ಉಡುಪಿ ಜಿಲ್ಲೆಯಲ್ಲಿ 1,685 ನೆಗೆಟಿವ್, 271 ಪಾಸಿಟಿವ್ 

ಉಡುಪಿ: ಜಿಲ್ಲೆಯಲ್ಲಿ ಶರವೇಗದಿಂದ ದಾಂಗುಡಿ ಇಡುತ್ತಿರುವ ಕೊರೊನಾ, ಇಂದು 6 ಬಲಿ ಪಡೆದಿದೆ. ಜೊತೆಗೆ 217 ಹೊಸ ಪ್ರಕರಣ ಕಂಡುಬಂದಿದೆ. ಆ ಮೂಲಕ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 5,360 ತಲುಪಿದರೆ, ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ 50ಕ್ಕೇರಿದೆ.

ಇಂದು ಪತ್ತೆಯಾದ ಹೊಸ ಸೋಂಕಿತರ ಪೈಕಿ ಈರ್ವರು ಅನ್ಯ ಜಿಲ್ಲೆಯವರಾಗಿದ್ದಾರೆ. ಉಳಿದಂತೆ ಉಡುಪಿ 90, ಕುಂದಾಪುರ 81 ಮತ್ತು ಕಾರ್ಕಳದ 44 ಮಂದಿ ಇದ್ದಾರೆ. ಅವರಲ್ಲಿ ಕೊರೊನಾ ಲಕ್ಷಣವುಳ್ಳ 85 ಮಂದಿ ಮತ್ತು ಲಕ್ಷಣಗಳಿಲ್ಲದ 132 ಮಂದಿ ಸೇರಿದ್ದಾರೆ. ಕೊರೊನಾ ಲಕ್ಷಣವುಳ್ಳ ಪುರುಷರು 62 ಮತ್ತು ಮಹಿಳೆಯರು 23 ಹಾಗೂ ಲಕ್ಷಣಗಳಿಲ್ಲದ ಪುರುಷರು 67 ಮತ್ತು ಮಹಿಳೆಯರು 65 ಮಂದಿ. ಆ ಪೈಕಿ ಈಗಾಗಲೇ ಕೊರೊನಾ ಸೋಂಕಿತರ ಸಂಪರ್ಕದಿಂದ 93, ಐಎಲ್ಐ 62, ಸಾರಿ 9 ಇದ್ದರೆ, 51 ಮಂದಿ ರೋಗ ಪತ್ತೆ ಹಂತದಲ್ಲಿದ್ದಾರೆ. ಹೊರ ರಾಜ್ಯದಿಂದ ಬಂದ ಇಬ್ಬರು ಸೇರಿದ್ದಾರೆ.

ಇಂದು ಕೊರೊನಾ ಲಕ್ಷಣಗಳುಳ್ಳ 217 ಮಂದಿ ಐಸೊಲೇಶನ್ ಚಿಕಿತ್ಸೆಗೆ ದಾಖಲಾಗಿದ್ದಾರೆ. ಅವರಲ್ಲಿ 12 ಮಂದಿ ಗೃಹ ಚಿಕಿತ್ಸೆಯಲ್ಲಿದ್ದಾರೆ. ಇಂದು 1,991 ಮಂದಿಯ ಗಂಟಲು ದ್ರವ ಮಾದರಿ ಸಂಗ್ರಹಿಸಲಾಗಿದೆ. ಲಭ್ಯ ವರದಿ ಪೈಕಿ 1,685 ನೆಗೆಟಿವ್ ಬಂದಿದೆ. ಇನ್ನೂ 1,229 ವರದಿ ಬರಲು ಬಾಕಿ ಇದೆ ಎಂದು ಡಿಎಚ್ ಓ ಡಾ. ಸುಧೀರಚಂದ್ರ ಸೂಡ ತಿಳಿಸಿದ್ದಾರೆ.

6 ಮಂದಿ ಸಾವು
ಜಿಲ್ಲೆಯಲ್ಲಿ ಇಂದು ಕೊರೊನಾ ಪೀಡಿತ 6 ಮಂದಿ ಪುರುಷರು ಸಾವನ್ನಪ್ಪಿದ್ದಾರೆ. ಮಧುಮೇಹ ಮತ್ತು ಉಸಿರಾಟ ಸಮಸ್ಯೆಯಿದ್ದ 82ರ ಹರೆಯದ ಕುಂದಾಪುರದ ವ್ಯಕ್ತಿ, ಹೃದಯ ಸಮಸ್ಯೆ ಮತ್ತು ಮಧುಮೇಹಿಯಾಗಿದ್ದ 55ರ ಹರೆಯದ ಉಡುಪಿಯ ವ್ಯಕ್ತಿ, ಯಕೃತ್ ಸಮಸ್ಯೆ ಇದ್ದ ಕುಂದಾಪುರದ 52ರ ಹರೆಯದ ವ್ಯಕ್ತಿ, ತೀವ್ರ ಖಿನ್ನತೆಯಿಂದ ಬಳಲುತ್ತಿದ್ದ ಕಾರ್ಕಳದ 75ರ ಹರೆಯದ ವ್ಯಕ್ತಿ, ಖಿನ್ನತೆ ಮತ್ತು ಮಧು ಮೇಹವುಳ್ಳ ಉಡುಪಿಯ 36ರ ಹರೆಯದ ವ್ಯಕ್ತಿ ಹಾಗೂ ಉಸಿರಾಟ ಸಮಸ್ಯೆ ಹಾಗೂ ಹೃದ್ರೋಗ ಸಮಸ್ಯೆಯಿದ್ದ ಉಡುಪಿಯ 70ರ ಹರೆಯದ ವ್ಯಕ್ತಿ ಅಸುನೀಗಿದ್ದಾರೆ.

85 ಮಂದಿ ಗುಣಮುಖ
ಇಂದು 85 ಮಂದಿ ಗುಣಮುಖರಾಗಿದ್ದು, ಆ ಮೂಲಕ ಜಿಲ್ಲೆಯಲ್ಲಿ ಗುಣಮುಖರಾದವರ ಸಂಖ್ಯೆ 3,157 ತಲುಪಿದೆ. ಪ್ರಸ್ತುತ 2,153 ಸಕ್ರಿಯ ಪ್ರಕರಣಗಳಿವೆ ಎಂದು ಡಾ. ಸೂಡ ತಿಳಿಸಿದ್ದಾರೆ.

ಮುಂಚೂಣಿ ವೈದ್ಯರಿಗೆ ಸೋಂಕು
ಕೋವಿಡ್ ನಿರ್ವಹಣೆಯಲ್ಲಿ ಮುಖ್ಯ ಪಾತ್ರ ವಹಿಸಿ, ಮುಂಚೂಣಿ ವಾರಿಯರ್ ಆಗಿದ್ದ ವೈದ್ಯರೋರ್ವರಿಗೆ ಕೋವಿಡ್ 19 ಸೋಂಕು ತಗುಲಿದೆ. ಪ್ರಸ್ತುತ ಅವರು ಗೃಹ ಚಿಕಿತ್ಸೆಯಲ್ಲಿದ್ದಾರೆ. ಸ್ವಲ್ಪ ಮಟ್ಟಿನ ಜ್ವರ ಇದ್ದು, ಉಳಿದಂತೆ ಆರೋಗ್ಯವಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ

 
 
 
 
 
 
 
 
 

Leave a Reply