ತ್ಯಾಜ್ಯ ಡಬ್ಬಿಯಲ್ಲಿ ನವಜಾತ ಹೆಣ್ಣು ಶಿಶು ಪತ್ತೆ!

ಉಡುಪಿ: ಇಲ್ಲಿನ ಕೂಸಮ್ಮ ಶಂಭು ಶೆಟ್ಟಿ ಹಾಜಿ ಅಬ್ದುಲ್ಲಾ ಮಹಿಳಾ ಮತ್ತು ಮಕ್ಕಳ ಸರಕಾರಿ ಆಸ್ಪತ್ರೆಯ ಎದುರು ತ್ಯಾಜ್ಯ ತುಂಬಿದ ಡಬ್ಬಿಯೊಂದರಲ್ಲಿ ನವಜಾತ ಹೆಣ್ಣು ಮಗುವೊಂದು ಪತ್ತೆಯಾಗಿದೆ.
ನವಜಾತ ಶಿಶುವನ್ನು ಯಾರೋ ಎಸೆದು ಹೋಗಿರುವ ಘಟನೆ ಸೋಮವಾರ ಮುಂಜಾನೆ ಬೆಳಕಿಗೆ ಬಂದಿದೆ.

ಆಸ್ಪತ್ರೆ ಎದುರಿನ ಮಾಂಸಾಹಾರಿ ಹೊಟೇಲ್ ಬಳಿಯ ತ್ಯಾಜ್ಯದ ಬುಟ್ಟಿಗೆ ನವಜಾತ ಹೆಣ್ಣು ಮಗುವನ್ನು ಎಸೆಯಲಾಗಿತ್ತು‌.

ಇಂದು ಬೆಳಿಗ್ಗೆ ನಗರಸಭೆಯ ಸ್ವಚ್ಛತಾ ಸಿಬಂದಿ, ಹೊಟೇಲ್ ತ್ಯಾಜ್ಯ ಸಂಗ್ರಹಿಸಲು ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ.

ತ್ಯಾಜ್ಯ ತುಂಬಿದ್ದ ಪೈಂಟ್ ಡಬ್ಬಿಯೊಳಗೆ, ಉಂಡ ಬಾಳೆಎಲೆ ರಾಶಿ ಮಧ್ಯೆ ಆಗಷ್ಟೇ ಜನ್ಮ ತಾಳಿದ ಶಿಶು ಕೂಗುವುದನ್ನು ಗಮನಿಸಿದ ಕಾರ್ಮಿಕರು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರಿಗೆ ಮಾಹಿತಿ ಮುಟ್ಟಿಸಿದರು.


ತಕ್ಷಣ ಅಲ್ಲೇ ಇರುವ ಆಸ್ಪತ್ರೆಗೆ ಶಿಶುವನ್ನು ಆರೈಕೆಗೆ ಒಳಕಾಡು ಕೊಂಡೊಯ್ದರು.
ಸದ್ಯ ಮಗು ಆರೋಗ್ಯವಾಗಿದೆ ಎಂದು ನಿತ್ಯಾನಂದ ಒಳಕಾಡು ತಿಳಿಸಿದ್ದಾರೆ

 
 
 
 
 
 
 
 
 
 
 

Leave a Reply