ಅಗಲಿದ ಪತ್ನಿಗೆ ಕನಸಿನ ಸೌಧ

ಕೊಪ್ಪಳ : ಆ ದಂಪತಿಗಳಿಗೆ ಸುಂದರ ಮನೆಯೊಂದನ್ನು ಕಟ್ಟಿಸಬೇಕೆಂಬ ಕನಸಿತ್ತು. ಕನಸಿನ ಮನೆಯ ಭೂಮಿ ಪೂಜೆ ನೆರವೇರಿಸಿದ್ದರು. ಮನೆಯ ಗೃಹ ಪ್ರವೇಶಕ್ಕೂ ಮುನ್ನ ಪತ್ನಿ ಅಪಘಾತದಲ್ಲಿ ಮೃತ ಪಟ್ಟಿದ್ದರು. ಇದೀಗ ಪತ್ನಿಯೊಂದಿಗೆ ಕನಸಿನ ಸೌಧದ ಗೃಹ ಪ್ರವೇಶ ನೆರವೇರಿಸಿದ್ದಾರೆ !

ಕೊಪ್ಪಳದ ಉದ್ಯಮಿಯೋರ್ವರು ತನ್ನ ಪತ್ನಿಯ ಕನಸಿನ ಮನೆಯೊಂದನ್ನು ನಿರ್ಮಿಸಿ, ಮನೆಯೊಳಗೆ ತಮ್ಮಿಂದ ಅಗಲಿರುವ ಪತ್ನಿಯನ್ನೇ ಹೋಲುವ ಪುತ್ಥಳಿಯನ್ನು ನಿರ್ಮಿಸಿ ಇತರರಿಗೆ ಮಾದರಿಯಾಗಿದ್ದಾರೆ.

ಕೊಪ್ಪಳದ ಸಮೀಪದ ಭಾಗ್ಯ ನಗರದಲ್ಲಿನ ಉದ್ಯಮಿ ಶ್ರೀನಿವಾಸ್ ಗುಪ್ತಾ ಇವರ ನೂತನ ಮನೆಯಲ್ಲಿ ವಿಶೇಷವಾದ ಪ್ರತಿಮೆ ಇದೀಗ ಎಲ್ಲರ ಗಮನ ಸೆಳೆಯುತ್ತಿದೆ. ಅಷ್ಟಕ್ಕೂ ಈ ಪ್ರತಿಮೆ ಬೇರೆಯಾರದ್ದೂ ಅಲ್ಲ. ಸ್ವತಃ ಶ್ರೀನಿವಾಸ ಗುಪ್ತಾ ಅವರ ಪತ್ನಿ ಕೆವಿಎನ್ ಮಾಧವಿ ಅವರದ್ದು.

ಕೆವಿಎನ್ ಮಾಧವಿ ಅವರಿಗೆ ತಮ್ಮ ಕನಸಿನ ಮನೆಯೊಂದನ್ನು ಕಟ್ಟಬೇಕೆಂದು ಆಸೆ ಇತ್ತು. ಅದರಂತೆ ಅವರು ಮನೆಯ ಭೂಮಿ ಪೂಜೆ ನೆರವೇರಿಸಿ, ಮನೆ ನಿರ್ಮಾಣ ಸಹ ಆರಂಭ ಮಾಡಿದ್ದರು. ಆದರೆ 2017ರ ಜುಲೈ 5 ರಂದು ತಿರುಪತಿಗೆ ಹೋಗುವ ವೇಳೆಯಲ್ಲಿ ಕೋಲಾರದ ಬಳಿ ಕಾರು ಅಪಘಾತಕ್ಕೀಡಾಗಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು.

ಪತ್ನಿಯ ಸಾವಿನ ಆಘಾತದಿಂದ ಶ್ರೀನಿವಾಸ್ ಗುಪ್ತಾ ಮನೆ ನಿರ್ಮಾಣದ ಕಾರ್ಯವನ್ನು ಸ್ಥಗಿತಗೊಳಿಸಿದ್ದರು. ಆದರೆ ಪತ್ನಿಯ ಕನಸಿನ ಸೌಧವನ್ನು ಮಕ್ಕಳ ಒತ್ತಾಯಕ್ಕೆ ಮಣಿದು ಪುನರಾರಂಭಿಸಿದರು.

ಕನಸಿನ ಮನೆ ನಿರ್ಮಾಣವಾಗವ ವೇಳೆಯಲ್ಲಿ ಪತ್ನಿ ಜೊತೆಗಿಲ್ಲ ಅನ್ನವ ಕೊರಗು ಶ್ರೀನಿವಾಸ ಗುಪ್ತಾ ಅವರನ್ನು ಸದಾ ಕಾಡುತ್ತಲೇ ಇತ್ತು. ಮನೆಯ ಆರ್ಕಿಟೆಕ್ಟ್ ರಂಘಣ್ಣನವರ್ ಮೇಣದ ಪ್ರತಿಮೆ ಮಾಡಿಸಲು ಸಲಹೆ ನೀಡಿದರು. ಅದರಂತೆ ಬೆಂಗಳೂರಿನ ಶ್ರೀಧರಮೂರ್ತಿ ಅವರ ಗೊಂಬೆ ಮನೆಗೆ ಹೋದರು. ಆದರೆ ಮೇಣದ ಪ್ರತಿಮೆ ಬದಲಾಗಿ ಸಿಲಿಕಾನ್ ಪ್ರತಿಮೆ ಮಾಡಿಸಲು ಸಲಹೆ ನೀಡಿದರು.

ಅದರಂತೆ ಶ್ರೀಧರಮೂರ್ತಿ ಸಿಲಿಕಾನ್ ಮೆಟಿರಿಯಲ್ ನಲ್ಲಿ ಮಾಧವಿ ಅವರ ಪ್ರತಿಮೆ ನಿರ್ಮಾಣ ಮಾಡಿದ್ದಾರೆ. ಅಗಸ್ಟ್ 8 ರಂದು ಶ್ರೀನಿವಾಸ್ ಗುಪ್ತಾ ಅವರು ನೂತನ ಮನೆಯ ಗೃಹ ಪ್ರವೇಶ ನೆರವೇರಿಸಿದ್ದಾರೆ. ಗೃಹ ಪ್ರವೇಶದಲ್ಲಿ ಪತ್ನಿ ಕೆವಿಎನ್ ಮಾಧವಿಯ ಅವರ ಸಿಲಿಕಾನ್ ಪ್ರತಿಮೆ ಗಮನ ಸೆಳೆಯುತ್ತಿದೆ.

ಶ್ರೀಧರ ಮೂರ್ತಿ ಅವರು ಒಂದು ವರ್ಷಕ್ಕೂ ಹೆಚ್ಚು ಕಾಲ ಶ್ರಮವಹಿಸಿ ಸಿಲಿಕಾನ್ ಪ್ರತಿಮೆಯನ್ನು ನಿರ್ಮಾಣ ಮಾಡಿದ್ದಾರೆ. ಪ್ರತಿಮೆಗೆ ಜೀವ ಇಲ್ಲ ಎನ್ನುವುದನ್ನು ಒಂದು ಬಿಟ್ಟರೆ ಥೇಟ್ ಮಾಧವಿ ಅವರೇ ಮನೆಯಲ್ಲಿ ಕುಳಿತಿರುವಂತೆ ಭಾಸವಾಗುತ್ತಿದೆ. ಮಾಧವಿ ಅವರ ಸಿಲಿಕಾನ್ ಪ್ರತಿಮೆಯನ್ನು ಮನೆಯ ಹಾಲ್ ನಲ್ಲಿಟ್ಟಿದ್ದು, ಯಾರಾದರೂ ಮನೆಗೆ ಬಂದರೆ ಇವರನ್ನು ಮಾತನಾಡಿಸದೆ ಇರಲಾರರು.

 
 
 
 
 
 
 
 
 

Leave a Reply