ಕಸ್ತೂರ್ಬಾ ಆಸ್ಪತ್ರೆಯ ರಕ್ತ ಕೇಂದ್ರದ ಗುಣಮಟ್ಟಕ್ಕೆ ಎನ್ಎಬಿಹೆಚ್ ಮಾನ್ಯತೆ

ಮಣಿಪಾಲ: ಕಸ್ತೂರ್ಬಾ ಆಸ್ಪತ್ರೆ ರಕ್ತ ಕೇಂದ್ರವು “ಆಸ್ಪತ್ರೆಗಳು ಮತ್ತು ಆರೋಗ್ಯ ಪೂರೈಕೆದಾರರಿಗಾಗಿ ರಾಷ್ಟ್ರೀಯ ಮಾನ್ಯತಾ ಮಂಡಳಿ (NABH)”, ಭಾರತದ ಗುಣಮಟ್ಟದ ಮಂಡಳಿಯಿಂದ (ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾ) ಮಾನ್ಯತಾ ಪ್ರಮಾಣೀಕರಣವನ್ನು ಪಡೆದಿದೆ.ರಕ್ತದ ಗುಣಮಟ್ಟ ಮತ್ತು ಸುರಕ್ಷತೆಯು ಕಸ್ತೂರ್ಬಾ ಆಸ್ಪತ್ರೆ ರಕ್ತ ಕೇಂದ್ರದ ಆದ್ಯತೆಯಾಗಿದೆ. ಇದೀಗ ಗುಣಮಟ್ಟಕ್ಕೆ ಎನ್ಎಬಿಹೆಚ್ ಮಾನ್ಯತೆಯ ಪ್ರಮಾಣಪತ್ರ ಲಭಿಸಿದ್ದು, ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಗುಣಮಟ್ಟ ಮತ್ತು ಮಾನ್ಯತೆಗಳ ಕಿರೀಟಕ್ಕೆ ಇನ್ನೊಂದು ಗರಿ ಸೇರಿದಂತಾಗಿದೆ. 

ಮಾಹೆ ಮಣಿಪಾಲದ ಸಹ ಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್ ಎನ್ಎಬಿಹೆಚ್(NABH) ಮಾನ್ಯತೆ ಪ್ರಮಾಣಪತ್ರವನ್ನು ಕಸ್ತೂರ್ಬಾ ಆಸ್ಪತ್ರೆ ರಕ್ತ ಕೇಂದ್ರದ ನಿರ್ದೇಶಕ ಡಾ.ಶಮೀ ಶಾಸ್ತ್ರಿಗೆ ಹಸ್ತಾಂತರಿಸಿದರು. ಇಡೀ ತಂಡದ ಪ್ರಯತ್ನವನ್ನು ಈ ಸಂದರ್ಭದಲ್ಲಿ ಶ್ಲಾಘಿಸಿದರು. ಮಾಹೆ ಮಣಿಪಾಲದ ಉಪಕುಲಪತಿ ಲೆI ಜI (ಡಾ) ಎಂ. ಡಿ. ವೆಂಕಟೇಶ್ ಅವರು ತಂಡವನ್ನು ಅಭಿನಂದಿಸಿ, ಗುಣಮಟ್ಟದ ಆರೋಗ್ಯ ಸೇವೆ ನೀಡುವಲ್ಲಿ ರಕ್ತ ವರ್ಗಾವಣೆ ಸೇವೆಗಳ ಪಾತ್ರವನ್ನು ಒತ್ತಿ ಹೇಳಿದರು. ಸಹ ಉಪಕುಲಪತಿ (ಆರೋಗ್ಯ ವಿಜ್ಞಾನ) ಡಾ. ಪಿ ಎಲ್ ಎನ್ ಜಿ ರಾವ್ ಅವರು “ಮಾನ್ಯತೆ ಪ್ರಮಾಣಪತ್ರವು ರಕ್ತ ಕೇಂದ್ರವು ನೀಡುವ ಗುಣಮಟ್ಟದ ಸೇವೆಗಳ ಪ್ರತಿಬಿಂಬವಾಗಿದೆ ಮತ್ತು ಇದು ನಿರಂತರ ಗುಣಮಟ್ಟದ ಸುಧಾರಣೆಯ ಪ್ರಕ್ರಿಯೆಯಾಗಿದೆ” ಎಂದರು.

ತಂಡದ ಕಾರ್ಯವನ್ನು ಶ್ಲಾಘಿಸಿ ಮಾತನಾಡಿದ ಕೆಎಂಸಿಯ ಡೀನ್ ಡಾ.ಶರತ್ ಕೆ ರಾವ್ “ಇದು ಶ್ರೇಷ್ಠತೆಯತ್ತ ಶ್ರಮಿಸಲು ಸಹಾಯ ಮಾಡುತ್ತದೆ. ರಕ್ತ ಪೂರಣ ವೈದ್ಯಕೀಯ ವಿಭಾಗವು ವೈದ್ಯಕೀಯ ವಿಕಾಸದ ಒಂದು ಶಾಖೆಯಾಗಿದೆ ಮತ್ತು ಮಣಿಪಾಲದ ಕಸ್ತೂರ್ಬಾ ಮೆಡಿಕಲ್ ಕಾಲೇಜ್ ಈ ಕ್ಷೇತ್ರದಲ್ಲಿ ಸ್ನಾತಕೋತ್ತರ ತರಬೇತಿ ಕಾರ್ಯಕ್ರಮವನ್ನು ಸಹ ನೀಡುತ್ತಿದೆ ”ಎಂದು ಹೇಳಿದರು.ರಕ್ತ ಕೇಂದ್ರದಲ್ಲಿ ಜಾರಿಗೆ ತರಲಾದ ಗುಣಮಟ್ಟದ ವ್ಯವಸ್ಥೆಯು ರಕ್ತದಾನಿಗಳಿಂದ ಹಿಡಿದು ರೋಗಿಗಳಿಗೆ ಪ್ರಾರಂಭವಾಗುವ ಸಂಪೂರ್ಣ ರಕ್ತ ಪೂರಣ ಸರಪಳಿಯನ್ನು ಒಳಗೊಳ್ಳುತ್ತದೆ ಎಂದು ಕಸ್ತೂರ್ಬಾ ಆಸ್ಪತ್ರೆಯ ನಿರ್ವಹಣಾಧಿಕಾರಿ ಶ್ರೀ ಸಿ ಜಿ ಮುತ್ತನ ಮತ್ತು ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ತಿಳಿಸಿದರು.

ಎನ್ಎಬಿಎಚ್ ಮಾನ್ಯತೆಯ ವ್ಯಾಪ್ತಿಯ ಕುರಿತು ಮಾತನಾಡಿದ ರಕ್ತ ಕೇಂದ್ರದ ನಿರ್ದೇಶಕಿ ಡಾ.ಶಮೀ ಶಾಸ್ತ್ರಿ, “ಕೇಂದ್ರವು, ರಕ್ತ ಕೇಂದ್ರದ ಮೂಲ ಸೇವೆಗಳ ಜೊತೆಗೆ, ವಿಶೇಷ ಘಟಕಗಳಾದ, ಲ್ಯುಕೋಡೆಪ್ಲೆಟೆಡ್, ವಿಕಿರಣಶೀಲ ರಕ್ತದಂತಹ ವಿಶೇಷ ರಕ್ತ ಉತ್ಪನ್ನಗಳು , ಅಪೆರೆಸಿಸ್ ಉತ್ಪನ್ನಗಳು, ಗ್ರ್ಯಾನುಲೋಸೈಟ್ಗಳು, ನ್ಯೂಕ್ಲಿಯಿಕ್ ಆಸಿಡ್ ಪರೀಕ್ಷಾ ಸೇವೆಗಳನ್ನು ನೀಡುತ್ತಿದೆ. ಮತ್ತು ಇಮ್ಯುನೊಹೆಮಾಟಾಲಜಿ ಮತ್ತು ರಕ್ತ ಪೂರಣ ಚಿಕಿತ್ಸಾ ವಿಧಾನಗಳನ್ನು ನಿರ್ವಹಿಸುತ್ತಿದೆ. ” ಎಂದರು.

 ಮಾಹೆ ಮಣಿಪಾಲದ ಕುಲಸಚಿವ ಡಾ.ನಾರಾಯಣ್ ಸಭಾಹಿತ್, ಆಸ್ಪತ್ರೆಯ ಗುಣಮಟ್ಟ ಅನುಷ್ಠಾನದ ಸಲಹೆಗಾರ ಡಾ.ಸುನೀಲ್ ಸಿ ಮುಂಡ್ಕೂರ್, ರಕ್ತ ಕೇಂದ್ರದ ಗುಣಮಟ್ಟ ವ್ಯವಸ್ಥಾಪಕ ಡಾ.ಗಣೇಶ್ ಮೋಹನ್ ಮತ್ತಿತರರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply