ಬ್ರಾಹ್ಮಣ ಜಾತಿ ಪ್ರಮಾಣಪತ್ರ ವಿತರಣೆಗೆ ಕ್ರಮ

 

ಉಡುಪಿ, ಆ. 6: ಅರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ಸಮುದಾಯದವರಿಗೆ ಉದ್ಯೋಗ, ಶಿಕ್ಷಣ, ಸರ್ಕಾರಿ ಸವಲತ್ತು ಇತ್ಯಾದಿಗಳಿಗಾಗಿ ಬ್ರಾಹ್ಮಣ ಜಾತಿ ಪ್ರಮಾಣ ಪತ್ರ ನೀಡಲು ಸರ್ಕಾರ ಸೂಚಿಸಿದ್ದು, ಕಂದಾಯ ಇಲಾಖೆ ವತಿಯಿಂದ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ನಿಗಮ ಸದಸ್ಯ ಸಾಲಿಗ್ರಾಮ ಶಿವರಾಮ ಉಡುಪ ಹೇಳಿದರು.

 

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಬಗ್ಗೆ ನಿಗಮದ ಅಧ್ಯಕ್ಷ ಎಚ್. ಎಸ್. ಸಚ್ಚಿದಾನಂದಮೂರ್ತಿ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಕಂದಾಯ ಸಚಿವ ಆರ್. ಅಶೋಕ್ ಅವರನ್ನು ವಿನಂತಿಸಿದ ಮೇರೆಗೆ ಸರ್ಕಾರ ಈಗಾಗಲೇ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದು, ಆಯಾ ತಹಶೀಲ್ದಾರ್ ಕಚೇರಿಯಲ್ಲಿ ನಿಗದಿತ ಅರ್ಜಿ ನಮೂನೆ ಹಾಗೂ ಪೂರಕ ಮಾಹಿತಿ ನೀಡಿ, 20 ರೂ. ಮುಖಬೆಲೆಯ ಛಾಪಾಕಾಗದ (ಠಸೆಪತ್ರಿಕೆ)ದಲ್ಲಿ ಘೋಷಣೆ ನೀಡಬೇಕು. ವಾರ್ಷಿಕ 8 ಲಕ್ಷಕ್ಕಿಂತ ಕಡಿಮೆ ಆದಾಯವುಳ್ಳವರು ಕೇಂದ್ರ ಸರಕಾರ ಘೋಷಿಸಿರುವ ಆರ್ಥಿಕವಾಗಿ ಹಿಂದುಳಿದ ಮುಂದುವರಿದ ಜಾತಿಯವರಿಗೆ ನೀಡಲಾದ ಶೇ. 10 ಮೀಸಲಾತಿ ಪಡೆಯಲು ಅರ್ಹರಾಗುವರು ಎಂದರು.

ಕಳೆದ ಜು. 29ರಂದು ನಿಗಮದ ಅಧ್ಯಕ್ಷ ಸಚ್ಚಿದಾನಂದಮೂರ್ತಿ ಅಧ್ಯಕ್ಷತೆಯಲ್ಲಿ ನಡೆದ ನಿಗಮದ ಪ್ರಥಮ ಸಭೆಯಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ನಿಗಮದ ವಿವಿಧ ಯೋಜನೆಗಳಾದ ಸಾಂದೀಪನೀ ಶಿಷ್ಯವೇತನ, ವಿಶ್ವಾಮಿತ್ರ ಪ್ರತಿಭಾ ಪುರಸ್ಕಾರ, ಚಾಣಕ್ಯ ಆಡಳಿತ ತರಬೇತಿ ಯೋಜನೆ, ವಿಶ್ವೇಶ್ವರಯ್ಯ ಕೌಶಲ್ಯಾಭಿವೃದ್ಧಿ ಯೋಜನೆ, ಚೈತನ್ಯ ಯೋಜನೆ ಮೊದಲಾದವುಗಳ ಅನುಷ್ಠಾನಗಳ ಬಗ್ಗೆ ನಿರ್ಧರಿಸಲಾಯಿತು. ಪ್ರತೀ ಜಿಲ್ಲಾ ಕೇಂದ್ರಗಳಲ್ಲಿ ಸಹಾಯ ಕೇಂದ್ರ ತೆರೆಯುವಂತೆ ನಿರ್ಧರಿಸಲಾಯಿತು ಎಂದರು.

ಕೋವಿಡ್ 19 ದಿನಗಳಲ್ಲಿ ಆರ್ಥಿಕಕವಾಗಿ ಹಿಂದುಳಿದ ಅದರಲ್ಲೂ ಅಡುಗೆ ವೃತ್ತಿಯವರು, ಪುರೋಹಿತರು ಮೊದಲಾದವರಿಗೆ ಉಡುಪಿ ಜಿಲ್ಲೆಯೂ ಸೇರಿದಂತೆ ರಾಜ್ಯವ್ಯಾಪಿ ಸುಮಾರು 4 ಲಕ್ಷ ರೂ. ಮೊತ್ತದ ಆಹಾರ ಕಿಟ್ ನೀಡಲಾಗಿದೆ ಎಂದು ಉಡುಪ ತಿಳಿಸಿದರು.

ನಿಗದಮ ಮತ್ತೋರ್ವ ಸದಸ್ಯ ಕಾರ್ಕಳ ರಾಜೇಶ್ ನಡ್ಯಂತಿಲ್ಲಾಯ ಸುಬ್ರಹ್ಮಣ್ಯ ಇದ್ದರು

 
 
 
 
 
 
 
 
 
 
 

Leave a Reply