸಿಕೆ ವಿಚಾರದಲ್ಲಿ ದಾರಿ ತಪ್ಪಿಸುತ್ತಿವೆ ಎಂದು ಚರ್ಚೆ ಮಾಡುವ ಬದಲು ಮೊದಲು ತನ್ನ ಕ್ಷೇತ್ರದ ಜನತೆಗೆ ಪೂರ್ಣ ಪ್ರಮಾಣದಲ್ಲಿ ವ್ಯಾಕ್ಸಿನ್ ಲಭಿಸುವ ನಿಟ್ಟಿನಲ್ಲಿ ತಮ್ಮ ಕಾಳಜಿ ತೋರಿಸಲಿ ಎಂದು ಕಾಂಗ್ರೆಸ್ ನಾಯಕಿ ವೆರೋನಿಕಾ ಕರ್ನೆಲಿಯೊ ಹೇಳಿದ್ದಾರೆ.
ಒಬ್ಬ ಸಂಸದೆಯಾಗಿ ಜವಾಬ್ದಾರಿಯುತವಾಗಿ ನಡೆದುಕೊಳ್ಳುವುದನ್ನು ಬಿಟ್ಟು ಕ್ರೈಸ್ತ ಸಮುದಾಯದ ಬಗ್ಗೆ ಸುಳ್ಳು ವದಂತಿಗಳನ್ನು ಹಬ್ಬಿಸಿ ಈ ಮೂಲಕ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವುದೇ ಇವರ ಚಾಳಿಯಾಗಿದೆ. ಕೋವಿಡ್ ಸಂದರ್ಭದಲ್ಲಿ ಲಾಕ್ ಡೌನ್ ಹಾಗೂ ಸರಕಾರದ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸಿದ ಸಮುದಾಯವಿದ್ದರೆ ಅದು ಕ್ರೈಸ್ತ ಸಮುದಾಯವಾಗಿದ್ದು ಎಲ್ಲಿಯೂ ಕೂಡ ಯಾವುದೇ ರೀತಿಯಲ್ಲಿ ಸರಕಾರದ ಆದೇಶಗಳಲ್ಲಿ ಚ್ಯುತಿ ಬಾರದಂತೆ ನಡೆದುಕೊಂಡಿದೆ. 
ಲಸಿಕೆ ವಿತರಣೆ ಆರಂಭವಾದ ಬಳಿಕ ಮುಂಚೂಣಿಯಲ್ಲಿ ನಿಂತು ಕ್ರೈಸ್ತ ಸಮುದಾಯ ಪ್ರತಿಯೊಬ್ಬ ರಿಗೆ ಕೂಡ ಲಸಿಕೆ ಪಡೆಯುವಂತೆ ಜಾಗೃತಿ ಮೂಡಿಸಿದೆ. ಚರ್ಚುಗಳಲ್ಲಿ ಧರ್ಮಗುರುಗಳು ಸ್ವತಃ ಅವರುಗಳೇ ಲಸಿಕೆ ಹಾಕಿಸಿಕೊಂಡಿದ್ದಲ್ಲದೆ ತನ್ನ ಭಕ್ತಾದಿಗಳೂ ಕೂಡ ಹಾಕಿಸಿಕೊಳ್ಳುವಂತೆ ಪ್ರೇರೆಪಿಸಿದ್ದಾರೆ.
ಆರೋಗ್ಯ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡಿರುವ ಕ್ರೈಸ್ತ ಸಮುದಾಯ ಲಸಿಕೆ ಹಾಕಿಸಿಕೊಳ್ಳ ದಂತೆ ಜನರನ್ನು ದಾರಿ ತಪ್ಪಿಸುತ್ತಿದೆ ಎಂದು ಸಂಸದರು ಹೇಳಿಕೆ ನೀಡಿರುವುದು ಅವರಿಗೆ ಇರುವ ಅನುಭವದ ಕೊರತೆಯನ್ನು ಎದ್ದು ತೋರಿಸುತ್ತದೆ.
ತನ್ನನ್ನು ಆರಿಸಿ ಕಳುಹಿಸಿದ ಮತದಾರರನ್ನೆ ಮರೆತಿರುವ ಸಂಸದರು ಮೂರು ನಾಲ್ಕು ತಿಂಗಳಿ ಗೊಮ್ಮೆ ಅತಿಥಿಯಂತೆ ಬಂದು ಇಲ್ಲಸಲ್ಲದ ಸುಳ್ಳು ಆರೋಪಗಳನ್ನು ಮಾಡಿ ವಾಪಾಸಾಗಿದ್ದು ಬಿಟ್ಟರೆ ಅವರ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಶೂನ್ಯವಾಗಿದೆ.  
ಕೇಂದ್ರ ಮತ್ತು ರಾಜ್ಯ ಎರಡರಲ್ಲೂ ತಮ್ಮದೇ ಸರಕಾರ ಇದ್ದರೂ ತನ್ನನ್ನು ಆರಿಸಿ ಕಳುಹಿಸಿದ ಜನರಿಗೆ ಪೂರ್ಣ ಪ್ರಮಾಣದಲ್ಲಿ ಲಸಿಕೆ ವ್ಯವಸ್ಥೆ ಮಾಡುವಲ್ಲಿ ವಿಫಲರಾಗಿರುವುದು ಅವರಿಗೆ ಕ್ಷೇತ್ರದ ಮೇಲಿರುವ ಕಾಳಜಿ ಎದ್ದು ತೋರಿಸುತ್ತದೆ.
ಒರ್ವ ಸಂಸದೆ ಇಂತಹ ಕೋವಿಡ್ ಕಷ್ಟದ ಸಮಯದಲ್ಲಿ ಎಲ್ಲರನ್ನೂ ಒಗ್ಗೂಡಿಸಿಕೊಂಡು ಕೆಲಸ ಮಾಡುವುದನ್ನು ಮರೆತು ಸಮುದಾಯಗಳ ಮಧ್ಯೆ ಬಿರುಕು ಮೂಡಿಸುವ ಮತ್ತು ಅಪನಂಬಿಕೆ ಹುಟ್ಟಿಸುವ ಕೆಲಸ ಮಾಡುತ್ತಿರುವುದು ಖಂಡನೀಯ.
ಸಂಸದೆಯವರ ಇಂತಹ ಹೇಳಿಕೆಗಳಿಂದ ಕ್ರೈಸ್ತ ಸಮುದಾಯಕ್ಕೆ ನೋವುಂಟಾಗಿದ್ದು ಕೂಡಲೇ ಕ್ರೈಸ್ತರ ಕ್ಷಮೆಯನ್ನು ಕೋರಬೇಕು. ಅಲ್ಲದೆ ಸಂಸದೆಯ ಇಂತಹ ಹೇಳಿಕೆಗಳಿಗೆ ಕಡಿವಾಣ ಹಾಕುವ ಕೆಲಸವನ್ನು ಬಿಜೆಪಿ ನಾಯಕರು ಇನ್ನಾದರೂ ಮಾಡದೆ ಇದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರವಾದ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಕರ್ನೆಲಿಯೋ ಎಚ್ಚರಿಕೆ ನೀಡಿದ್ದಾರೆ.
 
 
 
 
 
 
 
 
 
 
 

Leave a Reply