ಚಲನಚಿತ್ರ ನಟ ಶೇಖರ ಭಂಡಾರಿ ಕೊರೊನಾಕ್ಕೆ ಬಲಿ

 

ಮಂಗಳೂರು: ಚಲನಚಿತ್ರ ನಟ, ಚುಟುಕು ಕವಿ, ಹಾಸ್ಯ ಸಾಹಿತಿ,  ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶೇಖರ ಭಂಡಾರಿ ಕಾರ್ಕಳ (72) ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.

ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಅವರು,  ಚಿಕಿತ್ಸೆ ಫಲಕಾರಿಯಾಗದೆ ಿಂದು ನಿಧನರಾದರು.

ಕಾರ್ಕಳ ಬೆಟ್ಟದ ಮನೆಯ ಬಾಬು ಭಂಡಾರಿ ಮತ್ತು ಅಭಯಾ ಭಂಡಾರಿ ಪುತ್ರ ಶೇಖರ ಭಂಡಾರಿ, ಶಾಲಾ ದಿನಗಳಲ್ಲಿಯೇ ರಂಗಭೂಮಿಯತ್ತ ಆಕರ್ಷಿತರಾಗಿದ್ದವರು. ವಿಜಯಾ ಬ್ಯಾಂಕ್‌ನಲ್ಲಿ ಕಾರ್ಯನಿರ್ವಹಿಸಿದ್ದ ಅವರು ಈಚೆಗೆ ಬೆಂಗಳೂರು ಯಶವಂಪತಪುರ ಶಾಖೆಯಲ್ಲಿ ಕಾರ್ಯನಿರ್ವಹಿಸಿ ಈಚೆಗೆ ಸ್ವಯಂ ನಿವೃತ್ತಿ ಪಡೆದಿದ್ದರು.

ಖಳನಟ, ಖಳನಾಯಕ, ಹಾಸ್ಯ ಪಾತ್ರ, ಪೋಷಕ ಪಾತ್ರ ಹೀಗೆ ತನಗೆ ಒದಗಿಬಂದ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಕಲಾಪ್ರೇಮಿಗಳ ಗಮನಸೆಳೆದಿದ್ದರು.

ಚುಟುಕು ಸಾಹಿತ್ಯ ಕೃಷಿಯಲ್ಲಿಯೂ ತನ್ನದೇ ಆದ ಛಾಪು ಮೂಡಿಸಿ `ಚುಟುಕು ಸಾಹಿತಿ’ , `ಪ್ರಾಸ ಪ್ರವೀಣ’ ಎಂಬ ಉಪಾಧಿ ಪಡೆದಿದ್ದರು. ಅವರಿಗೆ 2018ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಲಭಿಸಿತ್ತು.


ಚಲನಚಿತ್ರಗಳಲ್ಲೂ ನಟಿಸಿರುವ ಅವರು ಪ್ರಜೆಗಳು ಪ್ರಭುಗಳು, ಇಂದ್ರ ಧನುಷ್, ಸ್ವಲ್ಪ ಅಡ್ಜೆಸ್ಟ್ ಮಾಡ್ಕೊಳ್ಳಿ, ಏಕಾಂಗಿ, ಓ ನನ್ನ ನಲ್ಲೆ, ಲವ್, ಧರ್ಮಯೋಧರು, ನನ್ನ ತಂಗಿ, ಕೋಟಿ ಚೆನ್ನಯ್ಯ, ತಮಾಷೆಗಾಗಿ, ಐದೊಂದ್ಲ ಐದು ಮುಂತಾದ ಚಿತ್ರಗಳಲ್ಲಿ ನಟಿಸಿದ್ದರು.
ಕಿರುತೆರೆಯ ಜೋಗುಳ, ಗುರುರಾಘವೇಂದ್ರ ವೈಭವ, ರಂಗೋಲಿ ಮುಂತಾದ ಧಾರಾವಾಹಿಗಳಲ್ಲಿ ಅಭಿನಯಿಸಿದ್ದರು.

ಆರೋಗ್ಯ ಇಲಾಖೆಯಲ್ಲಿ ಹಿರಿಯ ಆರೋಗ್ಯ ಸಹಾಯಕಿಯಾಗಿರುವ ಪತ್ನಿ ವಾರಿಜಾ, ಮಕ್ಕಳಾದ ಪ್ರೀತಿ ಪದ್ಮನಾಭ್ ಮತ್ತು ಸ್ವಾತಿ ಶರತ್ ಅವರನ್ನು ಅಗಲಿದ್ದಾರೆ

 
 
 
 
 
 
 
 
 
 
 

Leave a Reply