ಹುಲ್ಲುಗಾವಲಿಗೆ ಗೋವುಗಳ ತಾತ್ಕಾಲಿಕ ಸ್ಥಳಾಂತರ

ಉಡುಪಿ: ಕೃಷ್ಣಪೂಜೆಯಷ್ಟೇ ಪ್ರಾಮುಖ್ಯತೆಯನ್ನು ಗೋ ರಕ್ಷಣೆ ಮತ್ತು ಪಾಲನೆಗೆ ನೀಡಿರುವ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ನೀಲಾವರ ಗೋಶಾಲೆಯಲ್ಲಿರುವ ಗೋವುಗಳನ್ನು ತಾತ್ಕಾಲಿಕವಾಗಿ ಸುರಕ್ಷಿತ ಹುಲ್ಲುಗಾವಲು ಪ್ರದೇಶಗಳಿಗೆ ಸ್ಥಳಾಂತರಿಸುವ ಯೋಚನೆಯಲ್ಲಿದ್ದಾರೆ.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೀಲಾವರದಲ್ಲಿ ಸುಮಾರು 1,400ಕ್ಕೂ ಮಿಕ್ಕಿ ಗೋವುಗಳಿವೆ. ಜೊತೆಗೆ ಕೊಡವೂರು, ಹೆಬ್ರಿ ಮೊದಲಾದೆಡೆಗಳಲ್ಲೂ ಗೋಶಾಲೆಯನ್ನು ನಡೆಸಲಾಗುತ್ತಿದೆ. ಗೋವುಗಳ ಮೇವು, ಸಿಬಂದಿ ವೇತನ ಇತ್ಯಾದಿಗಳಿಗಾಗಿ ಸುಮಾರು 20 ಲಕ್ಷ ರೂ. ವೆಚ್ಚ ಬರುತ್ತಿದೆ. ಅದನ್ನು ತಾವು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರವಾಸ ನಡೆಸಿ ಭಕ್ತರು ಮತ್ತು ಅಭಿಮಾನಿಗಳಿಂದ ಸಂಗ್ರಹಿಸಿ ಭರಿಸಲಾಗುತ್ತಿತ್ತು. ಕೊರೊನಾ ಹಿನ್ನೆಲೆಯಲ್ಲಿ ಪ್ರವಾಸ ಅಸಾಧ್ಯವಾದ ಕಾರಣ ಮೇವು ನೀಡುವುದೂ ಕಷ್ಟಕರವಾಗಿದೆ. ಸರಕಾರಕ್ಕೆ ಅನುದಾನಕ್ಕಾಗಿ ಮನವಿ ಮಾಡಿದ್ದರೂ ಇದುವರೆಗೆ ಹಣ ಬಂದಿಲ್ಲ. ಬರುವ ನಿರೀಕ್ಷೆ ಇದೆ.

ಪ್ರಸ್ತುತ ತಾತ್ಕಾಲಿಕವಾಗಿ ಗೋವುಗಳನ್ನು ಸುರಕ್ಷಿತ ಹುಲ್ಲುಗಾವಲುಗಳಿಗೆ ಸ್ಥಳಾಂತರಿಸುವ ಬಗ್ಗೆ ಯೋಚಿಲಾಗಿದೆ. ಕಲ್ಯಾಣಪುರ ಕುದ್ರುವನ್ನು ಆಯ್ಕೆ ಮಾಡಲಾಗಿದೆ. ಜೊತೆಗೆ ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಸುಮಾರು 700 ಎಕರೆ ಸ್ಥಳವಿದ್ದು ವಿಪುಲ ಹುಲ್ಲು ಇದೆ. ತಾತ್ಕಾಲಿಕ ಬೇಲಿ ನಿರ್ಮಿಸಿಕೊಟ್ಟಲ್ಲಿ ದನಗಳನ್ನು ಸಾಗಿಸಬಹುದು ಎಂದರು.

25- 30 ಎಕ್ರೆ ಸುರಕ್ಷಿತ ಹುಲ್ಲು ಬೆಳೆಯುವ ಸ್ಥಳ ಇದ್ದವರು ಮಠ ಅಥವಾ ಗೋಶಾಲೆಯನ್ನು ಸಂಪರ್ಕಿಸಬಹುದು ಎಂದೂ ಶ್ರೀಗಳು ತಿಳಿಸಿದರು.

 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply