ಹೆಚ್ಚುತ್ತಿರುವ ಕೊರೊನಾ ಪ್ರಕರಣ: ಉಸ್ತುವಾರಿ ಸಚಿವ ನಿರ್ಲಕ್ಷ್ಯ

ಉಡುಪಿ: ಜಿಲ್ಲೆಯಲ್ಲಿ ಕೊರೊನಾ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಜಿಲ್ಲೆಯ ಬಗ್ಗೆ ತೀವ್ರ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಯುವ ಕಾಂಗ್ರೆಸ್‌ ಅಧ್ಯಕ್ಷ ವಿಶ್ವಾಸ್ ಅಮೀನ್ ಆರೋಪಿಸಿದ್ದಾರೆ.

ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಅವರು ಕೋವಿಡ್ -19 ಲಾಕ್ ಡೌನ್ ಬಳಿಕ ಸತತ 4 ತಿಂಗಳ ಅವಧಿಯಲ್ಲಿ ಕೇವಲ 2 ಬಾರಿ ಜಿಲ್ಲೆಗೆ ಆಗಮಿಸುವ ಮೂಲಕ ದೊಡ್ಡ ಸಾಧನೆ ಮಾಡಿದ್ದಾರೆ ಎಂದು ವಿಶ್ವಾಸ್ ಮೂದಲಿಸಿದ್ದಾರೆ. ಜಿಲ್ಲೆಯಲ್ಲಿ ಚುನಾಯಿತ ಶಾಸಕರಿದ್ದರೂ ಹೊರ ಜಿಲ್ಲೆಯವರನ್ನು ಉಸ್ತುವಾರಿ ಸಚಿವರನ್ನಾಗಿ ಮಾಡಿದ್ದು ಸರಕಾರದ ಮೊದಲ ತಪ್ಪು. ಉಡುಪಿ ಜಿಲ್ಲೆಯ ಉಸ್ತುವಾರಿ ಸಚಿವರು ಸದ್ಯ ರಾಜ್ಯದ ಗೃಹ ಸಚಿವರೂ ಆಗಿರುವುದರಿಂದ ಜಿಲ್ಲೆಯ ಬಗ್ಗೆ ಗಮನ ಹರಿಸುವುದು ಕಷ್ಟ ಸಾಧ್ಯವಾಗುತ್ತದೆ ಎಂದು ಕಾಂಗ್ರೆಸ್ ಪಕ್ಷ ಆರಂಭದಿಂದಲೂ ಹೇಳಿಕೊಂಡು ಬಂದಿತ್ತು. ಅದಕ್ಕೆ ಉದಾಹರಣೆಯಾಗಿ ಕೊರೊನಾದ ಸಂಕಷ್ಟ ಸಮಯದಲ್ಲಿ ಜಿಲ್ಲೆಯ ಜನರೊಂದಿಗೆ ನಿಲ್ಲಬೇಕಾದ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯ ಜನತೆಯನ್ನು ಅನಾಥರನ್ನಾಗಿಸಿದ್ದಾರೆ ಎಂದವರು ಖೇದ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 3 ಸಾವಿರದ ಗಡಿ ದಾಟಿದ್ದು ಅದರ ನಿಯಂತ್ರಣ ಹಾಗೂ ಕೈಗೊಂಡ ಮುಂಜಾಗ್ರತಾ ಕ್ರಮಗಳ ಬಗ್ಗೆ ಅರಿಯಲು ಒಂದೆರೆಡು ಬಾರಿ ಜಿಲ್ಲೆಗೆ ಆಗಮಿಸಿದ್ದು ಬಿಟ್ಟರೆ ಬೇರೆನೂ ಕೆಲಸ ನಡೆದಿಲ್ಲ. ಈ ಹಿಂದೆ ಸಮ್ಮಿಶ್ರ ಸರಕಾರವಿದ್ದಾಗ ಉಸ್ತುವಾರಿ ಸಚಿವೆ ಜಯಮಾಲಾ ತಿಂಗಳಿಗೆ ಹಲವು ಬಾರಿ ಜಿಲ್ಲೆಗೆ ಭೇಟಿ ನೀಡಿ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸುತ್ತಿದ್ದರು ಎಂದು ವಿಶ್ವಾಸ್ ಸ್ಮರಿಸಿದ್ದಾರೆ.

ಇನ್ನಾದರೂ ಉಸ್ತುವಾರಿ ಸಚಿವರು ಎಚ್ಚೆತ್ತು ಜಿಲ್ಲೆಯ ಸಮಸ್ಯೆ ಬಗ್ಗೆ ಗಮನ ಹರಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಯುವ ಕಾಂಗ್ರೆಸ್ ಬೀದಿಗಿಳಿದು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ

 
 
 
 
 
 
 
 
 
 
 

Leave a Reply