ಸಮಸ್ತ ಸ್ತ್ರೀ ಕುಲಕ್ಕೆ ಮಹಿಳಾ ದಿನಾಚರಣೆಯ ಶುಭಾಶಯಗಳು~ಡಾ.ವಾಣಿಶ್ರೀ ಐತಾಳ್, ಸಾಲಿಗ್ರಾಮ  

ಇಂದು ವಿಶ್ವದಾದ್ಯಂತ ಮಹಿಳಾ ದಿನಾಚರಣೆಯನ್ನು ಅತ್ಯಂತ ಹೆಮ್ಮೆಯಿಂದ ನಾವು ಆಚರಿಸಿಕೊಳ್ಳುತ್ತಿದ್ದೇವೆ. ಮಹಿಳೆಯರ ಅಂದಾಕ್ಷಣ ನಮಗೆ ನೆನಪಾಗುವುದು ಮಹಿಳೆಯ ವಿವಿಧ ರೂಪಗಳು. ಪ್ರತಿಯೊಂದು ರೂಪಕ್ಕೆ ಅದರದೇ ಆದ ಪ್ರಾಮುಖ್ಯತೆ ಇದೆ.

ತಾಯಿಯಾಗಿ ತಂಗಿಯಾಗಿ ಅಕ್ಕನಾಗಿ ಮಡದಿಯಾಗಿ ಮಗಳಾಗಿ ಹೀಗೆ ಹಲವು ರೂಪಗಳಲ್ಲಿ ಮಹಿಳೆ ಈ ಸಮಾಜದ ಜವಾಬ್ದಾರಿಯುತ ಸ್ಥಾನದಲ್ಲಿ ನಿರಂತರವಾಗಿ ಪೋಷಿಸುವ ಸಲಹುವ ಕಾರ್ಯ ಮಾಡುತ್ತಿದ್ದಾಳೆ. ಮನೆ ಅಂದಾಕ್ಷಣ ಅಲ್ಲಿ ಓರ್ವ ಮಹಿಳೆ ಇದ್ದಾಳೋ ಇಲ್ಲವೋ ಎನ್ನುವುದು ಮನೆಯ ಆವರಣ ನೋಡಿಯೇ ತಿಳಿದುಕೊಳ್ಳಬಹುದು.

ಇದು ಪುರುಷರನ್ನು ಅವಮಾನಿಸುವ ಅಥವಾ ಅಪಹಾಸ್ಯ ಮಾಡುವ ವಿಚಾರಕ್ಕಾಗಿ ಹೇಳುತ್ತಿಲ್ಲ. ಒಂದು ಮಹಿಳೆ ಮನೆಯಲ್ಲಿದ್ದಾಗ ಕಾಮನೆಯ ರೂಪ ಸ್ವರೂಪವೇ ಬೇರೆಯದಾಗಿರುತ್ತದೆ. ಮನೆಯಿಂದ ಹೊರಗೆ ತೆರಳುವ ಪತಿ ತಂದೆ ಅಣ್ಣ ತಮ್ಮ ಯಾರೇ ಇರಲಿ ಮನೆಯಲ್ಲಿನ ಹೆಣ್ಣು ಜೀವ ಮುಂಜಾನೆಯಿಂದ ಮಾಡುವ ತಯಾರಿಯಿಂದಲೇ ಕ್ಲಪ್ತ ಸಮಯಕ್ಕೆ ಕೆಲಸ ಕಾರ್ಯದಲ್ಲಿ ಸಾಮಾಜಿಕ ಚಟುವಟಿಕೆಯಲ್ಲಿ ಭಾಗಿಯಾಗಲು ಸಹಕಾರಿ.

ಆದರೆ ಕುಟುಂಬದ ಜವಾಬ್ದಾರಿಯ ಜೊತೆಗೆ ಮಹಿಳೆ ತನ್ನ ಆರೋಗ್ಯದ ಕಾಳಜಿಯನ್ನು ಮರೆ ಯುತ್ತಿರುವುದು ಬೇಸರದ ಸಂಗತಿ. ಇದು ಗ್ರಹಿಣಿ ಅಥವಾ ಉದ್ಯೋಗಸ್ಥ ಮಹಿಳೆಗೆ ಬೇರೆ ಯಾಗಿಲ್ಲ. ಯಾಕೆಂದರೆ ಮನೆಯವರ ಸುಖ-ದುಃಖ ನೋಡಿಕೊಳ್ಳುವ ಮಹಿಳೆ ತನ್ನ ಆರೋಗ್ಯ ಕಾಳಜಿಯನ್ನು ಯಾವತ್ತು ಮರೆಯಬಾರದು.

ಒಂದು ದಿನ ಮಹಿಳೆ ಅನಾರೋಗ್ಯಕ್ಕೀಡಾದರೆ ಆ ಕುಟುಂಬ ಪಡುವ ಪಾಡು ಹೇಳತೀರದು. ಹಾಗಾಗಿ ಆರೋಗ್ಯದ ಕುರಿತು ಮಹಿಳೆಯ ಇಂದಿನ ಯುಗದಲ್ಲಿ ಅತಿ ಹೆಚ್ಚು ಗಮನ ಹರಿಸ ಬೇಕಾದ ಅಗತ್ಯತೆ ಇದೆ. ಆರೋಗ್ಯ ಎಂದರೇನು ಎನ್ನುವ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ನಿಮ್ಮ ದೇಹದಲ್ಲಿ ಆಗುವ ವಯೋಸಹಜ ಬದಲಾವಣೆಗಳು ಮತ್ತು ಸಣ್ಣಪುಟ್ಟ ಬದಲಾವಣೆಗಳನ್ನು ಗಮನ ಹರಿಸಿ ಅದಕ್ಕೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆದುಕೊಳ್ಳಬೇಕಾದ ಅಗತ್ಯತೆಯನ್ನು ಮಹಿಳೆಯರು ಮರೆಯಬಾರದು.

ದಿನನಿತ್ಯ ವ್ಯಾಯಾಮವನ್ನು ಕಡ್ಡಾಯವಾಗಿ ಮಾಡುವ ಮೂಲಕ ಸಣ್ಣಪುಟ್ಟ ಆರೋಗ್ಯ ಸಮಸ್ಯೆ ಯಿಂದ ಸದಾ ದೂರವಿರಲು ಸಾಧ್ಯ. ಹಾಗಾಗಿ ವ್ಯಾಯಾಮದ ಕುರಿತು ಅಸಡ್ಡೆ ಯಾವತ್ತೂ ಮಹಿಳೆಯರು ಮಾಡಬಾರದು ದೈನಂದಿನ ಕೆಲಸವೇ ವ್ಯಾಯಾಮ ನೀಡುತ್ತದೆ ಎಂದು ಸುಮ್ಮನಾಗುವುದು ಸರಿಯಲ್ಲ. ಅಲ್ಲದೆ ವ್ಯಾಯಾಮ ಎಂದಾಕ್ಷಣ ಭಾರ ಎತ್ತುವ ಕಲ್ಪನೆ ಇದ್ದರೆ ಇಂದೆ ಅದನ್ನು ಮನಸ್ಸಿನಿಂದ ತೆಗೆದುಹಾಕಿ.

ಉಸಿರಾಟ ಮತ್ತು ಹೃದಯ ಬಡಿತವನ್ನು ಸಮತೋಲನದಲ್ಲಿರುವ ವ್ಯಾಯಾಮಗಳು ಮಹಿಳೆಗೆ ಅತಿ ಅಗತ್ಯ‌. ಹಾಗಾಗಿ ಯಾವುದೇ ಮುಲಾಜಿಗೆ ಒಳಗಾಗದೆ ನಿತ್ಯವು ವ್ಯಾಯಾಮ ಮಾಡಿ. ಆಯುರ್ವೇದದಲ್ಲಿ ಸಾಕಷ್ಟು ಆರೋಗ್ಯವರ್ಧಕಗಳು, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಔಷಧಿಗಳು ಸಿಗುತ್ತದೆ. ಇದರ ಬಳಕೆಯಿಂದ ಆರೋಗ್ಯದ ಜೊತೆಗೆ ರೋಗನಿರೋಧಕ ಶಕ್ತಿಯು ವೃದ್ಧಿಸುತ್ತದೆ.

ಹಾಗಾಗಿ ವಿಶ್ವ ಮಹಿಳಾ ದಿನಾಚರಣೆ ದಿನವಾದ ಇಂದಿನಿಂದಲೇ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿವಹಿಸಿ ನಿತ್ಯ ವ್ಯಾಯಾಮ ಮಾಡಿ ಸದೃಡ ಶರೀರ ಜೊತೆಗೆ ಸುಂದರ ಸಂಸಾರ ನಿಮ್ಮದಾಗಲಿ.

 
 
 
 
 
 
 
 
 
 
 

Leave a Reply