ಉಡುಪಿ ಫೆಬ್ರವರಿ 8 (ಕರ್ನಾಟಕ ವಾರ್ತೆ): ಜಿಲ್ಲೆಯ ಫ್ರಂಟ್ಲೈನ್ ವರ್ಕರ್ಸ್ಗಳಿಗೆ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಸೋಮವಾರ ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಜಿಲ್ಲಾಧಿಕಾರಿ ಜಿ. ಜಗದೀಶ್ ತಾವು ಸ್ವತಃ ಕೋವಿಶೀಲ್ಡ್ ಲಸಿಕೆ ಪಡೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಜಿಲ್ಲೆಯಲ್ಲಿ ಒಟ್ಟು 4040 ಮಂದಿ ಫ್ರಂಟ್ಲೈನ್ ವರ್ಕರ್ಸ್ಗಳಿಗೆ ಕೋವಿಡ್ ಲಸಿಕೆ ನೀಡುವ ಗುರಿ ಹೊಂದಿದ್ದು, ಇದರಲ್ಲಿ ಶೇ.100 ಗುರಿ ಸಾಧಿಸಲಾಗುವುದು. ಸೋಮವಾರ ಉಡುಪಿ, ಕುಂದಾಪುರ, ಕಾರ್ಕಳದ 593 ಜನರಿಗೆ ಲಸಿಕೆಯನ್ನು ನೀಡುವ ಗುರಿಯನ್ನು ಹೊಂದಿದ್ದೇವೆ. ಕೋವಿಡ್ ಲಸಿಕೆಯನ್ನು ಯಾವುದೇ ಭಯ ಇಲ್ಲದೆ ತಗೆದುಕೊಳ್ಳಬೇಕು.
ಸಾರ್ವಜನಿಕರಲ್ಲಿ ಇರುವಂತಹ ಅನುಮಾನಗಳನ್ನು ಹೋಗಲಾಡಿಸಲು ವಿವಿಧ ಕಾರ್ಯ ಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಜಿ ಜಗದೀಶ್ ಹೇಳಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ವೈ. ನವೀನ್ ಭಟ್, ಎ.ಎಸ್.ಪಿ ಕುಮಾರ ಚಂದ್ರ ಮತ್ತು ಉಡುಪಿ ತಾಲೂಕು ತಹಶೀಲ್ದಾರ್ ಪ್ರದೀಪ್ ಎಸ್ ಕುರುಡೇಕರ್, ಪೌರಾಯುಕ್ತ ಉದಯ ಶೆಟ್ಟಿ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಕಿರಣ್ ಫಡ್ನೇಕರ್ ಸೇರಿದಂತೆ ಪೊಲೀಸ್, ನಗರಾಭಿವೃಧ್ದಿ, ಕಂದಾಯ, ಗ್ರಾಮೀಣಾಭಿವೃಧ್ದಿ ಮತ್ತು ಪಂಚಾಯತ್ ರಾಜ್ ಹಾಗೂ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ವಿವಿಧ ಅಧಿಕಾರಿಗಳು ಕೂಡಾ ಲಸಿಕೆ ಪಡೆದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಸರ್ಜನ್ ಮಧುಸೂದನ್ ನಾಯಕ್, ಡಿಹೆಚ್ಓ ಡಾ.ಸುಧೀರ್ ಚಂದ್ರ ಸೂಡಾ, ಡಾ.ಪ್ರಶಾಂತ್ ಭಟ್, ಡಾ.ಪ್ರೇಮಾನಂದ್, ಡಾ.ಶ್ರೀರಾಮ ರಾವ್, ಡಾ.ಎಂ. ಜಿ.ರಾಮ, ತಾಲೂಕು ಆರೋಗ್ಯಾಧಿಕಾರಿ ಡಾ.ನಾಗರತ್ನ ಸೇರಿದಂತೆ ಮತ್ತಿತರರು ಉಪಸ್ಥಿತ ರಿದ್ದರು.