ಮಾದಕ ವಸ್ತುಗಳ ಹಿಂದೆ ಬೀಳದಿರಿ: ಡಾ. ಭಂಡಾರಿ 

ಉಡುಪಿ: ಇಂದು ಯುವಜನರನ್ನು ಅತಿಯಾಗಿ ಪೀಡಿಸುತ್ತಿರುವುದು ಮಾದಕ ವಸ್ತುಗಳ ಬಳಕೆ. ಕ್ಷಣಿಕ ಸುಖಕ್ಕಾಗಿ ಯುವ ಸಮುದಾಯ ಅದಕ್ಕೆ ಬಲಿಯಾಗುತ್ತಿದೆ. ಇದರಿಂದ ಅವರ ಜೀವನವೇ ದುರಂತದತ್ತ ಸಾಗಲಿದೆ. ವಿದ್ಯಾರ್ಥಿಗಳು ಈ ಬಗ್ಗೆ ಹೆಚ್ಚು ಜಾಗೃತರಾಗಬೇಕೆಂದು ಉಡುಪಿಯ ಡಾ. ಎ. ವಿ. ಬಾಳಿಗ ಸ್ಮಾರಕ ಆಸ್ಪತ್ರೆಯ ಖ್ಯಾತ ಮನೋವೈದ್ಯ ಡಾ.ಪಿ. ವಿ. ಭಂಡಾರಿ ಹೇಳಿದರು. 
ಅವರು ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶ ಹಾಗೂ ದೈಹಿಕ ಶಿಕ್ಷಣ ವಿಭಾಗಗಳು ಕಾಲೇಜಿನ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರಿಗಾಗಿ ಏರ್ಪಡಿಸಿದ್ದ ಮಾದಕ ವಸ್ತುಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮದ ನೇರ ಪ್ರಸಾರದಲ್ಲಿ ಮಾತನಾಡಿದರು. 
ಒತ್ತಡಗಳ ಬದುಕಿನ ನಡುವೆ ನೆಮ್ಮದಿಯನ್ನು ಹುಡುಕುವ ಭರದಲ್ಲಿ ಇಂಥ ಅಭ್ಯಾಸಗಳು ಯುವ ಸಮುದಾಯವನ್ನು ಆಕರ್ಷಿಸುತ್ತವೆ. ಒಮ್ಮೆ ಇದರ ಚಟಕ್ಕೆ ಬಲಿಯಾದರೆ ಅದರಿಂದ ಹೊರಬರುವುದು ಸುಲಭವಲ್ಲ. ಹಾಗಾಗಿ ಈ ಕುರಿತು ವಿದ್ಯಾರ್ಥಿಗಳಲ್ಲಿ ಶಿಕ್ಷಕರು ಹಾಗೂ ಪೋಷಕರು ಸರಿಯಾದ ಅರಿವು ಮೂಡಿಸಬೇಕು ಎಂದು ಅವರು ಹೇಳಿದರು. 
ಕಾಲೇಜಿನ ಪ್ರಾಂಶುಪಾಲ ಡಾ. ರಾಘವೇಂದ್ರ .ಎ. ಆಂತರಿಕ ಗುಣಮಟ್ಟ ಭರವಸೆ ಕೋಶದ ಸಂಯೋಜಕ ಡಾ. ಪ್ರಕಾಶ್ ರಾವ್ ಹಾಗೂ ಶಿಕ್ಷಕರು ಉಪಸ್ಥಿತರಿದ್ದರು. ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಶ್ರೀ ಸುಕುಮಾರ್ ಸ್ವಾಗತಿಸಿದರು. ವಾಣಿಜ್ಯ ವಿಭಾಗದ ಮಧುಲಿಕಾ ವಂದಿಸಿದರು.
 
 
 
 
 
 
 
 
 
 
 

Leave a Reply