ವಿಶ್ವ ಮಧುಮೇಹ ದಿನ – ಡಾ. ವಿಜಯ್ ನೆಗಳೂರ್

ಪ್ರತಿ ವರ್ಷ ನ.14 ರಂದು ವಿಶ್ವ ಮಧುಮೇಹ ದಿನ ಎಂದು ಆಚರಿಸಿ ಮಧುಮೇಹ ರೋಗದ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. 

ನ.14 ರಂದು ಇನ್‍ಸುಲಿನ್ ಕಂಡು ಹಿಡಿದ ಶ್ರೀ ಸರ್ ಪ್ರೆಡ್ರಿಕ್ ಬಂಟಿಂಗ್ ಇವರು ಹುಟ್ಟಿದ ದಿನವಾಗಿದೆ. 2006 ರಲ್ಲಿ ಈ ಆಚರಣೆಯನ್ನು ಜಾರಿಗೆ ತರಲಾಗಿತ್ತು. 2021 ನವೆಂಬರ್ 14 ರ ಈ ಆಚರಣೆಯ ಧ್ಯೇಯವಾಕ್ಯ ‘’ಡಯಾಬಿಟಿಸ್ ಕೇರ್‌ಗೆ ಪ್ರವೇಶ – ಈಗ ಇಲ್ಲದಿದ್ದರೆ, ಯಾವಾಗ?” ಎಂಬುದಾಗಿದೆ.

ಲಕ್ಷಣಗಳು

ಮನುಷ್ಯನ ದೇಹದಲ್ಲಿ ಇನ್ಸುಲಿನ್‌ ಸರಿಯಾಗಿ ಉತ್ಪಾದನೆಯಾಗದಿರುವ ಸಮಸ್ಯೆಯೇ ಮಧುಮೇಹ. ವ್ಯಾಯಾಮ, ಆಹಾರ ಪದ್ಧತಿ, ಮಾನಸಿಕ ಒತ್ತಡ ತಗ್ಗಿಸಿಕೊಳ್ಳುವ ಮೂಲಕ ಇದನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು. ಆ ಮೂಲಕ ಸಾಮಾನ್ಯರಂತೆ ಜೀವನ ನಡೆಸಬಹುದು”

ಮಧುಮೇಹ ರೋಗದಿಂದಾಗಬಹುದಾದ ತೊಂದರೆಗಳು

ಇತರ ಸಾಮಾನ್ಯ ಮಂದಿಗೆ ಹೋಲಿಸಿದಲ್ಲಿ ಮಧುಮೇಹಿಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ತೊಂದರೆಗಳು ಈ ರೀತಿ ಇದೆ.

1. ಕುರುಡುತನ ಅಥವಾ ಅಂಧತ್ವ ಕಾಣಿಸಿಕೊಳ್ಳುವ ಅಪಾಯ 25ರಷ್ಟು ಜಾಸ್ತಿ.

2. ಹೃದಯಾಘಾತದ ಅಪಾಯ ಎರಡರಿಂದ ಮೂರು ಪಟ್ಟು ಹೆಚ್ಚು.

3. ಲಕ್ವ (ಪಕ್ಷಪಾತ) ಹೊಡೆಯುವ ಸಾಧ್ಯತೆ ಸುಮಾರು ಎರಡು ಪಟ್ಟು ಜಾಸ್ತಿ.

4. ಮೂತ್ರಪಿಂಡಗಳ ವೈಕಲ್ಯಕ್ಕೆ ತುತ್ತಾಗುವ ಸಾಧ್ಯತೆ.

5. ಗ್ಯಾಂಗ್ರಿನ್‍ನಿಂದಾಗಿ (ಕಾಲು, ಕೈ ಬೆರಳುಗಳು ಮತ್ತು ಕಾಲ್ಬೆರಳು ಕೊಳೆಯುವಿಕೆ). ಸರಿಯಾದ ನಿಯಂತ್ರಣವಿಲ್ಲದ ಮಧುಮೇಹದಿಂದಾಗಿ ಕ್ಷಣ ಕ್ಷಣಕ್ಕೂ ಜೀವಕೋಶಗಳಿಗೆ ಹಾನಿಯಾಗಿ ಹೃದಯ, ಕಣ್ಣು, ಮೆದುಳು ಮೂತ್ರಪಿಂಡ, ನರಮಂಡಲಕ್ಕೆ ಹಾನಿ.

ಮಧುಮೇಹ ನಿಯಂತ್ರಿಸುವುದು ಹೇಗೆ?

1. ನಿರಂತರ ಮತ್ತು ನಿಯಮಿತ ವ್ಯಾಯಾಮ ಮಧುಮೇಹ ನಿಯಂತ್ರಣಕ್ಕೆ ಅತೀ ಅಗತ್ಯ. ವ್ಯಾಯಾಮ ಮಾಡಿದಾಗ ಮಾಂಸಖಂಡಗಳು ಮತ್ತು ಸ್ನಾಯುಗಳು ಕ್ರಿಯಾಶೀಲವಾಗುತ್ತದೆ 

2. ನೀವು ಸೇವಿಸುವ ಆಹಾರ ಯಾವತ್ತೂ ಕೊಬ್ಬು, ಪ್ರೊಟೀನ್ ಮತ್ತು ಪಿಷ್ಟಗಳಿಂದ ಕೂಡಿದ್ದು ಸಮತೋಲಿನ ಆಹಾರವಾಗಿರಬೇಕು. ಆಹಾರವು ಅನ್ನ ಸತ್ವಗಳು (ವಿಟಮಿನ್‍ಗಳು) ಮತ್ತು ಖನಿಜಗಳಿಂದ ಕೂಡಿರಬೇಕು. ನಿಮ್ಮ ಆಹಾರ ಸೊಪ್ಪು, ಹಸಿರು ತರಕಾರಿ, ಕಾಳು ಬೇಳೆಗಳಿಂದ ಕೂಡಿರಲಿ. ಸಂಸ್ಕರಿತ ಕೃತಕ ಆಹಾರ ಬೇಡವೇ ಬೇಡ. ಮೂಲಾಹಾರಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಕೊಬ್ಬಿನಾಂಶ ಜಾಸ್ತಿ ಇರುವ ಕರಿದ ತಿಂಡಿಗಳು ಇರುವ ತಿನಿಸುಗಳಿಗೆ ಕಡಿವಾಣ ಹಾಕಬೇಕು.

3. ಮಾನಸಿಕ ಒತ್ತಡ ಕಡಿಮೆಯಾಗುವ ಜೀವನ ಶೈಲಿಯನ್ನು ರೂಢಿಸಿಕೊಳ್ಳಬೇಕು. ದೇಹಕ್ಕೆ ಮತ್ತು ಮನಸ್ಸಿಗೂ ಹಿತವಾದ ಸಂಗೀತ ಆಲಿಸುವುದು, ಯೋಗ, ಧ್ಯಾನ, ಪ್ರಾಣಯಾಮ ಇತ್ಯಾದಿ.

4. ತಜ್ಞ ವೈದ್ಯರ ಸಲಹೆಯಂತೆ ಚಾಚುತಪ್ಪದೆ ಔಷಧಿಯನ್ನು ಸೇವಿಸಬೇಕು. ಒಟ್ಟಿನಲ್ಲಿ ಚಿಕಿತ್ಸೆಯ ಉದ್ದೇಶ ರೋಗವನ್ನು ಗುಣಪಡಿಸುವುದು ಆಗಿರದೆ, ರೋಗವನ್ನು ನಿಯಂತ್ರಣದಲ್ಲಿಡುವುದಕ್ಕೆ ಹೆಚ್ಚಿನ ಆದ್ಯತೆ ಇರುತ್ತದೆ. ರಕ್ತದಲ್ಲಿನ ಸಕ್ಕರೆಯ ಅಂಶವನ್ನು ನಿಯಂತ್ರಿಸಿದಲ್ಲಿ ಬರಬಹುದಾದ ಎಲ್ಲಾ ಅಡ್ಡ ಪರಿಣಾಮಗಳನ್ನು ಮತ್ತು ಅಪಾಯವನ್ನು ತಡೆಗಟ್ಟಬಹುದು.

 
 
 
 
 
 
 
 
 
 
 

Leave a Reply