ನಿಧನ : ಬಿ. ಜಗನ್ನಾಥ ಶೆಟ್ಟಿ


ಬೈಂದೂರು : ನಾಯಕತ್ವ, ಸಾರ್ವಜನಿಕ ಸೇವೆ ಮತ್ತು ಹೃದಯವಂತಿಕೆಯ ಕಾರಣದಿಂದ ಮುತ್ಸದ್ದಿ ಎಂದು ಗುರುತಿಸಿಕೊಂಡಿದ್ದ ಹಿರಿಯ ಜೀವ, ಭಾರತೀಯ ಅರಣ್ಯ ಸೇವೆಯ ನಿವೃತ್ತ ಅಧಿಕಾರಿ ಬಿ. ಜಗನ್ನಾಥ ಶೆಟ್ಟಿ (97) ಮಂಗಳವಾರ ಶಿವಮೊಗ್ಗದ ಅವರ ಪುತ್ರನ ಮನೆಯಲ್ಲಿ ನಿಧನರಾದರು. ಅವರಿಗೆ ಮೂವರು ಪುತ್ರಿಯರು ಮತ್ತು ವೈದ್ಯರಾಗಿರುವ ಮೂವರು ಪುತ್ರರು ಇದ್ದಾರೆ. ಪತ್ನಿ ವೈ. ಅಕ್ಕಮ್ಮ ಶೆಡ್ತಿ ಕೆಲವು ತಿಂಗಳ ಹಿಂದಷ್ಟೆ ಅಗಲಿದ್ದರು.


ಕುಂದಾಪುರ ತಾಲ್ಲೂಕಿನ ದೇವಲ್ಕುಂದದಲ್ಲಿ 1924ರಲ್ಲಿ ಜನಿಸಿದ್ದ ಜಗನ್ನಾಥ ಶೆಟ್ಟಿ ಶಿಕ್ಷಣ ಪಡೆದ ಬಳಿಕ ಅರಣ್ಯ ಇಲಾಖೆಗೆ ಸೇರಿ ಕರ್ನಾಟಕ, ಕೇರಳ, ಆಂಧ್ರ ಪ್ರದೇಶದಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿ, 1982 ರಲ್ಲಿ ನಿವೃತ್ತರಾದರು. ಪ್ರಾಮಾಣಿಕತೆ, ದಕ್ಷತೆಗೆ ಹೆಸರಾಗಿದ್ದ ಅವರು ಅರಣ್ಯ ಕಾಯಿದೆ ಮತ್ತು ಆಡಳಿತದ ಅಪಾರ ಜ್ಞಾನ, ಅನುಭವ ಹೊಂದಿದ್ದರು. ಅವರು ರಚಿಸಿದ ಪಾರೆಸ್ಟ್ ಮ್ಯಾನ್ಯೂವಲ್ ಅರಣ್ಯ ಅಧಿಕಾರಿಗಳ ತರಬೇತಿಯ ಪಠ್ಯವಾಗಿತ್ತು. ಅರಣ್ಯ ಕಾಯಿದೆ ತಿದ್ದುಪಡಿ ಸಲಹಾ ಸಮಿತಿಯ ಸದಸ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಕರ್ನಾಟಕ ಸರ್ಕಾರವು ಅವರನ್ನು 6 ವರ್ಷಗಳ ಅವಧಿಗೆ ‘ವನ್ಯ ಜೀವಿ ಗೌರವ ವಾರ್ಡನ್’ ಆಗಿ ನೇಮಕ ಮಾಡಿತ್ತು.

1980ರಿಂದ ಎರಡು ವರ್ಷ ಬ್ಯಾಂಕಿಂಗ್ ಸೇವೆಗಳ ಆಯ್ಕೆ ಸಮಿತಿಯ ಸದಸ್ಯರಾಗಿ ಕೆಲಸ ಮಾಡಿದ್ದರು.
ನಿವೃತ್ತಿಯ ಬಳಿಕ ಬೈಂದೂರಿಗೆ ಬಂದು ನೆಲೆಸಿದ ಅವರು ಇಲ್ಲಿನ ಸಾರ್ವಜನಿಕ ರಂಗದಲ್ಲಿ ಸಕ್ರಿಯರಾದರು. ರೋಟರಿ ಕ್ಲಬ್ ಸ್ಥಾಪನೆ, ಅದರ ಆಶ್ರಯದಲ್ಲಿ ಹತ್ತಾರು ಸಮುದಾಯ ಸೇವಾ ಕಾರ್ಯ, ರೋಟರಿ ಸಮುದಾಯ ಭವನ ನಿರ್ಮಾಣ, ರೋಟರಿ ಟ್ರಸ್ಟ್ ಸ್ಥಾಪನೆ, ಬೈಂದೂರು ತಾಲ್ಲೂಕು ರಚನೆ ಮತ್ತು ಅಭಿವೃದ್ಧಿ ಮತ್ತು ರೈಲ್ವೆ ನಿಲ್ದಾಣ ಸ್ಥಾಪನೆ ಹೋರಾಟ ಸಮಿತಿಗಳ ನೇತೃತ್ವ ವಹಿಸಿ ಅವುಗಳಲ್ಲಿ ನಿರ್ಣಾಯಕ ಪಾತ್ರ ನಿರ್ವಹಿಸಿದರು. ಒಂದು ಅವಧಿಗೆ ರೋಟರಿ ಜಿಲ್ಲಾ ಗವರ್ನರ್ ಹುದ್ದೆಯಲ್ಲಿ ಸೇವೆ ಸಲ್ಲಿಸಿದರು.

ಸ್ಥಳೀಯ, ಜಿಲ್ಲಾ ಮತ್ತು ಅಂತರರಾಷ್ಟ್ರೀಯ ಬಂಟರ ಸಂಘಗಳ ಚÀುಟುವಟಿಕೆಗಳಲ್ಲಿ ಭಾಗಿಯಾದ ಶೆಟ್ಟರು ಬೈಂದೂರು ಯಡ್ತರೆಯಲ್ಲಿ ರೂ 4 ಕೋಟಿ ವೆಚ್ಚದಲ್ಲಿ ನಡೆದ ಬಂಟರ ಭವನ ಸಂಕೀರ್ಣ ನಿರ್ಮಾಣದ ನಾಯಕತ್ವ ವಹಿಸಿದ್ದರು. ಅವರ ವೃತ್ತಿಪರ ಮತ್ತು ಸಾರ್ವಜನಿಕ ಸೇವೆಯನ್ನು ಗುರುತಿಸಿ ರೋಟರಿಯೂ ಸೇರಿದಂತೆ ಹಲವು ಸಂಸ್ಥೆಗಳು ಅವರನ್ನು ಗೌರವಿಸಿವೆ.

 
 
 
 
 
 
 
 
 

Leave a Reply