ರಕ್ತ ಹೀರುವ ಮಿತ್ರ ಜಿಗಣೆ~  ಡಾ.ರಾಘವೇಂದ್ರ ಹೆಚ್.ಪಿ.

ಆಯುರ್ವೇದ ಜಗತ್ತಿನ ಅತ್ಯಂತ ಪುರಾತನ ವೈದ್ಯಕೀಯ ಶಾಸ್ತ್ರ. ಇದರಲ್ಲಿ ಪ್ರಧಾನವಾಗಿ 8 ಅಂಗ (branches)ಗಳಿವೆ. ಅವುಗಳು ಯಾವುದೆಂದರೆ ಕಾಯ ಚಿಕಿತ್ಸ (medicine), ಬಾಲ ಚಿಕಿತ್ಸೆ (ಕೌಮಾರಭೃತ್ಯ/pediatrics), ಗ್ರಹ ಚಿಕಿತ್ಸೆ, ಊರ್ಧ್ವಂಗ (ಶಲಾಕ್ಯ/ಕಣ್ಣು, ಕಿವಿ, ಮೂಗು ಮತ್ತು ಗಂಟಲು ಚಿಕಿತ್ಸೆ/opthalmology and ENT), ಶಲ್ಯ ತಂತ್ರ (ಶಸ್ತ್ರ ಚಿಕಿತ್ಸೆ/surgery), ಅಗದ ತಂತ್ರ /toxicology, ರಸಾಯನ /Geriatrics ಮತ್ತು ವಾಜಿಕರಣ/Aphrodisiacs ಎಂದು ವಿಂಗಡಿಸಲಾಗಿದೆ.
ಇದರಲ್ಲಿ ಚಿಕಿತ್ಸೆಯನ್ನು ಶೋಧನ ಮತ್ತು ಶಮನ ಎಂದು ಪ್ರಮುಖವಾಗಿ ವಿಂಗಡಿಸಲಾಗಿದೆ.ಶೋಧನ ಚಿಕಿತ್ಸೆಯಿಂದ ಶರೀರದಲ್ಲಿರುವ ದುಷ್ಟ ದೋಷಗಳನ್ನು ಹೊರಹಾಕಲಾಗುವುದು.ಯಾವುದೇ ರೋಗಕ್ಕೆ ಅಭ್ಯಂತರ ಮಾರ್ಗದಲ್ಲಿ ಔಷಧಿ ನೀಡುವ ಮುನ್ನ ದೂಷಿತ ದೋಷಗಳನ್ನು ಹೊರಹಾಕಿ ಶರೀರ ಶುದ್ಧವಾದ ನಂತರವಷ್ಟೇ ಇತರ ಶಮನೌಷಧಿಗಳು ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಾಧ್ಯ. ಶೋಧನ ಚಿಕಿತ್ಸೆಗಳಾದ ವಮನ,ವಿರೇಚನ,ಬಸ್ತಿ,ನಸ್ಯ ಹಾಗು ರಕ್ತ ಮೋಕ್ಷಣ.

ಶಸ್ತ್ರ ಚಿಕಿತ್ಸೆಯ ಪಿತಾಮಹ ಆಚಾರ್ಯ ಸುಶ್ರುತರು ಶಲ್ಯ ತಂತ್ರ(surgery) ಹಾಗು ತಾವು ರಚಿಸಿದ ಸುಶ್ರುತ ಸಂಹಿತದಲ್ಲಿ ರಕ್ತಮೋಕ್ಷಣಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಿದ್ದಾರೆ.ರಕ್ತಮೋಕ್ಷಣದಲ್ಲಿ ದುಷ್ಟ ರಕ್ತಸ್ರಾವ ಮಾಡಿ ದೂಷಿತ ರಕ್ತವನ್ನು ಹೊರತೆಗಯಲಾಗುವುದು.

ರಕ್ತಮೋಕ್ಷಣವನ್ನು ಶಸ್ತ್ರಗಳನ್ನು ಬಳಸಿ ಹಾಗೂ ಶಸ್ತ್ರಗಳನ್ನು ಬಳಸದೆ ಮಾಡಲಾಗುತ್ತದೆ.ಶಸ್ತ್ರಗಳನ್ನು ಬಳಸದೆ ಜಿಗಣೆಯ ಮುಖಾಂತರ ಕೆಟ್ಟ ರಕ್ತವನ್ನು ಹೊರತೆಗೆಯುವುದು ವಿಶೇಷವಾಗಿದೆ. ಈ ಚಿಕಿತ್ಸೆಯನ್ನು ಜಲೌಕಾವಚರಣ ಎನ್ನುವರು. ಇದು ಆಧುನಿಕ ದಿನಗಳಲ್ಲಿ LEECH THERAPY/ HIRUDO  THERAPY(ಲೀಚ್/ಹಿರುಡೊ ಥೆರಪಿ)ಎಂದು ಪ್ರಸಿದ್ಧವಾಗಿದೆ..
ರಕ್ತಮೋಕ್ಷಣ ಮತ್ತು ಜಿಗಣೆ: : ನದಿಯ ದಡದಲ್ಲಿ, ಜಲಾಶಯ, ಕೃಷಿ ಭೂಮಿಗಳಲ್ಲಿ ಮತ್ತು ತೇವಾಂಶ ಇರುವ ತಾಣಗಳಿಗೆ ತೆರಳಿದಾಗ ತಮಗೆ ಅರಿವಿಗೆ ಬಾರದಂತೆ ಜಿಗಣೆಗಳು ಕಾಲಿಗೆ ಅಂಟಿಕೊಂಡು ರಕ್ತ ಹೀರುತ್ತದೆ. ಇದಕ್ಕ ಕಾರಣ ಅದರ ನೋವು ಇಲ್ಲದೆ ರಕ್ತ ಹೀರುವ ಪ್ರವೃತ್ತಿ. ಕಾಲಿಗೆ ಅಂಟಿಕೊಂಡು ರಕ್ತ ಹೀರುವ ಈ ಜಿಗಣೆ ಅಪಾಯಕಾರಿ ಅಲ್ಲದಿದ್ದರೂ ಭಯ ಪಡುವವರೆ ಹೆಚ್ಚು. ಆದರೆ ಇದೇ ಜಿಗಣೆ ಔಷಧಿಯಾಗಿ ಹಲವಾರು ಕಾಯಿಲೆಗಳನ್ನು ಗುಣ ಪಡಿಸುವುದು.
ಜಿಗಣೆಗಳಿಗೆ ನೀರೆ ಆಯಸ್ಸು ಆದ್ದರಿಂದ ಜಲಾಯುಕಗಳೆಂದು ನೀರೇ ಅದರ ವಾಸಸ್ಥಾನವಾದ್ದರಿಂದ ಜಲೌಕ ಎಂದು ಹೆಸರು. ಜಿಗಣೆಯ ಮುಖಾಂತರ ಕಾಯಿಲೆ ಇರುವ ಜಾಗದಿಂದ ಕೆಟ್ಟ ರಕ್ತವನ್ನು ಹೊರ ತೆಗೆಯ ಲಾಗುವುದು. ಜಿಗಣೆಗಳಲ್ಲಿ ಎರಡು ವಿಧ ಸವಿಷ ಮತ್ತು ನಿರ್ವಿಷ (Hirudo-medicinalis). ಚಿಕಿತ್ಸೆಗಾಗಿ ನಿರ್ವಿಷ ಜಲೌಕಗಳನ್ನು ಬಳಸಲಾಗುತ್ತದೆ…

ವಿಧಾನ: ಸಂಗ್ರಹಣೆ ಮತ್ತು ಪೋಷಣೆ: ಸಂಗ್ರಹಿಸಲ್ಪಟ್ಟ ನಿರ್ವಿಷ ಜಿಗಣೆಗಳನ್ನು ಗಾಜಿನ ಅಥವಾ ಪ್ಲಾಸ್ಟಿಕ್ ಧಾರಣೆ (ಡಬ್ಬೀ) ಗಳಲ್ಲಿ ಶುದ್ಧ ಕ್ಲೋರಿನ್ ರಹಿತ ನೀರನ್ನು ಹಾಕಿ ಗಾಳಿಯ ಸಂಚಾರಕ್ಕಾಗಿ ಅದರ ಮುಚ್ಚಳಕ್ಕೆ ಚಿಕ್ಕರಂಧ್ರಗಳನ್ನು ಮಾಡಿ ಮುಚ್ಚಿಡಲಾಗುವುದು. ಮೂರು ದಿನಗಳಿಗೊಮ್ಮೆ ನೀರನ್ನು ಬದಲಾಯಿಸ ಲಾಗುವುದು..  ಆಹಾರ: ಜಿಗಣೆಗಳಿಗೆ ಆಹಾರವಾಗಿ ಪಾಚಿ, ಒಣಗಿದ ಮಾಂಸ, ಗಡ್ಡೆಗಳನ್ನು ಕತ್ತರಿಸಿ ನೀರಿನಲ್ಲಿ ಹಾಕಲಾಗುತ್ತದೆ.

ಪ್ರಯೋಗ: ಪೂರ್ವ ತಯಾರಿ: ಅವುಗಳನ್ನು ಉಪಯೋಗಿಸುವ ಮುನ್ನ 30 ನಿಮಿಷಗಳ ಕಾಲ ಅರಿಶಿಣದ ನೀರಿನಲ್ಲಿ ಹಾಕಿಡಲಾಗುವುದು. ಇದರಿಂದ ಜಿಗಣೆಯ ದೇಹದ ಶುದ್ಧಿಕರಣವಾಗುತ್ತದೆ.

ಪ್ರಧಾನ ಕರ್ಮ: ಕಾಯಿಲೆ ಇರುವ ಜಾಗದಲ್ಲಿ ಜಿಗಣೆಗಳನ್ನು ಕಚ್ಚಿಸಲಾಗುತ್ತದೆ. ಒಮ್ಮೆ 5-30 ಎಂಎಲ್ ಪ್ರಮಾಣದಷ್ಟು ರಕ್ತವನ್ನು ಹೀರುವ ಸಾಮರ್ಥ್ಯ ಜಿಗಣೆಗಳು ಹೊಂದಿರುತ್ತವೆ. ಪಶ್ಚಾತ್ ಕರ್ಮ: ದುಷ್ಟ ರಕ್ತವನ್ನು ಹೀರಿದ ನಂತರ ಸೈಂಧವ ಲವಣವನ್ನು ಹಾಕಿದರೆ ರಕ್ತವನ್ನು ಹೀರುವುದನ್ನು ನಿಲ್ಲಿಸುವುದು. ನಂತರ ಜಿಗಣೆಯನ್ನು ಅರಿಶಿಣದ ಮುಖಾಂತರ ದುಷ್ಟ ರಕ್ತವನ್ನು ವಾಂತಿ ಮಾಡಿಸಲಾಗುತ್ತದೆ. ರೋಗಿಯ ದೇಹದ ಮೇಲೆ ಜಿಗಣೆ ಕಚ್ಚಿರುವ ಜಾಗದಲ್ಲಿ ಅರಿಶಿಣವನ್ನು ಸಿಂಪಡಿಸಿ ಉಪಚರಿಸಲಾಗುವುದು.

ಇದು ಹೇಗೆ ಕೆಲಸ ಮಾಡುತ್ತದೆ?: ಕಾಯಿಲೆ ಇರುವ ಜಾಗದಿಂದ ದೋಷಪೂರಿತ ರಕ್ತವನ್ನು ಹೀರುದರಿಂದ ತಕ್ಷಣವೇ ಗಾಯ ಮತ್ತು ಊತವಿರುವ ಸ್ಥಾನಗಳಲ್ಲಿ ನೋವು ಕಡಿಮೆಯಾಗುತ್ತದೆ. ಜಿಗಣೆಯು ಮೊದಲು ಕಚ್ಚಿದಾಗ ಲಾಲಾರಸವನ್ನು ದೇಹದಲ್ಲಿ ಬಿಡುಗಡೆ ಮಾಡುತ್ತದೆ. ಇದು ಹಿರುಡಿನ್ (hirudin)ಎಂಬ ಪ್ರೋಟೀನ್ ಅಂಶವನ್ನು ಹೊಂದಿದೆ. ಇದರಿಂದ ಹೀರಿಕೊಳ್ಳುವ ರಕ್ತ ಹೆಪ್ಪುಗಟ್ಟುವುದಿಲ್ಲ. ಕಾಯಿಲೆ ಇರುವ ಜಾಗದಿಂದ ದೋಷಪೂರಿತ ರಕ್ತವನ್ನು ಹೀರಿಕೊಂಡು ರಕ್ತ ಸಂಚಾರ ವೃದ್ಧಿ ಮಾಡುವುದು.ಇದರಿಂದ ಕಾಯಿಲೆಯು ಶೀಘ್ರವೇ ಗುಣವಾಗುತ್ತದೆ..

ಯಾವ ರೋಗಕ್ಕೆ ಜಲೌಕಾ?: ರಕ್ತ ಹಾಗೂ ಚರ್ಮ ವಿಕಾರಗಳಿಗೆ ಇದು ಬಲು ಪರಿಣಾಮಕಾರಿ. ಇಸುಬು, ಸೊರಿಯಾಸಿಸ್, ವೇರಿಕೊಸ್, ಅಲ್ಸರ್, ಮೊಡವೆ, ಮಧುಮೇಹ ಗಾಯಗಳು ಮತ್ತು ಸಂಧಿ ನೋವು ಇತರೆ ಅಲರ್ಜಿಗಳಿಗೆ ಇದನ್ನು ಬಳಸಲಾಗುತ್ತದೆ. ಈ ರೀತಿಯಲ್ಲಿ ಜಿಗಣೆಯು ಮನುಷ್ಯ ಸ್ನೇಹಿ ಜೀವಿಯಾಗಿದೆ.ಅಗತ್ಯ ಉಳ್ಳವರು ಈ ಚಿಕಿತ್ಸೆಯನ್ನು ವೈದ್ಯರ ಸಲಹೆಯ ಮೇರೆಗೆ ಪಡೆಯಬಹುದಾಗಿದೆ..

ಡಾ.ರಾಘವೇಂದ್ರ ಹೆಚ್.ಪಿ.(ಇಂಟರ್ನ್ ವೈದ್ಯ)‌ ‌‌
ಮಾರ್ಗದರ್ಶಕರು : ಡಾ.ಗುರುರಾಜ ಡಿ, ವಿಭಾಗ ಮುಖ್ಯಸ್ಥರು,
ಶಲ್ಯ ತಂತ್ರ ವಿಭಾಗ, ಮುನಿಯಾಲು ಆಯುರ್ವೇದ ಕಾಲೇಜು, ಮಣಿಪಾಲ.

 
 
 
 
 
 
 
 
 
 
 

Leave a Reply