ಕಾರ್ಗಿಲ್ ವೀರ ಯೋಧರಿಗೆ ‘ಮನ್ ಕೀ ಬಾತ್’ 

ನವದೆಹಲಿ: ಪ್ರಧಾನಿ ಮೋದಿ ಭಾನುವಾರದ ತನ್ನ 67ನೆಯ ‘ಮನ್ ಕಿ ಬಾತ್‌’ನ್ನು ಕಾರ್ಗಿಲ್ ಯೋಧರ ಸ್ಮರಣೆಗೆ ಮೀಸಲಿಟ್ಟರು.
ವೀರ ಯೋಧರ ಸಾಹಸವನ್ನು ಕಾರ್ಯಕ್ರಮದುದ್ದಕ್ಕೂ ಸ್ಮರಿಸಿದ ಪ್ರಧಾನಿ , ಇಂದು ಕಾರ್ಗಿಲ್ ಯುದ್ಧದಲ್ಲಿ ಭಾರತ ಪಾಕಿಸ್ತಾನವನ್ನು ಮಣಿಸಿದ ಐತಿಹಾಸಿಕ ದಿನ. ಕಳೆದ 21 ವರ್ಷದ ಹಿಂದೆ ಭಾರತದ ಭೂಪ್ರದೇಶ ವಶಪಡಿಸಿಕೊಂಡು, ದೇಶದಲ್ಲಿ ನಡೆಯುತ್ತಿದ್ದ ಆಂತರಿಕ ಸಂಘರ್ಷಗಳನ್ನು ದುರುಪಯೋಗ ಪಡಿಸಿಕೊಳ್ಳಲು ಯತ್ನಿಸಿದ್ದ ಪಾಕಿಸ್ತಾನಕ್ಕೆ ಭಾರತೀಯ ಯೋಧರು ತಕ್ಕ ಶಾಸ್ತಿ ಮಾಡಿದ್ದರು. ಆ ಮೂಲಕ ನಮ್ಮ ಯೋಧರ ಶಕ್ತಿ ಇಡೀ ವಿಶ್ವಕ್ಕೇ ಪರಿಚಯವಾಗಿದೆ ಎಂದು ವೀರ ಯೋಧರ ತ್ಯಾಗ, ಬಲಿದಾನವನ್ನು ಸ್ಮರಿಸಿ
ಕಾರ್ಗಿಲ್ ಹುತಾತ್ಮ ಯೋಧರಿಗೆ ನಮನ ಸಲ್ಲಿಸಿದರು. ಭಾರತ, ಪಾಕಿಸ್ತಾನದೊಂದಿಗೆ ಸೌಹಾರ್ದಯುತ ಸಂಬಂಧ ಹೊಂದಲು ಯತ್ನಿಸುತ್ತಿತ್ತು. ಯಾವುದೇ ಕಾರಣವಿಲ್ಲದೆ ದ್ವೇಷ ಸಾಧಿಸುವುದು ದುಷ್ಟರ ಸ್ವಭಾವ ಎನ್ನುವುದಕ್ಕೆ ಪಾಕಿಸ್ತಾನ ಸಾಕ್ಷಿಯಾಗಿತ್ತು ಎಂದು ಮೋದಿ ಪಾಕ್ ಗೆ ಮಾತಿನ ಚಾಟಿ ಬೀಸಿದರು.
ಟ್ವೀಟರ್ ಮೂಲಕವೂ ಕಾರ್ಗಿಲ್ ಯುದ್ಧದ ವಿಜಯ ಪತಾಕೆ ಹಾರಿಸಿದ್ದ ಯೋಧರನ್ನು ಸ್ಮರಿಸಿದರು.
ಮನ್ ಕಿ ಬಾತ್ ನಲ್ಲಿ ದೇಶದ ಕೋವಿಡ್-19 ಹೋರಾಟದ ಬಗ್ಗೆಯೂ ಮಾತನಾಡಿದ ಅವರು, ನಾವಿಂದು ಲಕ್ಷಾಂತರ ಜನರ ಪ್ರಾಣ ಉಳಿಸಲು ಸಮರ್ಥರಾಗಿದ್ದೇವೆ. ಆದರೆ ವೈರಸ್ ಹರಡುವುದು ನಿಯಂತ್ರಣಕ್ಕೆ ಬಂದಿಲ್ಲ. ಅನೇಕ ಪ್ರದೇಶಗಳಲ್ಲಿ ಸೋಂಕು ವೇಗವಾಗಿ ಹರಡುತ್ತಿದೆ. ಜನರು ಸದಾ ಜಾಗರೂಕರಾಗಿರಬೇಕು ಎಂದರು. ನಾಗರಿಕರು ಮಾಸ್ಕ್ ಧರಿಸುವುದನ್ನು ಮುಂದುವರಿಸಬೇಕು, ವ್ಯಕ್ತಿಗತ ಅಂತರ ಕಾಯ್ದುಕೊಳ್ಳಬೇಕು, ನಿರಂತರವಾಗಿ ಕೈ ತೊಳೆಯಬೇಕು, ಎಲ್ಲಿಯೂ ಉಗುಳಬಾರದು ಮತ್ತು ಸ್ವಚ್ಛತೆ ಬಗ್ಗೆ ಸಂಪೂರ್ಣ ಕಾಳಜಿ ವಹಿಸಬೇಕು ಎಂದು ಮೋದಿ ಕಿವಿಮಾತು ಹೇಳಿದರು.
ಇತರ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದಲ್ಲಿ ಕೊರೊನಾ ಸೋಂಕಿತರ ಚೇತರಿಕೆ ಪ್ರಮಾಣ ಹೆಚ್ಚಿದೆ, ಸಾವಿನ ಪ್ರಮಾಣ ತೀರಾ ಕಡಿಮೆ ಇದೆ ಎಂದರು.
ಕೊರೊನಾದಿಂದ ನಾವು ಸ್ವಾತಂತ್ರ್ಯ ಪಡೆಯುವ ಪ್ರತಿಜ್ಞೆ ಮಾಡೋಣ.
ಕೊರೊನಾ ವೈರಸ್ ಆರಂಭಕ್ಕಿಂತಲೂ ಈಗ ಹೆಚ್ಚು ಅಪಾಯಕಾರಿಯಾಗಿದೆ. ಈ ವರ್ಷದ  ಆಗಸ್ಟ್ 15 ರಂದು ದೇಶದ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಕೊರೊನಾದಂಥ ಸಾಂಕ್ರಾಮಿಕ ರೋಗದಿಂದ ಮುಕ್ತರಾಗುವ ಪ್ರತಿಜ್ಞೆ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು.
ರಕ್ಷಾ ಬಂಧನವನ್ನು ವಿಭಿನ್ನ ರೀತಿಯಲ್ಲಿ ಆಚರಣೆ ಮಾಡಲು ಜನತೆ ಸಿದ್ಧತೆ ಮಾಡಿಕೊಂಡಿರುವುದು ಮತ್ತು ಅದನ್ನು ತಮ್ಮ ‘ಲೋಕಲ್ ಫಾರ್ ವೋಕಲ್‌’ ಘೋಷಣೆಗೆ ಬೆಸೆಯುತ್ತಿರುವುದನ್ನೂ  ಮೆಚ್ಚುಗೆ ವ್ಯಕ್ತಪಡಿಸಲು ಮೋದಿ  ಮರೆಯಲಿಲ್ಲ.
 
 
 
 
 
 
 
 
 
 
 

Leave a Reply