ನೆರೆ ಪೀಡಿತ ಪ್ರದೇಶಗಳಿಗೆ ಭೇಟಿಯಿತ್ತ ಜಿಲ್ಲಾಧಿಕಾರಿ ತಂಡ

ಕುಂದಾಪುರ: ಜಿಲ್ಲೆಯಲ್ಲಿ ಕಳೆದ ರಾತ್ರಿಯಿಂದಲೂ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕೆಲವು ತಗ್ಗು ಪ್ರದೇಶಗಳಲ್ಲಿ ನೀರು ತುಂಬಿದೆ. ಕುಂದಾಪುರ, ಬೈಂದೂರು ಮತ್ತು ಬ್ರಹ್ಮಾವರ ತಾಲೂಕಿನ ಕೆಲವು ಗ್ರಾಮಗಳು ನೆರೆ ಭೀತಿಯಲ್ಲಿವೆ.
ಇಂದು ಜಿಲ್ಲಾಧಿಕಾರಿ ಜಿ. ಜಗದೀಶ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ವಿಷ್ಣುವರ್ಧನ್, ಕುಂದಾಪುರ ಉಪವಿಭಾಗಾಧಿಕಾರಿ ಕೆ. ರಾಜು ಸೇರಿದಂತೆ ಅಧಿಕಾರಿಗಳು ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಪರಿಸ್ಥಿತಿ ಅವಲೋಕಿಸಿದರು.
ಸೌಪರ್ಣಿಕಾ ನದಿಯಲ್ಲಿ ಭಾರೀ ಪ್ರವಾಹ ಉಂಟಾಗಿದ್ದು, ಅದರಿಂದಾಗಿ ಬೈಂದೂರು ತಾಲೂಕಿನ ನಾವುಂದ, ಬಡಾಕೆರೆ ಮತ್ತು ಮರವಂತೆ ಗ್ರಾಮಗಳನ್ನು ಸಂಪರ್ಕಿಸುವ ರಸ್ತೆ ಮುಳಗಡೆಯಾಗಿದೆ. ಅದರಿಂದ ಎರಡೂ ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಜನ ಸಂಚಾರಕ್ಕಾಗಿ ಈಗಾಗಲೇ ಜಿಲ್ಲಾಡಳಿತದಿಂದ ಎರಡು ದೋಣಿಗಳನ್ನು ಒದಗಿಸಲಾಗಿದೆ.
ಬ್ರಹ್ಮಾವರ ತಾಲೂಕಿನಲ್ಲಿ ಹರಿಯುವ ಮಡಿಸಾಲು ಹೊಳೆ ತುಂಬಿ ಹರಿಯುತ್ತಿದೆ. ಅಲ್ಲಿನ ಐದಾರು ಮನೆಗಳ ಅಂಗಳಕ್ಕೆ ನೀರು ಬಂದಿದ್ದು, ಮನೆಯೊಳಗೆ ನೀರು ನುಗ್ಗುವ ಅಪಾಯವಿದೆ. ಅಲ್ಲಿಗೂ ಜಿಲ್ಲಾಧಿಕಾರಿ ತಂಡ ಭೇಟಿ ನೀಡಿದೆ. ಎರಡೂ ಕಡೆಗಳಲ್ಲಿ ನದಿ ಪಾತ್ರದ ಮನೆಗಳಲ್ಲಿ ವಾಸಿಸುವವರಿಗೆ ಎಚ್ಚರಿಕೆಯಿಂದ ಇರುವಂತೆ ಮತ್ತು ಯಾವುದೇ ಸಮಸ್ಯೆಗಳಾದಲ್ಲಿ ತಕ್ಷಣ ಸ್ಥಳೀಯಾಡಳಿತ, ಜಿಲ್ಲಾಡಳಿತದ ಕಂಟ್ರೋಲ್ ರೂಂ ಅಥವಾ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಸೂಚನೆ ನೀಡಲಾಗಿದೆ.

ನಾಡಾ ಗ್ರಾಮಪಂಚಾಯತ್ ವ್ಯಾಪ್ತಿಯ ಹಡವು ಹಾಗೂ‌ ನಾವುಂದದಲ್ಲಿ ನೆರೆಗೆ ತುತ್ತಾದ ಸ್ಥಳಗಳನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರ ರೊಂದಿಗೆ ಮಾತನಾಡಿದ ಡಿಸಿ, ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಹೆಚ್ಚಿದ್ದು ಪ್ರವಾಹ ಹೆಚ್ಚಿರುವ ಕಡೆಗಳಿಗೆ ವಿವಿಧ ಇಲಾಖೆಯ ಅಧಿಕಾರಿಗಳ ಜೊತೆ ಭೇಟಿ ನೀಡಲಾಗುತ್ತಿದೆ. ಮುಂದಿನ ಮೂರು ದಿನ ಆರೆಂಜ್ ಅಲರ್ಟ್ ಇರಲಿದ್ದು ಮಳೆಯ ಪ್ರಮಾಣ ಕಡಿಮೆಯಾಗುವ ನಿರೀಕ್ಷೆಯಿದೆ. ಜನರು ಆತಂಕಕ್ಕೆ ಒಳಗಾಗುವುದು ಬೇಡ..ಪ್ರವಾಹ ಸ್ಥಿತಿ ಎದುರಿಸಿ ಜನರಿಗೆ ಸೂಕ್ತ ರಕ್ಷಣೆ ನೀಡುವಲ್ಲಿ ಉಡುಪಿ ಜಿಲ್ಲಾಡಳಿತ ಕಾರ್ಯ ಪ್ರವೃತ್ತವಾಗಿದೆ. ಪ್ರಸ್ತುತ ಕುದ್ರು ಪ್ರದೇಶಗಳಲ್ಲಿ ನೆರೆ ಹೆಚ್ಚಿದ್ದು ಅಲ್ಲಿನ ಜನರಿಗೆ ಓಡಾಟಕ್ಕೆ ಅನುಕೂಲವಾಗುವಂತೆ ಸರಕಾರದಿಂದ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ವ್ಯವಸ್ಥೆ ಮಾಡಲಾಗುತ್ತದೆ.

ಮಳೆಯಿಂದಾಗಿ ಮನೆ ಹಾನಿ, ಪ್ರಾಣಹಾನಿ ಹಾಗೂ ಜಾನುವಾರು ನಷ್ಟಕ್ಕೆ ತಕ್ಷಣ ಪರಿಹಾರ ನೀಡಲು ಸರಕಾರ ಆದೇಶ ನೀಡಿದ್ದು ಅದ ರಂತೆಯೇ‌ ಜಿಲ್ಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೂ ಸೂಚಿಸಲಾಗಿದೆ. ಜಿಲ್ಲಾಧಿಕಾರಿಗಳ ತುರ್ತು ಪರಿಹಾರನಿಧಿ ಖಾತೆಯಲ್ಲಿ ಸುಮಾರು 5 ಕೋಟಿ ಹಣವಿದ್ದು ಯಾವುದೇ ಸಮಸ್ಯೆಯಿಲ್ಲ ಎಂದು ಹೇಳಿದರು.​ 

ಬೈಂದೂರು ತಹಶಿಲ್ದಾರ್ ಬಸಪ್ಪ ಪೂಜಾರಿ, ಸಿಪಿಐ ಸುರೇಶ್ ನಾಯಕ್, ಕಂದಾಯ ನಿರೀಕ್ಷಕ ಇ. ಕುಮಾರ್, ಗ್ರಾಪಂ ನಾವುಂದ ಕಾರ್ಯದರ್ಶಿ ಗಣೇಶ್ ದೇವಾಡಿಗ, ನಾವುಂದ ಗ್ರಾಮಕರಣಿಕ ಹನುಮಂತ ಹಾಗೂ ಸ್ಥಳೀಯರು ಈ ಸಂದರ್ಭ ಇದ್ದರು.

ಇದೇ ವೇಳೆ ಕುಂದಾಪುರ ನಗರದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಶಾಸ್ತ್ರಿ ವೃತ್ತ ಬಳಿ ರಸ್ತೆ ಕಾಮಗಾರಿ ಅಪೂರ್ಣವಾಗಿದೆ. ಅದರಿಂದ ರಸ್ತೆಯಲ್ಲಿ ನೀರು ನಿಂತು, ಸಾರ್ವಜನಿಕರಿಗೆ ತೀವ್ರ ತೊಂದರೆಯುಂಟಾಗುತ್ತಿದೆ. ಅಲ್ಲಿಗೂ ಭೇಟಿ ನೀಡಿದ ಜಿಲ್ಲಾಧಿಕಾರಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ತಕ್ಷಣ ದುರಸ್ತಿಪಡಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಂಡುವಂತೆ ಸೂಚಿಸಿದರು.

 
 
 
 
 
 
 
 
 

Leave a Reply