ಉಡುಪಿ: ವಿದ್ಯೆಯೊಂದಿಗೆ ವಿದ್ಯಾರ್ಥಿಗಳಿಗೆ ಸ್ವಾಮಿ ಭಕ್ತಿ, ಪಿತೃಭಕ್ತಿ ತುಂಬಿಸಬೇಕು. ತಾಂತ್ರಿಕತೆಯನ್ನು ತಲೆಗೆ ತುಂಬುವುದಕ್ಕೂ ಮುನ್ನ ಸಂಸ್ಕೃತ, ಸಂಸ್ಕಾರದ ಬೋಧನೆ ಮಾಡಬೇಕು.
ಇದು ಅದಮಾರು ಮಠದ ಹಿರಿಯ ಯತಿ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರ ಸಲಹೆ.
ಇಲ್ಲಿನ ಎಂ.ಜಿ.ಎಂ ಕಾಲೇಜಿನ ನವೀಕೃತ ನೂತನ ರವೀಂದ್ರ ಮಂಟಪದ ಪ್ರಾರಂಭೋತ್ಸವದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದ ಅವರು, ವಿದ್ಯಾರ್ಥಿಗಳಿಗೆ ನಾವು ಕೇವಲ `ಪ್ರಿಯರು’ ಆಗುವ ಬದಲು, ತಪ್ಪಿದಾಗ ಕೂಡಲೇ ತಿದ್ದಿ `ಹಿತವರು’ ಆಗಬೇಕು ಎಂದರು.
ಹಿರಿಯರ ತಪ್ಪುಗಳ ಬಗ್ಗೆ ಕಿರಿಯರು ಹೇಳಿದಾಗ ತಿದ್ದಿಕೊಳ್ಳುವ ಹೃದಯ ವೈಶಾಲ್ಯತೆ ಇದ್ದರೆ ಅವರು ಸಮಾಜದ ಆಸ್ತಿಯಾಗುತ್ತಾರೆ ಎಂದೂ ಶ್ರೀಗಳು ಅಭಿಪ್ರಾಯ ವ್ಯಕ್ತಪಡಿಸಿದರು.
ಮಣಿಪಾಲ್ ಟೆಕ್ನಾಲಜೀಸ್ ಕಾರ್ಯನಿರ್ವಾಹಕ ಅಧ್ಯಕ್ಷ ಟಿ. ಗೌತಮ್ ಪೈ, ಕೊರೊನಾದಿಂದಾಗಿ ಎಲ್ಲಾ ಕ್ಷೇತ್ರಗಳು ಅಸ್ತವ್ಯಸ್ಥಗೊಂಡಿದೆ. ಶಿಕ್ಷಣ ಕ್ಷೇತ್ರದಲ್ಲಿ ಭಾರೀ ಬದಲಾವಣೆಯ ಅನಿವಾಂರ್ಯವಿದೆ. ಉಪನ್ಯಾಸಕರೆಲ್ಲ ಆಧುನಿಕ ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಬೇಕು ಎಂದರು.
ಪ್ರಾಂಶುಪಾಲ ಡಾ| ಎಂ. ಜಿ. ವಿಜಯ ಸ್ವಾಗತಿಸಿ, ಪದವಿ ಪೂರ್ವ ಕಾಲೇಜು ಪ್ರಾಂಶುಪಾಲೆ ಮಾಲತಿದೇವಿ ವಂದಿಸಿದರು. ಕನ್ನಡ ವಿಭಾಗ ಮುಖ್ಯಸ್ಥ ಡಾ| ಪುತ್ತಿ ವಸಂತ ಕುಮಾರ್ ನಿರೂಪಿಸಿದರು.
ಅಪರಾಹ್ನ ನಡೆದ ಕಾರ್ಯಕ್ರಮದಲ್ಲಿ ಎಂ.ಜಿ.ಎಂ ಕಾಲೇಜು ಟ್ರಸ್ಟ್ ಅಧ್ಯಕ್ಷ ಟಿ. ಮೋಹನದಾಸ ಪೈ, ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಅಧ್ಯಕ್ಷ ಡಾ. ಎಚ್. ಎಸ್ ಬಲ್ಲಾಳ್, ಉಪಾಧ್ಯಕ್ಷ ಟಿ. ಸತೀಶ್ ಯು. ಪೈ ಭಾಗವಹಿಸಿದ್ದರು.






