ಮಂದಿರ ಪೂರ್ಣಗೊಳ್ಳುವ ವರೆಗೂ ಮಂತ್ರದೀಕ್ಷೆಗೆ ಸಲಹೆ

ಉಡುಪಿ:ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಪೂರ್ಣಗೊಳ್ಳುವ ವರೆಗೂ ಸಮಸ್ತ ಹಿಂದೂಗಳು ಶ್ರೀರಾಮ ತಾರಕ ಮಂತ್ರ ದೀಕ್ಷೆ ತೊಡಿ.
ಇದು ಅಯೋಧ್ಯೆ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ವಿಶ್ವಸ್ಥ, ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ ಸಲಹೆ.

ನೀಲಾವರದಲ್ಲಿರುವ ಶ್ರೀಮಠದ ಗೋಶಾಲೆ ಆವರಣದ ಶ್ರೀಕೃಷ್ಣ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು, ಕೋಟ್ಯಾಂತರ ಆಸ್ತಿಕ ಹಿಂದೂಗಳ ನಿಡುಗಾಲದ ಹೆಬ್ಬಯಕೆಯಾಗಿದ್ದ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣದ ಕನಸು ನನಸಾಗುವ ಕಾಲ ಕೂಡಿ ಬಂದಿದೆ. ಆ. 5ರಂದು ಬೆಳಿಗ್ಗೆ 11.30ರಿಂದ 12.30ರ ವರೆಗಿನ ಸುಮುಹೂರ್ತದಲ್ಲಿ ಪ್ರಧಾನಿ ನರೇಂದ್ರ ಮೋದಿ ಸುಮಾರು 300 ಕೋ. ರೂ. ವೆಚ್ಚದಲ್ಲಿ ನಿರ್ಮಿಸಲು  ಉದ್ದೇಶಿಸಿರುವ ಮಂದಿರದ ಶಿಲಾನ್ಯಾಸ ನೆರವೇರಿಸುತ್ತಾರೆ.

ಕೊರೊನಾ ಕಾರಣದಿಂದಾಗಿ ಹೆಚ್ಚಿನ ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಅಸಾಧ್ಯವಾದ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ತಮ್ಮ ಮನೆಗಳಲ್ಲಿಯೇ ದೂರದರ್ಶನದ ಮೂಲಕ ಕಾರ್ಯಕ್ರಮ ವೀಕ್ಷಿಸಬೇಕು. ಅಂದು ತಮ್ಮ ಮನೆಗಳನ್ನು ತಳಿರು ತೋರಣಗಳಿಂದ ಅಲಂಕರಿಸಿ ಮನೆ ಮುಂದೆ ದೀಪ ಹಚ್ಚಿ ಶ್ರೀರಾಮ, ಹನುಮ ಮಂತ್ರಜಪಾನುಷ್ಠಾನದಲ್ಲಿ ತೊಡಗಬೇಕು. ವಿಶ್ವ ಹಿಂದೂ ಪರಿಷತ್ ಆಶಯದಂತೆ ತಮ್ಮ ಮನೆಗಳ ಎದುರು ಭಗವಾಧ್ವಜವ ಅರಳಿಸಬೇಕು. ಈ ಮಂತ್ರದೀಕ್ಷೆ ಮಂದಿರ ನಿರ್ಮಾಣದ ವರೆಗೂ ಮುಂದುವರಿಯಬೇಕು. ದಿನಕ್ಕೆ ಕನಿಷ್ಟ 108 ಬಾರಿಯಾದರೂ ರಾಮಮಂತ್ರ ಜಪಿಸಬೇಕು ಎಂದರು.

ಶ್ರೀರಾಮ ಮಂದಿರ ಕೇವಲ ಗೋಡೆಗಳ ನಿರ್ಮಾಣವಲ್ಲ, ಬದಲಾಗಿ ವ್ಯಕ್ತಿತ್ವದ ನಿರ್ಮಾಣ. ಶ್ರೀರಾಮನ ಆದರ್ಶಗಳನ್ನು ನಿಜಜೀವನದಲ್ಲಿ ಅನುಸರಿಸಲು ಯತ್ನಿಸಬೇಕು. ಶ್ರೀರಾಮನ ಆರಾಧನೆ ಮೂಲಕ ಸದ್ಗುಣಗಳ ಆರಾಧನೆ ನಡೆಯಬೇಕು ಎಂದು ಶ್ರೀಗಳು ಸಲಹೆ ನೀಡಿದರು.

ರಾಮ ಮಂದಿರ ನಿರ್ಮಾಣದಲ್ಲಿ ಪ್ರತಿಯೊಬ್ಬರ ಕಾಣಿಕೆಯೂ ಸಲ್ಲಿಕೆಯಾಗಬೇಕೆಂಬ ಆಶಯದಲ್ಲಿ ಪ್ರತೀ ವ್ಯಕ್ತಿಯಿಂದ 10 ರೂ. ಹಾಗೂ ಮನೆಯೊಂದರಿಂದ 101 ರೂ. ಸಂಗ್ರಹಿಸಲು ಈಚೆಗೆ ನಡೆದ ಟ್ರಸ್ಟ್ ಸಭೆ ನಿರ್ಧರಿಸಿದೆ ಎಂದರು.

ಚಾತುರ್ಮಾಸ್ಯದ  ಕಾರಣ ತಾವು ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿಲ್ಲ. ಆದರೆ, ಅಂದು ಪೇಜಾವರ ಮಠದ ಉಪಾಸ್ಯಮೂರ್ತಿ ಶ್ರೀರಾಮ ವಿಠಲ ದೇವರಿಗೆ ಲಕ್ಷ ತುಳಸಿ ಅರ್ಚನೆ, ನವಗ್ರಹ ಹೋಮ ಮತ್ತು ಶ್ರೀರಾಮ ಮತ್ತು ಮುಖ್ಯಪ್ರಾಣ ಮಂತ್ರ ಹೋಮ ನಡೆಯಲಿದೆ.

ಅಯೋಧ್ಯೆಗೂ ಕರ್ನಾಟಕಕ್ಕೂ ಅವಿನಾಭಾವ ಸಂಬಂಧ. ಶ್ರೀರಾಮ ಭಕ್ತ ಹನುಮಂತ ಕರ್ನಾಟಕದವ. ಆದ್ದರಿಂದ ರಾಮ ಮಂದಿರ ನಿರ್ಮಾಣದಲ್ಲಿ ದಕ್ಷಿಣ ಭಾರತೀಯರು ಅದರಲ್ಲೂ ಕರ್ನಾಟಕದ ಮಂದಿ ಹೆಚ್ಚು ತೊಡಗಿಕೊಳ್ಳಬೇಕು ಎಂದು ಶ್ರೀಗಳು ತಿಳಿಸಿದರು.

ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಪಿ. ವಿಷ್ಣುಮೂರ್ತಿ ಆಚಾರ್ಯ, ಕಾರ್ಯದರ್ಶಿ ದಿನೇಶ ಮೆಂಡನ್, ಮಾತೃಶಕ್ತಿಯ ಪೂರ್ಣಿಮಾ ಸುರೇಶ್, ಬಜರಂಗದಳ ಪ್ರಾಂತ ಸಹಸಂಚಾಲಕ ಸುನಿಲ್ ಕೆ. ಆರ್., ಜಿಲ್ಲಾ ಕಾರ್ಯದರ್ಶಿ ಸುರೇಂದ್ರ ಕೋಟೇಶ್ವರ ಇದ್ದರು.

 
 
 
 
 
 
 
 
 
 
 

Leave a Reply