ಕೊರೊನಾ ಖಾಯಿಲೆಯ ಮೂರು ಹಂತಗಳು ಹಾಗೂ ಅವುಗಳ ಚಿಕಿತ್ಸೆ-  ಡಾ. ವೈ ಸುದರ್ಶನ ರಾವ್ , ಉಡುಪಿ

 

ಪ್ಲೂ ಜ್ವರವೆಂಬ ಮೊದಲನೆಯ ಹಂತ: ಕೊರೊನಾ ವೈರಾಣು ಮೂಲತಃ ಪ್ಲೂಜ್ವರದ ವೈರಾಣು. ಇದರಿಂದ ನೆಗಡಿ,ಗಂಟಲುನೋವು ,ಜ್ವರ, ಮೈಕೈನೋವು, ತಲೆನೋವು ಇತ್ಯಾದಿ ಪ್ಲೂ ಜ್ವರದ ಚಿಹ್ನೆಗಳು ಕಾಣಿಸುತ್ತವೆ. ಈ ಚಿಹ್ನೆಗಳು ಕೆಲವರಲ್ಲಿ ತೀವ್ರವಾಗಿಯೂ ಇನ್ಮು ಕೆಲವರಲ್ಲಿ ಸೌಮ್ಯ ವಾಗಿಯೂ ಇರುತ್ತದೆ.

ಈ ಹಂತವು ಸುಮಾರು ಐದು ದಿನಗಳ ಕಾಲ ಇರುತ್ತದೆ. ಈ ಹಂತದಲ್ಲಿ‌  ವಿಶ್ರಾಂತಿ, ಉತ್ತಮ ಆಹಾರ, ಸಾಕಷ್ಟು ನೀರು ಸೇವನೆ ಅತೀ ಮುಖ್ಯ. ಪ್ಯಾರಸಿಟಮಾಲ್‌ ಮಾತ್ರೆ ಹಾಗೂ ವಿಟಮಿನ್ ಮಾತ್ರೆಗಳನ್ನು‌ ಹೊರತು ಪಡಿಸಿ ಇತರ ಔಷಧಿಯ‌ ಅಗತ್ಯ ಈ ಹಂತದಲ್ಲಿ ಇರುವುದಿಲ್ಲ.ಈ ಹಂತದಲ್ಲಿ ಯಾವುದೇ ಪ್ರಾಣಾಪಾಯವೂ ಇರುವುದಿಲ್ಲ.

ರೋಗವರ್ಧನೆಯ ಎರಡನೆಯ ಹಂತ: ಫ್ಲೂ  ಜ್ವರದ ಚಿಹ್ನೆಗಳು ಆರಂಭವಾಗಿ ಐದನೆಯ ದಿನದಿಂದ ಹನ್ನೆರಡನೆಯ ದಿನದ ತನಕ ಈ ಹಂತವಿರುತ್ತದೆ. ಈ ಹಂತದಲ್ಲಿ ನಮ್ಮ ದೇಹವು ಕೊರೊನಾ ವೈರಾಣುವಿನ ವಿರುದ್ದ ನಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳುತ್ತದೆ.

ದೇಹವು ಕೊರೊನಾ ವೈರಾಣುವಿನ ವಿರುದ್ದ ಹೋರಾಡುತ್ತಾ ಅದನ್ನು ನಾಶಗೊಳಿಸಲು ಆರಂಭಿಸುತ್ತದೆ. ಈ ವೈರಾಣು ನಾಶದ  ಪ್ರಕ್ರಿಯೆಯ‌ ಭಾಗವಾಗಿ  ದೇಹದಲ್ಲಿ ಅಲ್ಲಲ್ಲಿ ರಕ್ತ ಹೆಪ್ಪುಗಟ್ಟುವ ಗುಣ ಕೆಲವರಲ್ಲಿ ಕಂಡುಬರುವುದು ಈ ಹಂತದ ಸಾರಾಂಶ.
ರಕ್ತ ಹೆಪ್ಪುಗಟ್ಟುವ ಗುಣದಿಂದಾಗಿ , ಮುಖ್ಯವಾಗಿ ಶ್ವಾಸಕೋಶದಲ್ಲಿ ರಕ್ತ ಹೆಪ್ಪುಗಟ್ಟಿ ಉಸಿರಾಟದ ತೊಂದರೆ ಆಗುತ್ತದೆ. ಈ ಹಂತದ ಮೊದಲೆರಡು ದಿನಗಳಲ್ಲಿ ( ಅಂದರೆ ಪ್ಲೂ ಜ್ವರದ ಆರನೆ, ಏಳನೆ ,ಎಂಟನೆ ದಿನಗಳಲ್ಲಿ ) ತೋರಿಕೆಗೆ ಯಾವ ಚಿಹ್ನೆಗಳು ಇರದಿರುವುದರಿಂದ ರೋಗಿಗಳು ತಮಗೆ ಬಂದಿರುವುದು ಮಾಮೂಲಿ ಪ್ಲೂ ಜ್ವರ ಎಂದು ಭಾವಿಸಿ ನಿರ್ಲಕ್ಷ ವಹಿಸುತ್ತಾರೆ.

ಆದರೆ  ನಂತರದ ದಿನಗಳಲ್ಲಿ ಕೆಮ್ಮು , ಉಸಿರಾಟದ ತೊಂದರೆ, ಎದೆ ನೋವು ,ವಾಂತಿ, ಸುಸ್ತು ಇತ್ಯಾದಿ ಚಿಹ್ನೆಗಳು ಕಾಣಿಸಿಕೊಳ್ಳುತ್ತವೆ. ನೆನಪಿಡಿ , ನೂರು ಕೊರೊನಾ ರೋಗಿಗಳಲ್ಲಿ ಹತ್ತರಿಂದ ಇಪ್ಪತ್ತರಷ್ಟು ರೋಗಿಗಳು ಈ ಹಂತವನ್ನು ಪ್ರವೇಶಿಸುತ್ತಾರೆ.

ಅಪಾಯಕಾರಿ ಮೂರನೇ ಹಂತ: ಪ್ಲೂಜ್ವರದ ಆರಂಭದ ಹತ್ತನೆಯ ದಿನದಿಂದ ಹನ್ನೆರಡನೆಯ ದಿನದಂದು ಈ ಮೂರನೆಯ ಹಂತ ಆರಂಭವಾಗುತ್ತದೆ. ನಮ್ಮ ದೇಹದಲ್ಲಿ ಆರಂಭವಾದ ರಕ್ತ ಹೆಪ್ಪುಗಟ್ಟುವ ಗುಣದಿಂದಾಗಿ ಶ್ವಾಸಕೋಶ ದಲ್ಲಿ ಅಲ್ಲಲ್ಲಿ ರಕ್ತ ಹೆಪ್ಪುಗಟ್ಟುವ ಪ್ರಕ್ರಿಯೆ ಜೋರಾಗಿ, ಶ್ವಾಸಕೋಶದಲ್ಲಿ ಗಾಳಿಯಲ್ಲಿರುವ ಆಮ್ಲಜನಕವನ್ನು ಹೀರಿಕೊಳ್ಳುವ ಕೆಲಸಕ್ಕೆ ಅಡಚಣೆ ಆರಂಬವಾಗುತ್ತದೆ.

ಈ ಅಡಚಣೆ ಎಷ್ಟು ತೀವ್ರದ್ದೂ ಅಗಬಹುದೆಂದರೆ ವೆಂಟಿಲೇಟರ್ ಮುಖಾಂತರ ಆಮ್ಲಜನಕವನ್ನು ಒತ್ತಡದಲ್ಲಿ ಶ್ವಾಸಕೋಶ ದೊಳಗೆ ಕಳಿಸುವ ಮಟ್ಟಿಗೆ ಆಗಬಹುದು. ಈ ಹಂತಕ್ಕೆ ತಲುಪಿದ ರೋಗಿಗಳ ಶ್ವಾಸಕೋಶದ ಜೊತೆಗೆ ಇತರ ಅಂಗ ಗಳಿಗೂ ಹಾನಿಯಾಗಿ ಅವರು ಸಾವನ್ನಪ್ಪುವ ಸಾಧ್ಯತೆ ಅಧಿಕವಾಗಿದೆ. ಆದುದರಿಂದ ಕೊರೊನಾ ಖಾಯಿಲೆಯ‌ ಚಿಕಿತ್ಸೆಯಲ್ಲಿ ಮೂರನೆಯ ಹಂತವನ್ನು ತಲುಪದಿರುವುದು ಅತೀ ಮುಖ್ಯವಾದುದು.

ಕೊರೊನಾ  ಖಾಯಿಲೆ ಬಂದವರೆಲ್ಲಾ ಎರಡನೆಯ ಹಾಗೂ ಮೂರನೆಯ ಹಂತವನ್ನು ಕಡ್ಡಾಯವಾಗಿ ಪ್ರವೇಶಿಸುವ ರೆಂದೇನಿಲ್ಲ  ಹಾಗೆಯೇ ಎರಡನೆಯ ಹಂತದಲ್ಲಿರುವವರು  ಮೂರನೆಯ ಹಂತವನ್ನು ಪ್ರವೇಶಿಸದಿರಲೂ ಸಾಧ್ಯವಿದೆ.

ಮೂರನೆಯ ಹಂತವನ್ನು ತಲುಪದಿರಲು ನಾವೇನು ಮಾಡಬೇಕು: 
೧)  ನಮ್ಮ ದೇಹದೊಳಗೆ ಪ್ರವೇಶ ಪಡೆದ ವೈರಾಣುಗಳ ಸಂಖ್ಯೆ ಯಾವತ್ತೂ ಕಡಿಮೆ ಇರುವಂತೆ ಪ್ರಯತ್ನಿಸಬೇಕು. ಸದಾಕಾಲ ಬಾಯಿ ಹಾಗೂ ಮೂಗು ಮುಚ್ಚುವಂತೆ ಸ್ವಚ್ಚ ಮಾಸ್ಕ ಧರಿಸುವುದು, ಪದೇ ಪದೆ ಕೈಗಳನ್ನು ತೊಳೆಯುವುದರಿಂದ ಇದನ್ನು ಸಾಧಿಸಬಹುದು.

೨) ನಮಗೆ ಬಂದಿರುವ ಖಾಯಿಲೆ ಕೋರೊನಾ ವೇ  ಆಗಿದೆ ಎಂಬುದನ್ನು  ಮೊದಲ ದಿನವೇ  ತಪ್ಪಿದಲ್ಲಿ ಎರಡನೆಯ ದಿನವಾದರೂ ಪರೀಕ್ಷೆ ಗೆ ಒಳಗಾಗಿ ತಿಳಿದಿರುವುದು. ಇದರಿಂದ ನಾವು ಸರಿಯಾದ ಚಿಕಿತ್ಸೆಯ ನ್ನು ಬೇಗನೆ ಆರಂಭಿಸಲು ಸಾಧ್ಯ ವಾಗುತ್ತದೆ.

೩)ಹತ್ತು ದಿನಗಳ ಕಾಲ ಸಂಪೂರ್ಣ ವಿಶ್ರಾಂತಿ, ಸಮತೂಕದ ಆಹಾರ ಹಾಗೂ ಸಾಕಷ್ಟು ನೀರು ಸೇವನೆ ಬೇಕಿದ್ದಲ್ಲಿ  ಡ್ರಿಪ್ಸ ಸಹಾ ಹಾಕಿಕೊಳ್ಳಬಹುದು.  ಮನೆಯಲ್ಲಿ ಸೂಕ್ತ ಅನುಕೂಲತೆಗಳು ಇಲ್ಲದಿದ್ದಲ್ಲಿ ಸರಕಾರ ಒದಗಿಸಿರುವ ಕೊರೊನಾ ಕೇರ್ ಸೆಂಟರುಗಳಲ್ಲಿ ಅಳುಕಿಲ್ಲದೆ ದಾಖಲಾಗಿರಿ.
೪) ಇತರ  ಯಾವುದೇ ಖಾಯಿಲೆ ಇದ್ದಲ್ಲಿ ಹಾಗೂ ಬೊಜ್ಜು ಶರೀರ ಉಳ್ಳವರು ಹಾಗೂ ಅರವತ್ತು ವಯಸ್ಸು ದಾಟಿದವರಲ್ಲಿ  ಎರಡನೆಯ ಹಾಗೂ ಮೂರನೆಯ ಹಂತದ ತೀವ್ರತೆ ಹೆಚ್ಚಿರುವುದರಿಂದ ಇವರು ಇನ್ನಷ್ಟು ಜಾಗ್ರತೆ ವಹಿಸಬೇಕು. ಸಾಧ್ಯವಿದ್ದಲ್ಲಿ ಆಸ್ಪತ್ರೆಗೆ ದಾಖಲಾಗುವುದೇ ಉತ್ತಮ.
೫)ತಜ್ಞ ವೈದ್ಯರ ಸಲಹೆಯಂತೆ ಕೆಲವು ರಕ್ತ ಪರೀಕ್ಷೆಗಳನ್ನು ಮಾಡುವುದರ ಮೂಲಕ ರಕ್ತ ಹೆಪ್ಪುಗಟ್ಟುವ ಗುಣವು ನಮ್ಮ ದೇಹದಲ್ಲಿ ಆರಂಭವಾಗಿರುವುದನ್ನು ಪತ್ತೆ ಹಚ್ಚಬಹುದು. ಈ ಪರೀಕ್ಷೆಯನ್ನು ಐದನೆಯ ದಿನದಿಂದ ಆರಂಭಿಸಿ ಹನ್ನೆರಡನೆಯ ದಿನದ ತನಕ ಪ್ರತೀ  ಮೂರುದಿನಗಳಿಗೊಮ್ಮೆ  ಪುನರಾವರ್ತಿಸಬೇಕು.
ಎದೆಯ ಎಕ್ಸ ರೇ, ಸಿಟಿ ಸ್ಕ್ಯಾನ್ ಗಳು ಶ್ವಾಸಕೋಶದಲ್ಲಿ  ಈಗಾಗಲೇ ರಕ್ತ ಹೆಪ್ಪುಗಟ್ಟಿದನ್ನು  ಪತ್ತೆ ಹಚ್ಚುತ್ತವೆ. ನಾವು ಈ ಹಂತಕ್ಕೆ ಪ್ರವೇಶಿಸಿರುವುದನ್ನು ಆರಂಭದಲ್ಲೆ ತಿಳಿದರೆ ಮೂರನೆಯ ಹಂತಕ್ಕೆ ಪ್ರವೇಶಿಸುವುದನ್ನು ತಡೆಗಟ್ಟಲು ಸಾಧ್ಯವಿದೆ.
ಗಮನಿಸಿ;- ಎರಡನೆಯ ಹಾಗೂ ಮೂರನೆಯ ಹಂತದಲ್ಲಿ ವೈದ್ಯಕೀಯ ಸುಪರ್ದಿ ಇಲ್ಲದೆ ಚಿಕಿತ್ಸೆ ಸಾಧ್ಯವಿಲ್ಲ. ಆದುದರಿಂದ ಕೊರೊನಾ ತಗಲಿರುವುದನ್ನು ಆರಂಭದಲ್ಲೇ ತಿಳಿದು, ಸೂಕ್ತ ಅನುಪಾನ ಚಿಕಿತ್ಸೆಯನ್ನು ಮೊದಲ ಹಂತದಲ್ಲಿ ಅನುಸರಿಸಿ, ಎರಡನೆಯ ಹಂತದಲ್ಲಿ ಖಂಡಿತವಾಗಿಯೂ ವೈದ್ಯರ ಸಲಹೆ ಪಡೆಯುತ್ತಿದ್ದು ಜಾಗರೂಕರಾಗಿರಿ.
ಯಾವುದೇ ಚಿಹ್ನೆಗಳು ಕಂಡುಬಂದರೆ ನಾಳೆ ಎನ್ನದೆ ಇಂದೇ ಚಿಕಿತ್ಸೆ ಗೆ ಒಳಗಾಗಿರಿ  ಹಾಗೂ  ಮೂರನೆಯ ಹಂತವನ್ನು ದೂರವಿಡಿ. ಕೊರೊನಾ ಸಾಂಕ್ರಾಮಿಕವನ್ನು ಗೆಲ್ಲಲು ಇದೊಂದೇ ಮಂತ್ರ  “ನನಗೆ ಕೊರೊನಾ ಬರಬಾರದು, ನನ್ನಿಂದ ಇನ್ನೊಬ್ಬರಿಗೆ ಹರಡಬಾರದು”

 
 
 
 
 
 
 
 
 
 
 

Leave a Reply