ಬರೋಬ್ಬರಿ 66ಲಕ್ಷ ಮಂದಿ ಉದ್ಯೋಗ ಕಳೆದು ಕೊಂಡಿದ್ದಾರೆ

ನವದೆಹಲಿ: ಕಳೆದ ನಾಲ್ಕು ತಿಂಗಳಿನಲ್ಲಿ ಅಂದರೆ ಮೇಯಿಂದ ಆಗೋಸ್ಟ್ ವರೆಗೆ ಕರೊನಾ ವೈರಸ್ ಹಾಗೂ ಅದರಿಂದ ಉಂಟಾದ ಲಾಕ್ಡೌನ್ ಪರಿಣಾಮದಿಂದಾಗಿ ಭಾರತದಲ್ಲಿ ಒಟ್ಟು 66 ಲಕ್ಷ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಅಧ್ಯಯನ ವರದಿಯೊಂದು ಬಹಿರಂಗ ಪಡಿಸಿದೆ.

ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಂಐಇ) ಈ ವಿಷಯವನ್ನು ಬಹಿರಂಗಪಡಿಸಿದೆ. ಭಾರತೀಯ ಆರ್ಥಿಕತೆ ಯನ್ನು ಅವಲೋಕಿಸುವ ಸಿಎಂಐಇ, ಪ್ರತಿ ನಾಲ್ಕು ತಿಂಗಳಿಗೊಮ್ಮೆ ಉದ್ಯೋಗದ ಸಮೀಕ್ಷೆಯನ್ನು ಪ್ರಕಟಿಸುತ್ತದೆ.

ಉದ್ಯೋಗ ಕಳೆದುಕೊಂಡಿರುವವರ ಪೈಕಿ ವೈಟ್ ಕಾಲರ್ ಜಾಬ್ ನವರೇ ಅಧಿಕ ಮಂದಿ ಎಂದು ಸಮೀಕ್ಷೆ ಹೇಳಿದೆ. ಇಂಜಿನಿಯರ್, ಡಾಕ್ಟರ್ ಗಳು ಸೇರಿದಂತೆ ಅಧಿಕ ಸಂಬಳ ಪಡೆಯುವ ಉನ್ನತ ಹುದ್ದೆಯಲ್ಲಿರುವವರೇ ಕೆಲಸ ಕಳೆದುಕೊಂಡಿರುವುದು ಹೆಚ್ಚು.

ಲಾಕ್‌ಡೌನ್‌ನಿಂದ ವೈಟ್‌ ಕಾಲರ್‌ ವಲಯದ ಕ್ಲರ್ಕ್‌ಗಳಿಗೆ ಹೆಚ್ಚಿನ ತೊಂದರೆಯಾಗಿಲ್ಲ. ಬಿಪಿಒ/ಕೆಪಿಒ ವಲಯದ ಸೆಕ್ರೆಟರಿಗಳು, ಡೇಟಾ ಎಂಟ್ರಿ ಆಪರೇಟರ್‌ಗಳು, ಆಫೀಸ್‌ ಕ್ಲರ್ಕ್‌ಗಳಿಗೆ ಮನೆಯಿಂದ ಕೆಲಸ ಮಾಡುವ ಅವಕಾಶ ನೀಡಲಾಗಿದ್ದು, ಹೆಚ್ಚಿನವರಿಗೆ ಉದ್ಯೋಗ ಬಾಧಿಸಿಲ್ಲ ಎಂದು ವರದಿ ಹೇಳಿದೆ.

2019ರ ಆಗಸ್ಟ್‌ನಲ್ಲಿ 1.88 ಕೋಟಿ ವೈಟ್‌ ಕಾಲರ್‌ ಉದ್ಯೋಗಿಗಳಿದ್ದರು. ಈಗ 1.22 ಕೋಟಿಗೆ ಉದ್ಯೋಗಿಗಳ ಸಂಖ್ಯೆ ಇಳಿಕೆ ಯಾಗಿದೆ. ಉದ್ಯಮ ವಲಯದಲ್ಲಿ 50 ಲಕ್ಷ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ. ಅಂದರೆ ಉದ್ಯೋಗಿಗಳ ಸಂಖ್ಯೆ ಶೇ. 26 ರಷ್ಟು ಕುಸಿದಿದೆ. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಲ್ಲಿ ಹೆಚ್ಚಿನ ಉದ್ಯೋಗ ನಷ್ಟ ಸಂಭವಿಸಿದೆ.

ಏಪ್ರಿಲ್‌ನಲ್ಲಿ ಸಿಎಂಐಇ ಅಂದಾಜು ಮಾಡಿದ ಪ್ರಕಾರ, 12.1 ಕೋಟಿ ಉದ್ಯೋಗಗಳು ಕಡಿತವಾಗಿದ್ದವು. ಆಗಸ್ಟ್‌ ವೇಳೆಗೆ ಪರಿಸ್ಥಿತಿ ಸ್ವಲ್ಪ ಮಟ್ಟಗೆ ಸುಧಾರಿಸಿಕೊಂಡಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

 
 
 
 
 
 
 
 
 
 
 

Leave a Reply